ಗ್ರಂಥಾಲಯಗಳಿಗೆ ಬೇಕಿದೆ ಕಾಯಕಲ್ಪ
ಕನ್ನಡಪ್ರಭ ವಾರ್ತೆ, ಗದಗ, ಫೆ. 5
ಸರ್ಕಾರ ರಾಜ್ಯದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಂಥಾಲಯವನ್ನೇನೊ ಸ್ಥಾಪಿಸಿದೆ. ಆದರೆ, ಸೂಕ್ತ ಕಟ್ಟಡ, ಸಿಬ್ಬಂದಿಗೆ ವೇತನ, ಪತ್ರಿಕೆ ಖರೀದಿ ಇತ್ಯಾದಿಗೆ ಸಕಾಲದಲ್ಲಿ ಹಣ ನೀಡದೆ, ಗ್ರಾಮೀಣ ಜನರ ಜ್ಞಾನವೃದ್ಧಿಗೆ ಕಾರಣವಾಗಬೇಕಾದ ಗ್ರಂಥಾಲಯಗಳು ನಿರ್ವಹಣೆ ಇಲ್ಲದೆ ಸೊರಗಿವೆ.
ರಾಜ್ಯದ 30 ಜಿಲ್ಲೆಗಳಲ್ಲಿ 5766 ಗ್ರಂಥಾಲಯಗಳಿದ್ದು, ಹೆಚ್ಚಿನವು ಉತ್ತಮ ಕಟ್ಟಡ ಹೊಂದಿಲ್ಲ. ಏಳು ವರ್ಷಗಳಲ್ಲಿ ಸರ್ಕಾರ ರು. 50 ಲಕ್ಷಕ್ಕೂ ಹೆಚ್ಚು ಹಣ ವಿನಿಯೋಗಿಸಿ ಗ್ರಂಥಾಲಯಗಳಿಗೆ 5,12,789 ಪುಸ್ತಕಗಳನ್ನು ಪೂರೈಸಿದೆ. ಆದರೆ ಅವುಗಳ ರಕ್ಷಣೆಗೆ ಸರ್ಕಾರ ಗಮನ ಹರಿಸದಿರುವ ಕಾರಣ ಧೂಳು ಹಾಗೂ ಮಳೆ ನೀರಿನಿಂದ ಹಾಳಾಗುತ್ತಿವೆ.
1988ರಲ್ಲಿ ಪ್ರಾರಂಭ: ಈ ಗ್ರಂಥಾಲಯಗಳನ್ನು ಸರ್ಕಾರ 1988ರಲ್ಲಿ ಪ್ರಾರಂಭಿಸಿತು. ಹಂತ ಹಂತವಾಗಿ ವಿಸ್ತರಿಸುತ್ತಾ ರಾಜ್ಯದ ಪ್ರತಿ ಗ್ರಾಪಂಗೆ ಒಂದರಂತೆ ಗ್ರಂಥಾಲಯ ಸ್ಥಾಪಿಸಿತು. ಆರಂಭದಲ್ಲಿ ಗ್ರಾಪಂಗಳು ನೀಡಿರುವ ಕಟ್ಟಡದಲ್ಲೇ ಅವು ಇನ್ನೂ ಮುಂದುವರಿದಿವೆ. ಅವುಗಳಿಗೆ ಸರಿಯಾದ ಕಿಟಕಿ, ಬಾಗಿಲುಗಳಿಲ್ಲ. ಪುಸ್ತಕ, ಪತ್ರಿಕೆಗಳನ್ನು ಓದಲು ಬರುವ ಸಾರ್ವಜನಿಕರಿಗೆ ಉತ್ತಮ ಬೆಳಕಿನ ವ್ಯವಸ್ಥೆಯೂ ಇಲ್ಲ.
ಸ್ಥಳೀಯ ಸಂಸ್ಥೆಗಳಿಂದ ಸಹಕಾರವಿಲ್ಲ: ರಾಜ್ಯದ 5630 ಗ್ರಾಪಂಗಳಲ್ಲಿ ಪ್ರತಿ ವರ್ಷವೂ ಗ್ರಂಥಾಲಯ ಶುಲ್ಕವೆಂದು ಶೇ. 6ರಷ್ಟು ಕರ ವಸೂಲಿ ಮಾಡಲಾಗುತ್ತದೆ. ಆದರೆ, ಸ್ಥಳೀಯ ಸಂಸ್ಥೆಗಳು ಈ ಹಣವನ್ನು ಇಲಾಖೆಗೆ ಸರಿಯಾಗಿ ಪಾವತಿಸುತ್ತಿಲ್ಲ. ಗ್ರಾಪಂಗಳಿಂದ ರು. 38 ಲಕ್ಷಕ್ಕೂ ಅಧಿಕ ಕರ ಗ್ರಂಥಾಲಯ ಇಲಾಖೆಗೆ ಸಂದಾಯವಾಗಿಲ್ಲ. ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಕೇಂದ್ರ ಗ್ರಂಥಾಲಯಗಳಿಗೂ ರು. 41 ಲಕ್ಷಕ್ಕೂ ಅಧಿಕ ಕರ ಬಾಕಿ ಇದೆ. ಇದರಿಂದ ಗ್ರಂಥಾಲಯಗಳು ದುರವಸ್ಥೆಯಲ್ಲಿವೆ.
ರು. 500 ಸಾಕಾಗುತ್ತಿಲ್ಲ: ಇಲಾಖೆ ದಿನಪತ್ರಿಕೆ ಹಾಗೂ ವಾರಪತ್ರಿಕೆ, ವಿದ್ಯುತ್ ಬಿಲ್ ಭರಿಸಲು ಪ್ರತಿ ತಿಂಗಳು ರು. 500 ನೀಡುತ್ತಿದೆ. ಆದರೆ, ಪತ್ರಿಕೆಗಳ ದರ ಹೆಚ್ಚಿದೆ. ಈ ಹಣದಲ್ಲಿ ಎಲ್ಲ ಪತ್ರಿಕೆ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲ ಪತ್ರಿಕೆಗಳನ್ನು ಗ್ರಂಥಾಲಯಕ್ಕೆ ತರಿಸದಿದ್ದರೆ ಸಾರ್ವಜನಿಕರು ತಕರಾರು ಮಾಡುತ್ತಾರೆ. ಸರ್ಕಾರ ತಕ್ಷಣವೇ ಈ ಅನುದಾನ ಹೆಚ್ಚಿಸಬೇಕು, ಅದನ್ನು ಪ್ರತಿ ತಿಂಗಳೂ ಪಾವತಿಸಬೇಕಿದೆ.
2010ರಲ್ಲೇ ಪ್ರಸ್ತಾವನೆ: ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕು. ಪ್ರತಿಯೊಂದು ಗ್ರಂಥಾಲಯಕ್ಕೆ ರು. 10 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ 2010ರಲ್ಲೇ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದಲ್ಲಿರುವ ಎಲ್ಲ 5766 ಗ್ರಂಥಾಲಯಗಳಿಗೂ ಒಮ್ಮೆಲೇ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪ್ರತಿ ಹಂತದಲ್ಲಿ 500 ಕಟ್ಟಡಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳುವಂತೆ ಸರ್ಕಾರಕ್ಕೆ ವಿನಂತಿಸಿದ್ದರೂ ಸರ್ಕಾರ ಅನುದಾನ ನೀಡಲು ಮುಂದಾಗದೇ ಇರುವುದು ಬೇಸರದ ಸಂಗತಿ.
ಕೊಂಚ ಸಮಾಧಾನ: ಗ್ರಂಥಾಲಯ ಸಹಾಯಕರು 1988ರಲ್ಲಿ ನೇಮಕವಾಗಿ ಅತ್ಯಂತ ಕನಿಷ್ಠ ಗೌರವ ಧನದಲ್ಲಿಯೇ ಜೀವನ ಸಾಗಿಸುತ್ತಾ ಬಂದಿದ್ದರು. ಸರ್ಕಾರ ಇವರ ಸಮಸ್ಯೆಗೆ ಸ್ಪಂದಿಸದಿರುವುದರಿಂದ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಸಮಸ್ಯೆ ಆಲಿಸಿದ ನ್ಯಾಯಾಲಯ ಮಾನವೀಯತೆ ಆಧಾರದ ಮೇಲೆ ವೇತನ ಕೊಡಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಗ್ರಂಥಾಲಯ ಇಲಾಖೆಯಿಂದ ಸದ್ಯ ರು. 2500 ಗೌರವ ಧನ ನೀಡಲಾಗುತ್ತಿದೆ.
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

