ಗದಗ

ವಿರೋಧಿಗಳು ಮೆಚ್ಚುವ ಆಡಳಿತ ನೀಡಿದ್ದೇನೆ

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ. 28
ನನ್ನ ಪಕ್ಷ ಮಾತ್ರವಲ್ಲ, ನಮ್ಮ ವಿರೋಧ ಪಕ್ಷಗಳೂ ನನ್ನ ಆಡಳಿತವನ್ನು ಮೆಚ್ಚಬೇಕು. ಆ ರೀತಿಯಲ್ಲಿ ಆಡಳಿತ ನಡೆಸಿದ್ದು, ಇದರ ಆಧಾರದಲ್ಲಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ನರಗುಂದ ಪಟ್ಟಣಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಅದನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ರು. 1 ಕೋಟಿ ವೆಚ್ಚದಲ್ಲಿ ಜಗನ್ನಾಥರಾವ್ ಜೋಷಿ ಸ್ಮಾರಕ ಭವನ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಬಾಬಾ ಸಾಹೇಬರ ಕೀರ್ತಿಯಂತಿರುವ ಕೆಂಪಗಸಿ ಬಾಗಿಲು ನವೀಕರಣಕ್ಕೆ ರು. 18 ಲಕ್ಷ ಹಾಗೂ ಅವರ ಅರಮನೆ ಅಭಿವೃದ್ಧಿ ಪಡಿಸಲು ರು. 25 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ.
ಪಟ್ಟಣದ ಅಭಿವೃದ್ಧಿ ವಿಷಯದಲ್ಲಿಯೂ ಸಾಕಷ್ಟು ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಾಗಿದೆ. ಅದರ ವಿವರವನ್ನೇ ನೀಡುತ್ತೇನೆ. ಅದನ್ನು ಗಮನಿಸಿದ ನಂತರ ವಿರೋಧ ಪಕ್ಷದವರು ಸೇರಿದಂತೆ ಸಾರ್ವಜನಿಕರಿಗೆ ಮೆಚ್ಚುಗೆಯಾಗುವಂತಹ ಆಡಳಿತವನ್ನು ಸಿ.ಸಿ. ಪಾಟೀಲ ನೀಡಿದ್ದಾನೆ ಎನ್ನುವ ಅಭಿಪ್ರಾಯ ನಿಮ್ಮಲ್ಲಿಯೇ ಮೂಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ನರಗುಂದ ಪುರಸಭೆಗೆ ನನ್ನ ಅಧಿಕಾರಾವಧಿಯಲ್ಲಿ ಎಸ್‌ಎಫ್‌ಸಿ ಹಾಗೂ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣದ ಅಭಿವೃದ್ಧಿಗಾಗಿ ರು. 30 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದೆ. ಪಟ್ಟಣದ ಮುಕುಟದಂತಿರುವ ಸೋಮಾಪುರ ಹಾಗೂ ದಂಡಾಪುರ ಕೆರೆಗಳ ಪುನರುಜ್ಜೀವನಕ್ಕಾಗಿ ರು. 1 ಕೋಟಿ 20 ಲಕ್ಷಗಳ ವಿಶೇಷ ಅನುದಾನದಿಂದ ಅಭಿವೃದ್ಧಿ ಪಡಿಸಲಾಗಿದೆ. ನರಗುಂದ ಪಟ್ಟಣದಲ್ಲಿ ಪ್ರವಾಸಿ ಮಂದಿರ ಹಾಗೂ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕಾಗಿ ರು. 1 ಕೋಟಿ 72 ಲಕ್ಷ, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವಸತಿ ನಿಲಯಕ್ಕಾಗಿ ರು. 1 ಕೋಟಿ 80 ಲಕ್ಷ, ಪಟ್ಟಣದಲ್ಲಿನ ಪದವಿ ಕಾಲೇಜು ನಿರ್ಮಾಣಕ್ಕೆ ರು. 1 ಕೋಟಿ 50 ಲಕ್ಷ, ಮಿನಿ ವಿಧಾನಸೌಧ ನಿರ್ಮಾಣಕ್ಕೆ ರು. 3 ಕೋಟಿ, ನರಗುಂದ ತಾಲೂಕಿನ ವಿವಿಧ ಗ್ರಾಮಗಳ ಸಾರ್ವಜನಿಕರಿಗಾಗಿ ನರಗುಂದ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಗ್ರಾಮೀಣ ಬಸ್ ನಿಲ್ದಾಣವನ್ನು ರು. 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮುಖ್ಯವಾಗಿ ನೀರಾವರಿ ಇಲಾಖೆಯ ಮೂಲಕ ಹರಿಜನ ಗಿರಿಜನ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ ಪಟ್ಟಣದ ವಿವಿಧ ಹಿಂದುಳಿದ ವರ್ಗಗಳ ಬಡಾವಣೆಯಲ್ಲಿ ರು. 1 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
ಪಟ್ಟಣದ ಕ್ರಿಡಾಪಟುಗಳ ಕ್ರೀಡಾ ಚಟುವಟಿಕೆಗಾಗಿ ರು. 90 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಲಾಗಿದ್ದು, ಇದರಿಂದ ಸಾವಿರಾರು ಕ್ರೀಡಾಪಟುಗಳಿಗೆ ಅನುಕೂಲವಾಗಿದೆ. ಹಿಂದುಳಿದ ಸಮಾಜಗಳಾದ ಮರಾಠಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ರು. 12 ಲಕ್ಷ, ಕಿತ್ತೂರ ಚೆನ್ಮಮ್ಮ ಭವನ ನಿರ್ಮಾಣಕ್ಕೆ ರು. 50 ಲಕ್ಷ, ಅಲ್ಪ ಸಂಖ್ಯಾತ ಬಂಧುಗಳ ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗಾಗಿ ಲೋದಿ ಗಲ್ಲಿಯಲ್ಲಿ ರು. 26 ಲಕ್ಷ ವೆಚ್ಚದಲ್ಲಿ ಶಾದಿ ಮಹಲ್ ನಿರ್ಮಾಣ. ಇನ್ನು ಪಟ್ಟಣದ ಹೊರಕೇರಿ ಓಣಿಯಲ್ಲಿಯೂ ಶಾದಿಮಲ್ ನಿರ್ಮಾಣಕ್ಕೆ ರು. 10 ಲಕ್ಷ ಅನುದಾನ ನೀಡಲಾಗಿದೆ ಎಂದರು.
ಅಂಬೇಡ್ಕರ್ ನಗರ ಸೇರಿದಂತೆ ಹಿಂದುಳಿದ ಜನತೆ ವಾಸವಾಗಿರುವ ಪ್ರದೇಶಗಳಲ್ಲಿ ವಿಶೇಷ ಮೂಲಭೂತ ಸೌಲಭ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಪಟ್ಟಣದಲ್ಲಿನ ನಿವೇಶನ ರಹಿತ ಬಡವರಿಗೆ 1375 ನಿವೇಶನ ವಿತರಣೆ ಮಾಡಿ, ಅವರಿಗೆ ಹಕ್ಕು ಪತ್ರ ನೀಡಲಾಗಿದೆ.
ಇನ್ನು ಮುಖ್ಯವಾಗಿ ಸೋಮಾಪುರ ಕೆರೆಯ ದಂಡೆಯ ಮೇಲೆ ವಾಸವಾಗಿದ್ದ ನಿವೇಶನ ರಹಿತರಿಗಾಗಿ ವಿಶೇಷ ಕಾಲೋನಿಯಲ್ಲಿ 125 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಬಡವರಿಗೆ ಶಾಶ್ವತ ಸೂರು ಕಲ್ಪಿಸಲಾಗುತ್ತಿದೆ. ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಪಟ್ಟಣದ 4 ಸ್ಥಳಗಳಲ್ಲಿ ಪ್ರತಿ ಘಟಕಕ್ಕೆ ರು. 8 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ನೂತನ ಬಡಾವಣೆಗಳಾದ ಅಧ್ಯಾಪಕ ನಗರ, ವಿದ್ಯಾಗಿರಿ, ಸರಸ್ವತಿ ನಗರ, ವಿನಾಯಕ ನಗರಗಳಲ್ಲಿನ ಪ್ರತಿಯೊಂದು ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಿದೆ. 12ನೇ ಹಣಕಾಸಿನ ಯೋಜನೆಯಲ್ಲಿ ರು. 1 ಕೋಟಿ 60 ಲಕ್ಷ, 13ನೇ ಹಣಕಾಸಿನ ಯೋಜನೆಯಲ್ಲಿ ರು. 2 ಕೋಟಿ 25 ಲಕ್ಷಕ್ಕೂ ಅಧಿಕ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಇದು ಕೇವಲ ನನ್ನ ಅಧಿಕಾರಾವಧಿಯಲ್ಲೇ ನರಗುಂದ ಪಟ್ಟಣಕ್ಕೆ ಇಷ್ಟೊಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಪಟ್ಟಣದ ಬಹುತೇಕ ಪ್ರಮುಖ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಹಲವಾರು ಬಡಾವಣೆಗಳಲ್ಲಿ ಚರಂಡಿಗಳು ನಿರ್ಮಾಣವಾಗಿವೆ. ಇಷ್ಟೊಂದು ಕಾಮಗಾರಿಗಳು ಹಿಂದಿನ ಯಾವ ಶಾಸಕರ ಅಧಿಕಾರಾವಧಿಯಲ್ಲೂ ಆಗಿಲ್ಲ. ಇದೆಲ್ಲದರ ಆಧಾರದಲ್ಲಿಯೇ ನಾನು ವಿರೋಧ ಪಕ್ಷಗಳೂ ಮೆಚ್ಚುವಂತಹ ಆಡಳಿತ ನೀಡಿದ್ದೇನೆ ಎಂದು ಹೇಳಿರುವುದು ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮ ಎದುರಾಳಿ ಯಾರು? ಪ್ರಾದೇಶಿಕ ಪಕ್ಷಗಳನ್ನು ಯಾವ ರೀತಿಯಲ್ಲಿ ಎದುರಿಸುತ್ತೀರಿ ಎಂದಾಗ, ನಮ್ಮ ನೇರ ಎದುರಾಳಿ ಪ್ರಾದೇಶಿಕ ಪಕ್ಷಗಳಲ್ಲ, ಅವರಿಗೆ ಎಲ್ಲ ವಾರ್ಡ್‌ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ. ಹಾಗಾಗಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನಮ್ಮ ನೇರ ಎದುರಾಳಿ ಎಂದರು. ಸಿ.ಸಿ. ಪಾಟೀಲ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವ ವಿರೋಧ ಪಕ್ಷದವರ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, ಇದ್ಯಾವುದಕ್ಕೂ ನಾನು ಪ್ರತಿಕ್ರಿಯೆ ನೀಡಲ್ಲ. ಅವೆಲ್ಲಾ ಅವರ ಪಕ್ಷದವರೇ ಸೃಷ್ಟಿಸಿರುವ ವದಂತಿ. ನನ್ನ ಸಾಧನೆಗಳು ಮಾತನಾಡಬೇಕು. ಮಾಡಿದ ಅಭಿವೃದ್ಧಿ ಕಾರ್ಯಗಳು ಸಾರ್ವಜನಿಕರಿಗೆ ಪ್ರತಿಕ್ರಿಯೆ ನೀಡಬೇಕು ಎನ್ನುವ ತತ್ವ ನನ್ನದು ಎಂದರು. ಕೆಜೆಪಿ, ಬಿಜೆಪಿ ವಿಷಯದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದು, ಇದರ ಶಮನಕ್ಕೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದಾಗ, ಈ ಮೊದಲು ನೀವು ಹೇಳಿದಂತೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿತ್ತು. ಆ ಗೊಂದಲವನ್ನು ಪರಿಹರಿಸುವಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಂಘಟನಾ ಮುಖ್ಯಸ್ಥರಾದ ಸಂತೋಷಜಿ, ಸಂಸದರಾದ ಪ್ರಹ್ಲಾದ ಜೋಷಿ ಮುಖ್ಯವಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವರು, ಆತ್ಮೀಯರಾದ ಕಳಕಪ್ಪ ಬಂಡಿ ಅವರ ಶ್ರಮ ಪ್ರಮುಖವಾಗಿದೆ. ಈ ಕುರಿತು ಹಲವಾರು ಬಾರಿ ಅವರೆಲ್ಲರೂ ಚರ್ಚಿಸಿ, ಕಾರ್ಯಕರ್ತರಲ್ಲಿ ಉಂಟಾಗಿದ್ದ ಗೊಂದಲ ನಿವಾರಿಸಲಾಗಿದೆ.
ಸದ್ಯ ಗದಗ ಜಿಲ್ಲೆಯಲ್ಲಿ ಬಿಜೆಪಿ ಅಖಂಡವಾಗಿದೆ. ಹಲವಾರು ಹೊಸ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಅದರ ಆಧಾರದಲ್ಲಿಯೇ ನಾವು ಮತ ಕೇಳುತ್ತೇವೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯ ಸಾಧಿಸುತ್ತೇವೆಂದು ಹೇಳಿದರು.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.