ಗದಗ

ಚುನಾವಣೆ: ಬಿಜೆಪಿ ವರ್ಸಸ್ ಕೆಜೆಪಿ

Published On :

 ಕಿರಣ ಮಾಸಣಗಿ
ಹಾವೇರಿ: ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೇವಲ 24 ಗಂಟೆ ಬಾಕಿಯಿರುವಾಗಲೇ ಹಾವೇರಿಯ 2 ನಗರಸಭೆ, 5 ಪುರಸಭೆ ಹಾಗೂ 1 ಪಟ್ಟಣ ಪಂಚಾಯತಿಯಲ್ಲಿ ಆಡಳಿತ ಪಕ್ಷದ ವಿರೋಧಿ ಅಲೆ ಕಂಡು ಬರತೊಡಗಿದೆ.
2007ರಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಇಡೀ ಜಿಲ್ಲೆಯಲ್ಲಿ ತನ್ನ ಛಾಪು ಮೂಡಿಸಿತ್ತು. ಅದರಂತೆ, ಹಾವೇರಿ ನಗರಸಭೆ 31, ರಾಣಿಬೆನ್ನೂರು 31, ಬ್ಯಾಡಗಿ 23, ಹಾನಗಲ್ 23, ಸವಣೂರು 23, ಬಂಕಾಪುರ 23, ಶಿಗ್ಗಾಂವಿ 23 ಹಾಗೂ ಹಿರೇಕೆರೂರು ಪಟ್ಟಣ ಪಂಚಾಯತಿ 16 ವಾರ್ಡ್‌ಗಳು ಸೇರಿದಂತೆ ಒಟ್ಟು 193 ವಾರ್ಡ್‌ಗಳಲ್ಲಿ ಅತಿ ಹೆಚ್ಚು ಸ್ಥಾನ ಪಡೆದುಕೊಳ್ಳುವ ಮೂಲಕ ಸ್ಥಳೀಯ ಸಂಸ್ಥೆಯಲ್ಲಿಯೂ ಪ್ರಾಬಲ್ಯ ಮೆರೆದಿತ್ತು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಿಲ್ಲೆಯ ಐವರು ಶಾಸಕರುಗಳ ಪೈಕಿ ಸಿ.ಎಂ. ಉದಾಸಿ, ನೆಹರು ಓಲೇಕಾರ, ಸುರೇಶಗೌಡ ಪಾಟೀಲ ಹಾಗೂ ಜಿ. ಶಿವಣ್ಣ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಸೇರಿದ್ದರಿಂದ ಈ ಬಾರಿ ಹಾವೇರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ವರ್ಸಸ್ ಕೆಜೆಪಿ ಎಂಬ ವಾತಾವರಣ ಸೃಷ್ಟಿಸಿದೆ.
ಸುಧಾರಣಾ ಸಮಿತಿ ಆಖಾಡಕ್ಕೆ: ಬಿಜೆಪಿ ಮತ್ತು ಕೆಜೆಪಿ ತಿಕ್ಕಾಟದ ಲಾಭ ಪಡೆಯಲು ಹಿರಿಯ ನಾಗರಿಕರಿಂದ ಅಸ್ತಿತ್ವಕ್ಕೆ ಬಂದಿರುವ ಸುಧಾರಣಾ ಸಮಿತಿ ಈ ಬಾರಿ ಚುನಾವಣೆಯಲ್ಲಿ ಮತ್ತೆ ಸಕ್ರಿಯವಾಗಿದೆ. 1979 ಹಾಗೂ 1983ರ ಚುನಾವಣೆಯಲ್ಲಿ ಈ ಸಮಿತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಮತದಾರ ಪ್ರಭು ಮನ್ನಣೆ ನೀಡಿದ್ದರ ಪರಿಣಾಮ ಅಧಿಕಾರದ ಗದ್ದುಗೆಗೆ ಏರಿದ್ದರು. ಪ್ರಸಕ್ತ ಚುನಾವಣೆಯಲ್ಲಿಯೂ ಸಮಿತಿ ಸದಸ್ಯರಿಗೆ ಮತದಾರರು ಮಣೆ ಹಾಕುವರೇ ಕಾದುನೋಡಬೇಕಿದೆ.
ಶೇ. 80ರಷ್ಟು ನಾಮಪತ್ರ ಸಲ್ಲಿಕೆ: ಬಿಜೆಪಿ, ಕೆಜೆಪಿ, ಸುಧಾರಣಾ ಸಮಿತಿ ಹಾಗೂ ಜೆಡಿಎಸ್‌ನಿಂದ ಶೇ. 80ರಷ್ಟು ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿದ್ದಾರೆ. ಜಿಲ್ಲೆಯಲ್ಲೇ ಕಾಂಗ್ರೆಸ್‌ನಿಂದ ಕೇವಲ ಶೇ. 50ರಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿರುವುದರಿಂದ ಎಲ್ಲ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡುವುದು ಹಿರಿಯ ನಾಯಕರಿಗೆ ತಲೆ ನೋವಾಗಿದೆ.
ಪರ್ಯಾಯವಾಗುವವೇ: ನಗರಸಭೆ, ಪುರಸಭೆ ಹಾಗೂ ಪಪಂಗಳಲ್ಲಿ ಆಡಳಿತಾರೂಢ ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಜನರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಎಳ್ಳಷ್ಟು ಪ್ರಾಮಾಣಿಕವಾಗಿ ಸ್ಪಂದಿಸಿಲ್ಲ ಎಂದು ಶ್ರೀಸಾಮಾನ್ಯರು ಆರೋಪಿಸುತ್ತಾರೆ. ಕುಡಿಯುವ ನೀರು, ಒಳಚರಂಡಿ, ಮೂಲ ಸೌಕರ್ಯಕ್ಕಾಗಿ ಜನತೆ ಪರದಾಡುತ್ತಿದ್ದರೂ, ಇವುಗಳ ಪರಿಹಾರಕ್ಕೆ ಬಿಜೆಪಿಗರು ಪ್ರಯತ್ನಿಸಿಲ್ಲ. ಆಡಳಿತ ಪಕ್ಷದ ಧೋರಣೆಯನ್ನು ಟೀಕಿಸಬೇಕಿದ್ದ ಕಾಂಗ್ರೆಸ್ ಸದಸ್ಯರು ಕಮಲ ಪಕ್ಷದೊಂದಿಗೆ ಕೈಜೋಡಿಸಿದ್ದರ ಪರಿಣಾಮ ಇಡೀ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಿಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯ ಜನತೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.