ಗದಗ

ಅಸಮರ್ಪಕ ವಿದ್ಯುತ್: ವಿದ್ಯಾರ್ಥಿಗಳಿಗೆ ಕಿರಿಕಿರಿ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಫೆ. 6
ರಾಜ್ಯದಲ್ಲಿ 2-3 ವರ್ಷದಿಂದ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೇ ದೊಡ್ಡ ದೊಡ್ಡ ಜಲಾಶಯಗಳಲ್ಲಿ ನೀರಿನ ಕೊರತೆಯಿಂದ ವಿದ್ಯುತ್ ಅಭಾವ ಸೃಷ್ಟಿಯಾಗಿದೆ.
ಸದ್ಯದಲ್ಲಿಯೇ ವಿವಿಧ ಪರೀಕ್ಷೆಗಳು ಪ್ರಾರಂಭವಾಗುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯಲ್ಲಿದ್ದಾರೆ. ಆದರೆ, ಸಮರ್ಪಕವಾಗಿ ಅಭ್ಯಸಿಸಲು ಅಸಮರ್ಪಕ ವಿದ್ಯುತ್ ಪೂರೈಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಪರೀಕ್ಷೆ ಸಮಯ: ಪ್ರತಿ ಬಾರಿ ನೂತನ ವರ್ಷ ಆಗಮನದ ನಂತರ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಪ್ರಾರಂಭವಾಗುತ್ತಿದೆ. ಆದರೆ ಈ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸೇರಿದಂತೆ. ಬಿಎ, ಬಿಕಾಂ, ಬಿಎಸ್ಸಿ, ಪ್ರಥಮ, ದ್ವಿತೀಯ, ತೃತೀಯ ವರ್ಷದ ವಾರ್ಷಿಕ ಪರೀಕ್ಷೆಗಳು ಕೆಲವೇ ತಿಂಗಳಲ್ಲಿ ಬರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ಓದುವ ಸಮಯದಲ್ಲಿಯೇ ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಅಸಮರ್ಪಕ ವಿದ್ಯುತ್ ಪೂರೈಕೆ: ಶಾಲಾ-ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳು ಹೆಚ್ಚಾಗಿ ಬೆಳಗಿನ ಜಾವ ಹಾಗೂ ರಾತ್ರಿಯ ವೇಳೆಯಲ್ಲಿ ಅಭ್ಯಾಸ ಮಾಡುತ್ತಾರೆ. ಆದರೆ, ಇದೇ ವೇಳೆಯಲ್ಲಿ ವಿದ್ಯುತ್ ತೊಂದರೆ ಉಂಟಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಏನು ಮಾಡಬೇಕು ಎನ್ನುವುದು ತಿಳಿಯದಂತಾಗಿದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳ ಪಾಡು ಹೇಳತೀರದು. ಒಂದು ದಿನಕ್ಕೆ 4-6 ಘಂಟೆ ಸಹ ವಿದ್ಯುತ್ ನೀಡುವುದಿಲ್ಲ. ರಾತ್ರಿಯುದ್ದಕ್ಕೂ ವಿದ್ಯುತ್ ಕಡಿತಗೊಳಿಸುವುದರಿಂದ ವಿದ್ಯಾರ್ಥಿಗಳು ಕತ್ತಲಲ್ಲಿಯೇ ಕಾಲಕಳೆಯುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ತಾಲೂಕು ಮಟ್ಟದಲ್ಲಿ ವಿದ್ಯುತ್ ಪೂರೈಕೆ ಮಾಡುವ ಅಧಿಕಾರಿಗಳು ನಿರ್ದಿಷ್ಟ ಸಮಯ ಪಾಲನೆಯಿಲ್ಲದೇ, ಯಾವುದನ್ನು ಪರಿಗಣಿಸದೇ ವಿದ್ಯುತ್ ಕಡಿತಗೊಳಿಸುವರು. ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಹುಬ್ಬಳ್ಳಿಯಿಂದ ವಿದ್ಯುತ್ ಪೂರೈಕೆ ನಿಂತಿದೆ ಎಂದು ಹೇಳುವರು. ಹುಬ್ಬಳ್ಳಿಗೆ ಕರೆ ಮಾಡಿ ಕೇಳಿದರೆ ಯಾವುದೇ ಗ್ರಿಡ್‌ಗಳಿಗೆ ವಿದ್ಯುತ್ ಪೂರೈಕೆ ನಿಲಿಸಿಲ್ಲ ಎಂದು ತಿಳಿಸುತ್ತಾರೆ. ಆದ್ದರಿಂದ ಇದು ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ, ಹಾಗೂ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆಂದು ಸಾರ್ವಜನಿಕರು ಆರೋಪಿಸುತ್ತಾರೆ.
ಸಮಯ ನಿಗದಿ: ಬೇಸಿಗೆ ದಿನಗಳು ಪ್ರಾರಂಭವಾದ ದಿನದಿಂದ ವಿದ್ಯುತ್ ಪ್ರಸರಣ ನಿಗಮದವರು ತಾಲೂಕು ಸೇರಿದಂತೆ ಪಟ್ಟಣಕ್ಕೆ ಲೋಡ್ ಶೆಡ್ಡಿಂಗ್ ಬಗ್ಗೆ ಸಮಯ ನಿಗದಿ ಮಾಡಿದ್ದು, ನಗರ ಪ್ರದೇಶಗಳಿಗೆ ಪ್ರತಿ ದಿನ 6 ರಿಂದ 10 ಗಂಟೆಯಲ್ಲಿ 1 ಗಂಟೆ ಮತ್ತು ಸಂಜೆ 6 ರಿಂದ 10 ಗಂಟೆಯೊಳಗೆ 1 ಗಂಟೆ ಲೋಡ್ ಶೆಡ್ಡಿಂಗ್, ಇನ್ನು ಗ್ರಾಮೀಣ ಪ್ರದೇಶದಲ್ಲಿ ರಾತ್ರಿ 3 ಗಂಟೆ, ಹಗಲಿನಲ್ಲಿ 2 ಗಂಟೆ ವಿದ್ಯುತ್ ಲೋಡ ಶಡ್ಡಿಂಗ್‌ಗೆ ನಿಗಧಿ ಮಾಡಿದ್ದಾರೆ. ಆದರೆ ಇವರು ಹೇಳಿದ ಸಮಯಕ್ಕಿಂತ ಹೆಚ್ಚಿಗೆ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.