ಗದಗ

ಗಜೇಂದ್ರಗಡ ಜನತೆ ಕನಸು ನನಸು

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 8
ಈ ಭಾಗದ ಜನತೆಯ ಬಹುದಿನದ ಬೇಡಿಕೆಯಾದ ಗಜೇಂದ್ರಗಡ ತಾಲೂಕು ಕೇಂದ್ರ ಆಗಬೇಕೆನ್ನುವ ಜನರ ಕನಸನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಾಕಾರಗೊಳಿಸುವ ಮೂಲಕ ಗಜೇಂದ್ರಗಡ ತಾಲೂಕು ಕೇಂದ್ರವನ್ನು ಅಧಿಕೃತವಾಗಿ ಘೋಷಿಸಿದ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆ ಜನರ ಸಂತಸ ಮುಗಿಲು ಮುಟ್ಟಿತು.
ಹೌದು, ಜಿಲ್ಲೆಯಲ್ಲಿ ತೀವ್ರಗತಿ ಬೆಳೆಯುತ್ತಿರುವ ಹಾಗೂ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣವಾದ ಗಜೇಂದ್ರಗಡ ತಾಲೂಕು ಕೇಂದ್ರದ ಎಲ್ಲ ಅರ್ಹತೆ ಹೊಂದಿದೆ ಎಂದು ಈಗಾಗಲೇ ವಾಸುದೇವರಾವ್ ಆಯೋಗ, ಹುಂಡೇಕಾರ ಸಮಿತಿ ಮತ್ತು ಈಗಿನ ಸಂಸದ ಪಿ.ಸಿ. ಗದ್ದಿಗೌಡ್ರ ನೇತೃತ್ವದ ಸಮಿತಿ, ನ್ಯಾ. ಕುಲದೀಪ ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡನಾ ಸಮಿತಿಗಳು ಸಹ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.
ದಶಕಗಳ ಹೋರಾಟ: ಗಜೇಂದ್ರಗಡ ತಾಲೂಕು ಆಗಬೇಕೆಂಬ ಕೂಗು ಇಂದು ನಿನ್ನೆಯದಲ್ಲ. ಈ ಧ್ವನಿಗೆ ದಶಕಗಳ ಹೋರಾಟದ ಇತಿಹಾಸ ಕಾರಣವಾಗಿತ್ತು. 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಗಜೇಂದ್ರಗಡ ಪಟ್ಟಣ ನೆರೆಯ ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳ ನೂರಾರು ಗ್ರಾಮಗಳ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಇಲ್ಲಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆ, ಜಾನುವಾರು ಮಾರುಕಟ್ಟೆ, ಜವಳಿ ಶೇಂಗಾ ಹಾಗೂ ಎಣ್ಣೆ ಉತ್ಪಾದನೆ ಮತ್ತು ಆಂಧ್ರಪ್ರದೇಶ ರಾಜ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿ ಈ ಮಾರ್ಗವಾಗಿ ಹಾದು ಹೋಗಿದೆ.
ನೇಕಾರಿಕೆ ತವರೂರು: ಗಜೇಂದ್ರಗಡ ನೇಕಾರಿಕೆಯ ತವರೂರು. ಇಲ್ಲಿ ಉತ್ಪಾದಿಸಲಾಗುವ ಇಲಕಲ್ ಸೀರೆಗಳು ದೇಶ, ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿವೆ. ಶೈಕ್ಷಣಿಕವಾಗಿ ಆಯುರ್ವೇದಿಕ್ ವೈದಕೀಯ ಕಾಲೇಜು, ಪದವಿ ಕಾಲೇಜುಗಳು ಹಾಗೂ ತಾಂತ್ರಿಕ ಮಹಾವಿದ್ಯಾಲಯ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಾಲೆ-ಪ್ರೌಢಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಉಪ ನೋಂದಣಿ ಕಚೇರಿ ಸಹ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಷ್ಟೆಲ್ಲ ಅರ್ಹತೆ ಹೊಂದಿರುವ ಗಜೇಂದ್ರಗಡ ಪಟ್ಟಣ ತಾಲೂಕು ಕೇಂದ್ರವಾಗಲು ಕೇವಲ ತಾಂತ್ರಿಕ ತೊಂದರೆ ಮಾತ್ರ ಬಾಕಿ ಉಳಿದಿತ್ತು. ಕೊನೆಗೂ ಸಚಿವ ಕಳಕಪ್ಪ ಬಂಡಿ ಹಾಗೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೂಲಕ ಅಧಿಕೃತವಾಗಿ ಘೋಷಣೆಯಾಗಿರುವುದು ಈ ಭಾಗದ ಜನತೆಯ ಬಹುದಿನಗಳ ಕನಸು ನನಸಾದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.