ಇಂದು ಚನ್ನಬಸವ ಶ್ರೀ ಪುಣ್ಯಸ್ಮರಣೋತ್ಸವ (ಸುದ್ದಿ ಸಂಕ್ಷೇಪ)
ನರೇಗಲ್ಲ: ಸಮೀಪದ ನಿಡಗುಂದಿಕೊಪ್ಪದ ಲಿಂ. ಚನ್ನಬಸವ ಮಹಾಶಿವಯೋಗಿಗಳ 29ನೇ ಪುಣ್ಯಸ್ಮರಣೋತ್ಸವ ಸಮಾರಂಭವನ್ನು ಜ. 27ರಂದು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಾನ್ನಿಧ್ಯವನ್ನು ಹಾಲಕೇರಿಯ ಅನ್ನದಾನೇಶ್ವರ ಮಠದ ಅನ್ನದಾನ ಶ್ರೀಗಳು ವಹಿಸುವರು. ನೇತೃತ್ವವನ್ನು ಶಾಖಾ ಶಿವಯೋಗ ಮಂದಿರದ ಶಿವಬಸವ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಬಿ.ಎನ್. ಜಾಲಿಹಾಳ ವಹಿಸುವರು. ಅತಿಥಿಗಳಾಗಿ ಸಂಶಿ ವಿರಕ್ತ ಮಠದ ಚನ್ನಬಸವ ದೇವರು, ಸಂಗನಹಾಲ ಹಿರೇಮಠದ ಗುರುಮೂರ್ತಿ ಶಾಸ್ತ್ರಿಗಳು ಆಗಮಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮರನಾಥ್ಗೆ ಬಾಲಕೃಷ್ಣ ಸಾಹಿತ್ಯ ಪುರಸ್ಕಾರ
ನರೇಗಲ್ಲ: 2012ನೇ ಸಾಲಿನ ಬಾಲಕೃಷ್ಣ ಸಾಹಿತ್ಯ ಪುರಸ್ಕಾರಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರದ ಇಂಗ್ಲಿಷ್ ಪ್ರಾಧ್ಯಾಪಕ, ಕವಿ ಎಚ್.ಆರ್.ಅಮರನಾಥ ಆಯ್ಕೆಯಾಗಿದ್ದಾರೆ ಎಂದು ಬಾಲಕೃಷ್ಣ ಸಾಹಿತ್ಯ ವೇದಿಕೆಯ ಸಂಚಾಲಕ, ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು. ಈಚೆಗೆ ಅವರು ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮೂಲತಃ ಹಾಸಣಗಿಯವರಾದ ಅಮರನಾಥರ ಸಾಹಿತ್ಯಿಕ ಸೇವೆಯನ್ನು ಗಮನಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಹುಚ್ಚು ಹಾದಿಯ ಪಯಣಿಗ, ಹತ್ತರೊಳಗೆ ಹನ್ನೊಂದು, ಅಮರಪಥ ಎಂಬ ಕವನ ಸಂಕಲನಗಳಲ್ಲದೇ 3 ಮಹಾ ಕಾವ್ಯಗಳು ಕೃತಿಯ ವಿಮರ್ಶೆ, 7 ನಾಟಕಗಳು, 4 ಕನ್ನಡ ಅನುವಾದಗಳು, ಬೇಂದ್ರೆ ಮಾಸ್ತರಿಗೆ ನಮನ, ಶಂ.ಬಾ.ಜೋಷಿ ಸಂದರ್ಶನ, ದಿವ್ಯಸಾಧನೆ ಮುಂತಾದ ತಮ್ಮ ಮೌಲಿಕ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಅಮರನಾಥ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷೆ ಮೈನಾವತಿ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿಉಪಸ್ಥಿತರಿದ್ದರು.
ನಾಳೆ ಕೃಷಿ ತಂತ್ರಜ್ಞಾನ ಪ್ರದರ್ಶನ ಉದ್ಘಾಟನೆ
ಗದಗ: ತಾಲೂಕಿನ ಹುಲಕೋಟಿಯ ಕೈಲಾಸ ಆಶ್ರಮದ ವಾರ್ಷಿಕೋತ್ಸವ ಅಂಗವಾಗಿ ಆಶ್ರಮದ ಆವರಣದಲ್ಲಿ ಜ. 28 ರ ಬೆಳಗ್ಗೆ 10 ಗಂಟೆಗೆ ಕೃಷಿ ತಂತ್ರಜ್ಞಾನ ಪ್ರದರ್ಶದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರಪುರಿ ಶ್ರೀಗಳು ವಹಿಸುವರು. ಕೃಷಿ ತಂತ್ರಜ್ಞಾನದ ಉದ್ಘಾಟನೆಯನ್ನು ಮಾಜಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಸಿ.ಜಿ. ಕೊರವನವರ ಮುಂತಾದವರು ಉಪಸ್ಥಿತರಿರುವರು ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ. ಎಲ್.ಜಿ. ಹಿರೇಗೌಡ್ರ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಇಂದು ಶಿವಾನುಭವ
ಗದಗ: ಜ. 27ರ ಸಂಜೆ 7 ಗಂಟೆಗೆ ಸ್ಥಳೀಯ ನೀಲಮ್ಮತಾಯಿ ಆಧ್ಯಾತ್ಮ ವಿದ್ಯಾಶ್ರಮದಲ್ಲಿ 42ನೇ ಮಾಸಿಕ ಶಿವಾನುಭವವನ್ನು ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಆಶ್ರಮದ ನೀಲಮ್ಮತಾಯಿಯವರು ವಹಿಸುವರು. ಅಧ್ಯಕ್ಷತೆಯನ್ನು ಶಿಕ್ಷಕಿ ಲಕ್ಷ್ಮಿದೇವಿ ಹೊಂಬಳ ವಹಿಸುವರು. ಉಪನ್ಯಾಸಕ ಆರ್.ಆರ್.ಪಟ್ಟಣದ ಅವರು ಅಂದಿನ ದಿನ ಶರಣರ ದೃಷ್ಟಿಯಲ್ಲಿ ಮಹಿಳೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡುವರು. ನಂತರ ದೇವಿ ಪಲಕ್ಕಿ ಉತ್ಸವ ಜರುಗುವುದು ಎಂದು ಶಿವಾನುಭವ ಸಮಿತಿಯ ಅಧ್ಯಕ್ಷ ಬಿ.ಬಿ. ಹೂಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ದತ್ತಿ ಉಪನ್ಯಾಸ
ನರಗುಂದ: ಕಸಾಪ ತಾಲೂಕು ಘಟಕದ ವತಿಯಿಂದ ಹಾವೇರಿ ಸಿಂದಗಿಮಠದ ಶಾಂತಲಿಂಗ ಶ್ರೀಗಳ ಸ್ಮರಣಾರ್ಥ ಜ. 27ರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಸರಸ್ವತಿ ಸಮುದಾಯ ಭವನದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಅಡ್ನೂರ ದಾಸೋಹ ಮಠದ ಪಂಚಾಕ್ಷರ ಶ್ರೀಗಳು, ಭೈರನಹಟ್ಟಿ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಬದಾಮಿ ನವಗೃಹ ಹಿರೇಮಠದ ಶಿವಪೂಜಾ ಶ್ರೀಗಳು ವಹಿಸುವರು. ಅತಿಥಿಗಳಾಗಿ ಕಸಾಪದ ತಾಲೂಕು ಅಧ್ಯಕ್ಷ ಪಿ.ಸಿ. ಕಲಹಾಳ, ಕಸಾಪದ ಜಿಲ್ಲಾಧ್ಯಕ್ಷ ಶಿವಣ್ಣ ಕುರಿ, ಎಸ್.ಆರ್. ಹಿರೇಮಠ, ತೆಲ್ಲೂರ ಸಿದ್ಧೇಶ್ವರ ಶ್ರೀಗಳು, ಡಿ.ಎಚ್. ಅಜ್ಜಿ, ಆರ್.ಬಿ. ಚಿನವಾಲರ, ಜಿ.ಬಿ. ಕೆಂಟೆನ್ನವರ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಉಪನ್ಯಾಸ
ಗದಗ: ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಬಸವದಳದ 1004 ನೇ ಶರಣ ಸಂಗಮ ಕಾರ್ಯಕ್ರಮ ಜ 27ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ. ಎಂ.ಬಿ. ಲಿಂಗಧಾಳ ಅಧ್ಯಕ್ಷತೆ ವಹಿಸುವರು. ಹಂಚಿನಾಳ ಉಪನ್ಯಾಸ ನೀಡುವರು. ಬಸವದಳದ ಸದಸ್ಯರು ಪಾಲ್ಗೊಳ್ಳಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

