ಗದಗ

ಶಾಸಕರ ನಿಲುವು ಅಸ್ಪಷ್ಟ ಕಾರ್ಯಕರ್ತರಿಗೆ ಸಂಕಷ್ಟ

Published On :

-ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ. ಫೆ. 16
ಬಿಜೆಪಿ-ಕೆಜೆಪಿ ಗೊಂದಲಗಳ ಮಧ್ಯೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಿದ್ದು, ಯಾವ ಪಕ್ಷಕ್ಕೆ ಬೆಂಬಲಿಸಬೇಕೆಂಬ ಗೊಂದಲ ಜಿಲ್ಲೆಯ ಶಾಸಕ, ಕಾರ್ಯಕರ್ತರಲ್ಲಿ ಉಂಟಾಗಿದೆ.
ಕೆಜೆಪಿಗೆ ಹೋಗ ಬಯಸುವ ಶಾಸಕರ ವಿಧಾನಸಭಾ ಮತ ಕ್ಷೇತ್ರಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎನ್ನುವುದು ನುಂಗಲಾರದ ತುತ್ತಾಗಿದೆ. ಈ ಚುನಾವಣೆಯಲ್ಲಿ ಅವರ ಹಿಂಬಾಲಕರಿಗೆ ಯಾವ ಸೂಚನೆಯನ್ನು ನೀಡಬೇಕು ಎನ್ನುವ ಗೊಂದಲ ಮುಖ್ಯವಾಗಿ ಶಾಸಕರಲ್ಲಿಯೇ ಮೂಡಿದೆ.
ಸಂದಿಗ್ಧ ಪರಿಸ್ಥಿತಿ: ಗದಗ ಜಿಲ್ಲೆಯು ಕೆಜೆಪಿ-ಬಿಜೆಪಿ ಗೊಂದಲದಲ್ಲಿ ರಾಜ್ಯದಲ್ಲಿಯೇ ಹಾವೇರಿ ನಂತರ ಅತ್ಯಂತ ಮುಂಚೂಣಿಯಲ್ಲಿ ಗುರುತಿಸಿಕೊಂಡ ಜಿಲ್ಲೆಯಾಗಿತ್ತು. ಮೊದಲು ಜಿಲ್ಲೆಯ 4 ಜನ ಬಿಜೆಪಿ ಶಾಸಕರಲ್ಲಿ 3 ಜನ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ನಂತರ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ನಾನು ಬಿಜೆಪಿಯಲ್ಲೇ ಮುಂದುವರಿಯುತ್ತೇನೆಂದು ಹೇಳಿ, ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಏತನ್ಮಧ್ಯೆ ನರಗುಂದ ಶಾಸಕ ಸಿ.ಸಿ. ಪಾಟೀಲ ಬಿಜೆಪಿಗೆ ತಮ್ಮ ಬೆಂಬಲ ಎಂದು ಸಾರಿದ್ದಾರೆ. ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ಇಂದಿಗೂ ತಮ್ಮ ನಿಲುವು ಸ್ಪಷ್ಟ ಪಡಿಸದೇ ಇರುವುದರಿಂದ ಸಹಜವಾಗಿ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಮಾರ್ಚ್ 7ರಂದು ಮತದಾನ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಫೆ. 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾರ್ಚ್ 7 ರಂದು ಮತದಾನ ನಡೆಯಲಿದೆ. ಅಷ್ಟರೊಳಗಾಗಿ ಕೆಜೆಪಿಗೆ ಚುನಾವಣಾ ಆಯೋಗ ಅಧಿಕೃತವಾದ ಚಿಹ್ನೆಯನ್ನು ನೀಡುತ್ತದೆಯೇ ? ನೀಡಿದರೂ ಅದು ಇಷ್ಟೊಂದು ಕಡಿಮೆ ಸಮಯದಲ್ಲಿ ಸಾರ್ವಜನಿಕರ ಮನ ತಲುಪುತ್ತದೆಯೇ ಎನ್ನುವ ಹತ್ತಾರು ಪ್ರಶ್ನೆ ಕೆಜೆಪಿಯಿಂದ ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ಎದುರಾಗಿದೆ. ಆದರೆ, ಇದಕ್ಕೆಲ್ಲಾ ಕೆಜೆಪಿ ಸಂಸ್ಥಾಪಕರು ಸ್ಪಷ್ಟೀಕರಣ ನೀಡಬೇಕಿದೆ.
ಬಿಎಸ್ಆರ್ ಪ್ರಭಾವ ಬೀರುವುದೇ?: ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ತಮ್ಮ ಭಾಷಣಗಳಲ್ಲಿ ನನ್ನನ್ನು ರಾಜಕೀಯ ರಂಗದಲ್ಲಿ ರಾಜ್ಯ ಮಟ್ಟದ ನಾಯಕನನ್ನಾಗಿ ಬೆಳೆಸಿದ್ದು ಗದುಗಿನ ಜನತೆ ಎಂದು ಹೇಳುತ್ತಲೇ ತಮ್ಮ ಗಾಢವಾದ ಪ್ರಭಾವವನ್ನು ಜಿಲ್ಲೆಯಲ್ಲಿ ಹೊಂದಿದ್ದಾರೆ. 2007 ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೇ ಗದಗ-ಬೆಟಗೇರಿ ನಗರಸಭೆಯಲ್ಲಿ ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ಸ್ಪರ್ಧಿಸಿ ಓರ್ವ ಸದಸ್ಯ ಚುನಾಯಿತರಾಗಿದ್ದರು. ಆದರೆ, ಬಿ. ಶ್ರೀರಾಮುಲು ಅವರು ಬಿಜೆಪಿಗೆ ಸೆಡ್ಡು ಹೊಡೆದು, ಬಿಎಸ್ಆರ್ ಕಾಂಗ್ರೆಸ್ ಸ್ಥಾಪನೆ ಮಾಡಿದ್ದು, ಅವರ ಪಕ್ಷ ಸ್ಥಾಪನೆಯ ನಂತರ ಗದಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಮತ್ತೊಮ್ಮೆ ಅವರೇ ಪ್ರಭಾವ ಬೀರುವರೇ ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.