ಬೇಡಿ ಬಿಚ್ಚಿ, ನಾನು ಹುಚ್ಚನಲ್ಲ!
-ಪಿ.ಎಸ್. ಪಾಟೀಲ್
ಕನ್ನಡಪ್ರಭ ವಾರ್ತೆ, ರೋಣ, ಫೆ. 16
ಹುಚ್ಚನೆಂದು ಕರೆದು ನನ್ನನ್ನೇಕೆ ಅವಮಾನ ಮಾಡುತ್ತೀರಿ? ನಾನು ಹುಚ್ಚನಲ್ಲ. ನನ್ನ ಕೈ-ಕಾಲುಗಳಿಗೆ ಹಾಕಿದ ಬೇಡಿ ಬಿಚ್ಚಿ. ನಿಮ್ಮಂತೆಯೇ ಸ್ವತಂತ್ರವಾಗಿ ಬದುಕಲು ಬಿಡಿ. ನಾನೇನು ತಪ್ಪು ಮಾಡಿದ್ದೇನೆ? ನನಗೇಕೆ ಶಿಕ್ಷೆ?
- ತನ್ನತ್ತ ಬಂದವರನ್ನೆಲ್ಲ ಕೈಮುಗಿದು ಬೇಡುವ ಯುವಕನ ದಯನೀಯ ಸ್ಥಿತಿ ಇದು.
ಮೇಲ್ನೋಟಕ್ಕೆ ಹುಚ್ಚನಂತೆ ಕಾಣುವ ಈತ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರಬಹುದು, ಕೈಕಾಲುಗಳಿಗೆ ಬೇಡಿ ಹಾಕಿದ್ದನ್ನು ನೋಡಿದರೆ, ಮಾನಸಿಕ ಅಸ್ವಸ್ಥನಿರಬಹುದು ಎಂದು ಭಾಸವಾಗುತ್ತದೆ.
ಗುರುವಾರ ಮಧ್ಯರಾತ್ರಿ ಯಾರೋ ಈತನನ್ನು ಪಟ್ಟಣದಲ್ಲಿ ತಂದುಬಿಟ್ಟಿದ್ದಾರೆ. ತಾನು ಬೊಮ್ಮಸಾಗರ ಗ್ರಾಮದವರು. ದುರ್ಗಪ್ಪ ಪೂಜಾರ ಎಂದು ಹೆಸರು, ವಯಸ್ಸು 21 ಎಂದು ನಿಖರವಾಗಿ ಹೇಳುತ್ತಾನೆ.
ಚರ್ಚೆಗೆ ಗ್ರಾಸ: ಎರಡು ದಿನಗಳಿಂದ ಪಟ್ಟಣದಲ್ಲಿರುವ ಈತ ಸ್ಪಷ್ಟವಾಗಿ ಮಾತನಾಡುತ್ತಾನೆ. ತಾನು ಎಲ್ಲಿದ್ದೇನೆ, ಏನಾಗಿದೆ ಎಂಬ ಅರಿವೂ ಆತನಿಗೆ ಇದೆ. ಕೆಲವೊಮ್ಮೆ ಏನೋ ಹೇಳಲು ಹೋಗಿ ಇನ್ನೇನೋ ಹೇಳುತ್ತಾನೆ. ಗಾಬರಿಯಿಂದ ಹೀಗೆ ಆಗಿರಬಹುದು. ಆದರೆ, ಜನ ಮಾತ್ರ ಇದನ್ನು ನಂಬುತ್ತಿಲ್ಲ. ಈತನ ಹಾವಭಾವ, ವೇಷ-ಭೂಷಣ ಹಾಗೂ ಮಾತಿನ ವರಸೆ ಚರ್ಚೆಗೆ ಗ್ರಾಸವಾಗಿದೆ.
ಇಲಾಖೆ ಜವಾಬ್ದಾರಿ ಮರೆತಿದೆ : ಸರ್ಕಾರ ನಿರ್ಗತಿಕರ, ಅನಾಥರ, ಭಿಕ್ಷುಕರ ಹಾಗೂ ಮತಿವಿಕಲರ ಕಲ್ಯಾಣಕ್ಕಾಗಿ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿವೆ. ಸರ್ಕಾರೇತರ ಸಂಸ್ಥೆಗಳೂ ಇಂಥವರ ಹೆಸರು ಹೇಳಿಕೊಂಡು ಅನುದಾನ ಪಡೆಯುತ್ತಿವೆ. ಆದರೆ, ಯಾವುದೇ ಇಲಾಖೆ ಅಥವಾ ಸಂಸ್ಥೆ ಇಂಥವರತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಎನ್ನುವುದು ವಾಸ್ತವ. ಅಧಿಕಾರಿಗಳು ಎಚ್ಚೆತ್ತು ಮಾನವೀಯತೆ ಮೆರೆಯಬೇಕು. ಈ ಯುವಕ ನಿಜವಾಗಿಯೂ ಹುಚ್ಚನೋ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ವೀರೇಶ ದೊಡ್ಡಣ್ಣವರ, ಸಿದ್ದು ಗುಡಿಮನಿ, ಅರ್ಜುನ ಕೊಪ್ಪಳ ಮತ್ತಿತರರು ಆಗ್ರಹಿಸಿದ್ದಾರೆ.
ಪಾಲಕರ ಪತ್ತೆಗೆ ಕ್ರಮ
ಮಾನಸಿಕ ವ್ಯಕ್ತಿಗಳನ್ನು ಅಪರಾಧಿ ಮನೋಭಾವದಿಂದ ಕಾಣುವುದು ಅಥವಾ ಕೈ-ಕಾಲುಗಳಿಗೆ ಬೇಡಿ ಹಾಕುವುದು ಮಾನವೀಯತೆ ಅಲ್ಲ. ಈ ಕೂಡಲೇ ಪಟ್ಟಣದಲ್ಲಿರುವ ಆ ಅನಾಮಿಕ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುವುದು. ಅವನ ಬಗ್ಗೆ ಮಾಹಿತಿ ಕಲೆ ಹಾಕಿ, ಸಂಬಂಧಿಕರನ್ನು ಕರೆಸಿ, ಅವರ ಸುಪರ್ದಿಗೆ ವಹಿಸಲಾಗುವುದು.
-ಮಲ್ಲನಗೌಡ ನಾಯ್ಕರ, ಸಿಪಿಐ, ರೋಣ
ವ್ಯವಸ್ಥೆ ಕಲ್ಪಿಸುತ್ತೇವೆ
ಅಂಕವೈಕಲ್ಯ ಮತ್ತು ಮಾನಸಿಕ ಖಿನ್ನತೆ ಉಳ್ಳವರು ನಮ್ಮ ಇಲಾಖೆಗೆ ಒಳಪಡುವುದಿಲ್ಲ. ಭಿಕ್ಷುಕನಾಗಿದ್ದರೆ ಧಾರವಾಡ ಹತ್ತಿರದ ರಾಯಾಪುರ ಭಿಕ್ಷುಕರ ಮತ್ತು ನಿರಾಶ್ರಿತರ ಪುನರ್ವಸತಿ ಶಿಬಿರಕ್ಕೆ ಕಳುಹಿಸಲಾಗುವುದು. ಅಂಗ ವೈಕ್ಯಲವಿದ್ದಲ್ಲಿ ಹಿರಿಯ ನಾಗರಿಕರ ಮತ್ತು ಅಂಗವಿಕಲರ ಸಂರಕ್ಷಣಾ ಇಲಾಖೆ ಇದೆ. ನಾನು ಅವರೊಂದಿಗೆ ಮಾತನಾಡಿ ವ್ಯವಸ್ಥೆ ಕಲ್ಪಿಸುತ್ತೇನೆ.
-ರೋಣ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

