ಫೆ. 14ರಂದು ಮಾತಾಪಿತ ದಿನ ಆಚರಣೆ: ಮುತಾಲಿಕ್
ಗದಗ: ಫೆ. 14ರ ಪ್ರೇಮಿಗಳ ದಿನವನ್ನು ಶ್ರೀರಾಮ ಸೇನೆಯ ವತಿಯಿಂದ ಮಾತಾಪಿತರನ್ನು ಪೂಜಿಸುವ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಅವರು ಭಾನುವಾರ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಲವಾರು ವರ್ಷಗಳಿಂದ ಫೆ. 14ರಂದು ಆಚರಿಸುವ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತಾ ಬಂದಿರುವ ಶ್ರೀರಾಮಸೇನೆ, ಈ ಸಂಸ್ಕೃತಿ ನಮ್ಮ ದೇಶದಲ್ಲಿ ನಿಲ್ಲುವವರೆಗೂ ಹೋರಾಟ ಮಾಡಲಿದೆ. ಈ ಕುರಿತು ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಕರಪತ್ರದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಫೆ. 14ನ್ನು ಮಾತಾಪಿತರ ಪೂಜ್ಯನೀಯ ದಿನವನ್ನಾಗಿ ಆಚರಿಸಲು ಶ್ರೀರಾಮಸೇನೆ ನಿರ್ಧರಿಸಿದೆ ಎಂದರು.
ದೆಹಲಿ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳಕ್ಕೆ ಈ ರೀತಿಯ ಡೇ ಸಂಸ್ಕೃತಿಯ ವಿಕೃತಿ ಕಾರಣವಾಗಿದೆ. ಇದೆಲ್ಲವನ್ನು ಬೇರು ಮಟ್ಟದಿಂದ ಹೋಗಲಾಡಿಸಬೇಕಾದಲ್ಲಿ ನಮ್ಮ ಯುವ ಪೀಳಿಗೆಯಲ್ಲಿ ವಿದೇಶಿ ಸಂಸ್ಕೃತಿಯ ಅಂಧಾನುಕರಣೆಯನ್ನು ನಿಲ್ಲಿಸಿ, ಪವಿತ್ರವಾದ ನಮ್ಮ ದೇಶೀಯ ಸಂಸ್ಕೃತಿ ಬೆಳೆಸಬೇಕಾಗಿದೆ. ಇದಕ್ಕೆ ಪಾಲಕರು ಕೈ ಜೋಡಿಬೇಕೆಂದರು.
ಶಿಂಧೆ ವರ್ತನೆ ಅಲ್ಖೈದಾದಂತಿದೆ: ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಆರ್ಎಸ್ಎಸ್ ಸಂಘಟನೆಯ ಕುರಿತು ನೀಡಿದ ಹೇಳಿಕೆಯು ಅಲ್ಖೈದಾದ ಉಗ್ರರ ಹೇಳಿಕೆಯಂತಿದೆ. ಕೇಂದ್ರ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುವುದು ಅವರ ಸ್ಥಾನಕ್ಕೆ ಗೌರವ ತರುವಂತಹದ್ದಲ್ಲ. ಅವರ ಹೇಳಿಕೆಗಳನ್ನು ದೇಶಾದ್ಯಂತ ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದು, ಆದರೆ, ಅವರ ಹೇಳಿಕೆ ಉಗ್ರರಿಗೆ ಹಾಗೂ ಉಗ್ರವಾದಿ ಸಂಘಟನೆಗಳಿಗೆ ಪ್ರೋತ್ಸಾಹದಾಯಕವಾಗಿದೆ. ಇವರು ನೀಡಿರುವ ಹೇಳಿಕೆಗೆ ಸೂಕ್ತ ಸಾಕ್ಷಿ, ಪುರಾವೆಗಳಿದ್ದಲ್ಲಿ ದೇಶದ ಜನತೆಗೆ ನೀಡಲಿ, ಆರೋಪ ಸತ್ಯವಾದಲ್ಲಿ ಆ ಸಂಘಟನೆಯನ್ನು ನಿಷೇಧಿಸುವ ನಿರ್ಧಾರ ಪ್ರಕಟಿಸಿರಿ. ಆದರೆ, ಅದನ್ನು ಬಿಟ್ಟು ಮತ ಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಶಾಂತಿ ಕದಡಬೇಡಿ ಎಂದರು.
ಗೊಂದಲಕ್ಕೆ ತೆರೆಯಳೆಯಲಿ: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಜನರಲ್ಲಿ ಗೊಂದಲ ಹಾಗೂ ಅಸಹ್ಯಕರ ವಾತಾವರಣಕ್ಕೆ ಕಾರಣವಾಗಿದ್ದು, ತಕ್ಷಣವೇ ಸರ್ಕಾರ ವಿಸರ್ಜಿಸಿ, ಹೊಸ ಜನಾದೇಶ ಪಡೆಯುವುದು ಸೂಕ್ತ. ಶ್ರೀರಾಮಸೇನೆ ರಾಜಕೀಯ ಪಕ್ಷವಲ್ಲ. ಆದರೆ ಮುಂಬರುವ ಚುನಾವಣೆಯ ಸಂದರ್ಭ ಅಗತ್ಯಕ್ಕನುಸಾರವಾಗಿ ಕೆಲವರಿಗೆ ಬೆಂಬಲ ನೀಡಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

