ಗದಗ

ಇಂದು ಎಂಇಎಸ್ ಶಾಸಕರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಪ್ರವೀಣ ಶೆಟ್ಟಿ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 1
ಕನ್ನಡಿಗರ ಭಾವನೆಗಳನ್ನು ಕೆರಳಿಸಿದ ಎಂಇಎಸ್ ಪುಂಡ ಶಾಸಕರ ವರ್ತನೆ ವಿರೋಧಿಸಿ ಡಿ. 2 ರಂದು ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಹೇಳಿದರು.
ಅವರು ಭಾನುವಾರ ಪಟ್ಟಣದಲ್ಲಿರುವ ಕರವೇ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕದಲ್ಲಿ ಭಾಷೆಯ ಹೆಸರಿನಲ್ಲಿ ಗಲಭೆ ಸೃಷ್ಠಿಸಿ ಭಯೋತ್ಪಾದನೆ ಹುಟ್ಟುಹಾಕಿ, ಬೆಳಗಾವಿ ಕನ್ನಡಿಗರ ಜನರ ದಾರಿ ತಪ್ಪಿಸುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಸಂಭಾಜಿ ಪಾಟೀಲರನ್ನು ಗಡಿಪಾರು ಮಾಡಬೇಕು ಎಂದರು. ನ. 25 ರಂದು ಕರವೇ ಕಾರ್ಯಕರ್ತರ ಮೇಲೆ ಎಂಇಎಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದು ಖಂಡನೀಯ. ಇದಕ್ಕೆ ಪೊಲೀಸ್ ಇಲಾಖೆ ಸಾಥ್ ಇದೆ ಎಂದು ಮೆಲ್ನೋಟಕ್ಕೆ ಕಾಣಿಸುತ್ತಿದೆ. ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಎಂಇಎಸ್ ಗಲಭೆಗಳನ್ನು ಸೃಷ್ಟಿಸುತ್ತಿದೆ. ಮಹಾಮೇಳಾವ ನಡೆಸಿ ಗಲಭೆ ಎಬ್ಬಿಸಿದ ಎಂಇಎಸ್ ಕಾರ್ಯಕರ್ತರನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಬೇಕು. ಬೆಳಗಾವಿಯಲ್ಲಿ ಮರಾಠಿ ಭಾಷೆಯಲ್ಲಿರುವ ನಾಮ ಫಲಕಗಳನ್ನು ಸರ್ಕಾರ ಕೂಡಲೇ ಕಿತ್ತೆಸೆಯಬೇಕು. ಇಲ್ಲದಿದ್ದರೆ ಕರುನಾಡಿನ ಕುಡಿಗಳು ಆ ಕೆಲಸ ಮಾಡಿ ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ ಎನ್ನುವುದನ್ನು ತೋರಿಸಬೇಕಾಗುತ್ತದೆ. ಈ ಸಮಯದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಡಾ. ಸರೋಜಿನಿ ಮಹಿಷಿ ಸಮಿತಿ ವರದಿ ಸಲ್ಲಿಸಿ ಅನೇಕ ವರ್ಷಗಳಾಗಿವೆ. ಅದನ್ನು ಡಿಸೆಂಬರ್ ಅಂತ್ಯದೊಳಗೆ ಅಂಗೀಕರಿಸಿ ಜಾರಿಗೆ ತರಬೇಕು. ಆ ಮೂಲಕ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಮುಚ್ಚಬಾರದು. ಗಡಿ ಪ್ರದೇಶದಲ್ಲಿರುವ ಕನ್ನಡ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಗಡಿನಾಡ ಕನ್ನಡಿಗರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕರ್ನಾಟಕ ಸರ್ಕಾರ ಒದಗಿಸಬೇಕು ಎಂದರು. ಕರವೇ ತಾಲೂಕು ಅಧ್ಯಕ್ಷ ಶರಣಪ್ಪ ಪೂಜಾರ, ಕರವೇ ಜಿಲ್ಲಾ ಉಪಾಧ್ಯಕ್ಷ ಕಳಕಪ್ಪ ಜಾಡ ಬಂಡಿ, ಮುತ್ತಣ್ಣ ಲಕ್ಕಲಟ್ಟಿ, ಅಲ್ಲಾಭಕ್ಷಿ ಮಚ್ಚಾಲಿ, ಬಸವರಾಜ ಅಂಗಡಿ, ಪಾಂಡುರಂಗ ಶೀಲವೇರಿ, ಬಿ.ಎ. ಅಂಗಡಿ, ಬುಡ್ಡಾ, ಸಂತೋಷ ಕಂದಗಲ್, ಮದನ ಕಲಾಲ, ಇಮಾಮ ಡಾಲಾಯತ, ರಮೇಶ ಕಲಾಲ ಮುಂತಾದವರು ಉಪಸ್ಥಿತರಿದ್ದರು.
ಮಕ್ಕಳಿಂದ ಹಣ ಸಂಗ್ರಹಣೆ ಸರಿಯಲ್ಲ
ಗದಗ:  ಲೊಯಲಾ ಶಾಲೆಯ ಮಕ್ಕಳು 2-3 ದಿನಗಳಿಂದ ಮನೆ ಮನೆಗೆ ಬಂದು ಪೀಡಿಸಿ ಹಣ ಸಂಗ್ರಹಿಸುತ್ತಿರುವರು. ಯಾರು ಹೆಚ್ಚು ಹಣ ಸಂಗ್ರಹಿಸುತ್ತಾರೆ ಅವರಿಗೆ ಮುಖ್ಯಾಧ್ಯಾಪಕರಿಂದ ಪ್ರಶಂಸಿಸಲಾಗುವುದು ಎಂದು ಮಕ್ಕಳು ಹೆಚ್ಚು ಹಣ ಸಂಗ್ರಹದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂಗ್ರಹಿಸಿರುವ ಹಣವನ್ನು ಬಡಮಕ್ಕಳಿಗೆ ಅನಾಥರಿಗೆ, ನೆರೆಪೀಡಿತರಿಗೆ, ದೀನ ದುರ್ಬಲರಿಗೆ ಕೊಡುವಂತಹ ವಿಚಾರ ಸರಿಯಿರಬಹುದು. ಆದರೆ ಬೆಳೆಯುವ ಸಸಿ ಮೊಳಕೆಯಲ್ಲಿ ನೋಡು ಎನ್ನುವಂತೆ ಮಕ್ಕಳು ಈ ತರಹ ಮನೆ ಮನೆಗೆ ಹೋಗಿ ಹಣ ಸಂಗ್ರಹಿಸುವುದು ಸರಳ ಕ್ರಮ ಎಂದೆನಿಸಿ ಮಕ್ಕಳು ಭಿಕ್ಷಾಟನೆಗೆ ತೊಡಗಿಕೊಂಡರೆ ಆಶ್ಚರ್ಯಪಡಬೇಕಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ಆದರೆ ಬಡಮಕ್ಕಳಿಗೆ, ಅನಾಥರಿಗೆ, ನೆರೆಪೀಡಿತರಿಗೆ ಸಹಕಾರಿಯಾಗಲಿ ಎನ್ನುವ ಉದ್ದೇಶಕ್ಕೆ ಈ ರೀತಿ ಮಕ್ಕಳನ್ನು ಮನೆ ಮನೆಗೆ ಹಣ ಸಂಗ್ರಹಿಸಲು ಕಳುಹಿಸುವುದು ಸರಿಯಾದ ಕ್ರಮವಲ್ಲ. ವಿದ್ಯಾರ್ಥಿಗಳು ಚಿಕ್ಕವಯಸ್ಸಿನಲ್ಲಿಯೇ ಹೀಗೆ ಮಾಡುವುದರಿಂದ ಹಣ ಬರುತ್ತದೆ ಎಂಬ ಮನೋಭಾವನೆಯನ್ನು ಬೆಳೆಸಿಕೊಂಡು ನಂತರದ ದಿನಗಳಲ್ಲಿ ಹಣ ಸಂಗ್ರಹಣೆ ಹೋಗಿ ಭಿಕ್ಷಾಟನೆಯಲ್ಲಿ ತೊಡಗುವ ಆತಂಕವಿದೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಇಂತಹ ಕಾರ್ಯಕ್ಕೆ ಕಡಿವಾಣ ಹಾಕಬೇಕು ಮತ್ತು ಸಂಬಂಧಪಟ್ಟ ಮುಖ್ಯಾಧ್ಯಾಪಕರಿಗೆ ತಿಳಿಹೇಳಬೇಕು.
ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿ
ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಸಂತಸದ ಸಂಗತಿ. ಆದರೆ, ಇಂದು ಸರ್ಕಾರವು ರೂಪಿಸುವ ಯೋಜನೆಗಳು ಸಾರ್ವಜನಿಕರಿಗೆ ತಲುಪುವುದರೊಳಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿಫಲತೆಯ ಹಾದಿಯನ್ನು ಹಿಡಿಯುತ್ತಿರುವುದು ನೋವಿನ ಸಂಗತಿ. ಸರ್ಕಾರವು ಯೋಜನೆಗಳನ್ನಷ್ಟೇ ರೂಪಿಸುತ್ತಿದೆಯೇ ಹೊರತು ಅವುಗಳು ಸಮರ್ಪಕವಾಗಿ ಅನುಷ್ಠಾನಗೊಂಡಿವೆಯೋ ಇಲ್ಲವೇ ಎಂಬುವುದನ್ನು ಪರೀಕ್ಷಿಸುವುದಿಲ್ಲ. ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಯೋಜನೆಗಳನ್ನೇನೋ ಜಾರಿಗೆ ತರುತ್ತಾರೆ. ಆದರೆ ಯೋಜನೆಗಳು ಅನುಷ್ಠಾನಗೊಳ್ಳುವಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯ. ಯೋಜನೆಗಳ ಶೀಘ್ರ, ಸಮರ್ಪಕ ಅನುಷ್ಠಾನಕ್ಕೆ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚಿಸಬೇಕು.ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಕೈಗೊಂಡಲ್ಲಿ ಕಾಮಗಾರಿಗಳು, ಯೋಜನೆಗಳು ತೀವ್ರಗತಿಯಲ್ಲಿ ಪೂರ್ಣಗೊಳ್ಳಲು ಸಾಧ್ಯವಿದೆ. ಕಾರಣ ಜನಪ್ರತಿನಿಧಿಗಳು ತಮ್ಮ ಅಧಿಕಾರಾವಧಿಯಲ್ಲಿ ಅಧಿಕಾರಿಗಳಿಗೆ ತಾವು ಪ್ರಾರಂಭಿಸುವ ಕಾಮಗಾರಿಗಳು ಹಾಗೂ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಕುರಿತು ವೀಕ್ಷಣೆ ನಡೆಸುವುದು ಸೇರಿದಂತೆ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಬೇಕು.
   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.