ರಾರಾಜಿಸುತ್ತಿರುವ ಫ್ಲೆಕ್ಸ್, ಬ್ಯಾನರ್
ತೆರವಿಗೆ ಕ್ರಮ ಕೈಗೊಳ್ಳದ ಜಿಲ್ಲಾಡಳಿತ: ನೀತಿ ಸಂಹಿತೆ ಉಲ್ಲಂಘನೆ?
ಟ ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 27
ಸದ್ಯ ಎಲ್ಲೆಡೆ ಸ್ಥಳೀಯ ಸಂಸ್ಥೆ ಚುಣಾವಣೆ ಭರಾಟೆ ಜೋರಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕಟ್ಟು ನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಿದೆ. ಯಾವುದೇ ಪಕ್ಷದ ಅಥವಾ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡುವ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆಗೆದು ಹಾಕಲು ಸೂಚನೆ ನೀಡಲಾಗಿದೆ. ಆದರೆ, ನಗರದ ಹೃದಯ ಭಾಗದಲ್ಲಿರುವ ತಾಪಂ ಕಚೇರಿ ಮುಂಭಾಗದಲ್ಲಿಯೇ ಸರ್ಕಾರದ ಸಾಧನೆ ಹೇಳುವ ಫಲಕವಿದ್ದು, ಅದನ್ನು ತೆಗೆಸದೇ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ಇದು ಆಡಳಿತ ಪಕ್ಷಕ್ಕೆ ಸಹಾಯ ಮಾಡುವಂತಿದೆ.
ಇಂದಿಗೂ ಸದಾನಂದ ಗೌಡರೇ ಸಿಎಂ: ಸದಾನಂದ ಗೌಡ ಇನ್ನೂ ಈ ರಾಜ್ಯದ ಮುಖ್ಯಮಂತ್ರಿ. ಅರೆ ಇದೇನಿದು ಎಂದು ಆಶ್ಚರ್ಯಪಡಬೇಡಿ, ಇವರ ಪೋಟೊ ಗದಗ ತಾಲೂಕು ಪಂಚಾಯಿತಿ ಕಚೇರಿಯಲ್ಲಿರೋ ಫ್ಲೆಕ್ಸ್‌ನಲ್ಲಿ ರಾರಾಜಿಸುತ್ತಿದೆ. ಅದೂ ನೀತಿ ಸಂಹಿತೆ ಜಾರಿಯಲ್ಲಿರೋ ಈ ಸಂದರ್ಭದಲ್ಲಿಯೂ ಇದನ್ನು ತೆಗೆದು ಹಾಕುವ ಕಾರ್ಯಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಮುಂದಾಗಿಲ್ಲ.
ಇನ್ನು ಜಿಲ್ಲಾಡಳಿತ ಭವನದಲ್ಲಿರೋ ಜಿಲ್ಲಾ ಪಂಚಾಯತ್ ಕಚೇರಿ ಬಳಿಯೂ ಕೆಲ ಯೋಜನೆಗಳ ಮಾಹಿತಿ ಫಲಕಗಳನ್ನು ಹಾಗೇ ಬಿಟ್ಟಿದ್ದು, ಇವುಗಳಲ್ಲಿಯೂ ಸದಾನಂದ ಗೌಡ ಹಾಗೂ ಸದ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಭಾವ ಚಿತ್ರಗಳಿರುವ ಫಲಕಗಳಿವೆ.
ಆಯೋಗದ ಆದೇಶಕ್ಕೆ ಕಿಮ್ಮತ್ತಿಲ್ಲ: ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಜಾಹೀರಾತು ಫಲಕಗಳ ಪ್ರಭಾವದಿಂದ ಆಡಳಿತ ಪಕ್ಷದ ಸದಸ್ಯರೇ ಹೆಚ್ಚಾಗಿ ಆಯ್ಕೆಯಾಗುವ ಸಾಧ್ಯತೆಯಿರುತ್ತದೆ. ಇದು ಮತದಾರರ ಮೇಲೆ ಪ್ರಭಾವ ಬಿರುತ್ತದೆಂಬ ಉದ್ದೇಶದಿಂದ ಚುನಾವಣಾ ಆಯೋಗ ಇವುಗಳನ್ನು ತೆಗೆಯಬೇಕು ಅಥವಾ ಮರೆ ಮಾಚಬೇಕೆಂಬ ನಿಯಮ ತಂದಿದೆ. ಇಲ್ಲಿ ಇದರ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ಈ ವಿಷಯದಲ್ಲಿ ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಆಡಳಿತ ಪಕ್ಷದ ಪ್ರಭಾವವೇ?: ನಗರದ ತಾಪಂ ಕಚೇರಿಯ ಸಮೀಪದಲ್ಲಿಯೇ ಇರುವ ಗಾಂಧಿ ವೃತ್ತ ಸೇರಿದಂತೆ ಇನ್ನುಳಿದ ಎಲ್ಲ ಕಡೆಗಳಲ್ಲಿಯೂ ಹಾಕಲಾಗಿದ್ದ ಪ್ಲೆಕ್ಸ್‌ಗಳನ್ನು ತೆಗೆದು ಹಾಕಲಾಗಿದೆ. ಆದರೆ, ಅದರ ಪಕ್ಕದಲ್ಲಿಯೇ ಇರುವ ಈ ಸರ್ಕಾರಿ ಫ್ಲೆಕ್ಸ್‌ಗಳನ್ನು ಮಾತ್ರ ಕೈ ಬಿಟ್ಟಿರುವುದು ಸಂಶಯಕ್ಕೆ ಕಾರಣವಾಗಿದೆ. ಸರ್ಕಾರ ಫ್ಲೆಕ್ಸ್‌ಗಳು ಉಳಿಯಲು ಅಧಿಕಾರಿಗಳ ಮೇಲೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಪ್ರಭಾವ ಬೀರಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು, ಇದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳೇ ಉತ್ತರಿಸಬೇಕಿದೆ.
ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ?
ರಾಜಕೀಯ ಪಕ್ಷಗಳಿಗೆ, ಪಕ್ಷಗಳಿಂದ ಅಧಿಕೃತವಾಗಿ ಬಿ ಪಾರಂ ಪಡೆದ ಅಭ್ಯರ್ಥಿಗಳಿಗೆ, ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದ ಬಗ್ಗೆ ಮಾತನಾಡುವ ಅಧಿಕಾರಿಗಳಿಗೆ, ಇದು ತಪ್ಪಾಗಿ ಕಾಣುತ್ತಿಲ್ಲವೇ ? ಇದು ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ ? ತಾವು ಮಾಡಿದರೆ ಅದು ತಪ್ಪಲ್ಲ ಎನ್ನುವ ಭಾವನೆ ಅಧಿಕಾರಿಗಳಲ್ಲೇಕೆ ಮೂಡಿದೆ ಎನ್ನುವುದು ತಿಳಿಯದಾಗಿದೆ. ಅಧಿಕಾರಿಗಳು ಆಡಳಿತ ಪಕ್ಷದವರ ಒತ್ತಡಕ್ಕೆ ಒಳಗಾಗಿದ್ದಾರೆಯೇ ಎನ್ನುವ ಬಲವಾದ ಶಂಕೆ ಅವಳಿ ನಗರದ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಆಯೋಗಕ್ಕೆ ದೂರು...
ಈ ಕುರಿತು ಜಿಲ್ಲಾಡಳಿತ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಸಾಧನೆ ಸಾರುವ ಫ್ಲೆಕ್ಸ್‌ಗಳನ್ನು ತೆಗೆದು ಹಾಕಬೇಕು. ಚುನಾವಣಾ ಆಯೋಗ ಸೂಚಿಸಿದ ಕ್ರಮದಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು.
ಣ ದಾವಲ ಮುಳಗುಂದ, ಜಿಲ್ಲಾ ಜೆಡಿಎಸ್ ವಕ್ತಾರ
ತಕ್ಷಣ ಕ್ರಮ...
ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಂಥವುಗಳನ್ನು ತಕ್ಷಣವೇ ಮುಚ್ಚಿಸುವ ಅಥವಾ ತೆಗೆಸುವ ಕಾರ್ಯ ಮಾಡಲಾಗುವುದು.
ಣ ಪಾಂಡುರಂಗ ನಾಯಕ, ಜಿಲ್ಲಾಧಿಕಾರಿ, ಗದಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

