ಗದಗ

ಗಮನ ಸೆಳೆದ ಕೃಷಿಮೇಳ, ಅತ್ಯಾಧುನಿಕ ವಸ್ತುಗಳ ಪ್ರದರ್ಶನ, ಮಾರಾಟ

Published On :




ಟ ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗದಗ, ಜ. 28
ತಾಲೂಕಿನ ಹುಲಕೋಟಿ ಗ್ರಾಮದ ಕೈಲಾಸ ಆಶ್ರಮದ 21ನೇ ವಾರ್ಷಿಕೋತ್ಸವದ ಅಂಗವಾಗಿ ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಇವರು ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯ ಆಶ್ರಯದಲ್ಲಿ ಕೈಲಾಸ ಆಶ್ರಮದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ತಂತ್ರಜ್ಞಾನ ಪ್ರದರ್ಶನದಲ್ಲಿ ರೈತರಿಗೆ ತರಬೇತಿ, ವಿಚಾರ ಸಂಕಿರಣ, ವಿಸ್ತರಣಾ ಕಾರ್ಯಕ್ರಮದ ಮೂಲಕ ರೈತರಿಗೆ ಕೃಷಿ ಪರಿಕರಗಳ ಕುರಿತು ಮಾಹಿತಿ ನೀಡಲಾಯಿತು.
ಯಂತ್ರೋಪಕರಣ ಪ್ರದರ್ಶನ: ರೈತರಿಗೆ ಸುಧಾರಿತ ಯಂತ್ರೋಪಕರಣಗಳ ಕುರಿತು ಮಾಹಿತಿ ಮತ್ತು ಮಾರಾಟ ಮಾಡುವ ಉದ್ದೇಶದಿಂದ ಸುಧಾರಿತ ಕುಡುಗೋಲು, ಹತ್ತಿಬೆಳೆ ಬಿಡಿಸುವ ಚೀಲ, ಆಹಾರ ಸಂಸ್ಕರಣೆ ಮಾಡುವ ಯಂತ್ರೋಪಕರಣಗಳು, ಮೇವು ಕತ್ತರಿಸುವ ಯಂತ್ರ, ಬಂಡ ಫಾರ್ಮರ್, ಸೈಕಲ್ ವೀಟರ್, ಮಿನಿ ಟ್ರ್ಯಾಕ್ಟರ್, ಶೇಂಗಾ ಒಡೆಯುವ ಮತ್ತು ಹುರಿಯುವ ಯಂತ್ರ, ಲೇಸರ್ ನಿರ್ದೇಶಿತ ಭೂಮಿ ಸಮಮಾಡುವ ಯಂತ್ರ, ರೋಟೋವೇಟರ್, ಕಳೆ ತಗೆಯುವ ಸಾಧನ, ಹಾಲು ಕರೆಯುವ ಯಂತ್ರ, ಮೇವು ತಯಾರಿಸುವ ಯಂತ್ರ ಸೇರಿದಂತೆ ವಿವಿಧ ನೀರಾವರಿ ಪದ್ಧತಿಗಳ ಸಲಕರಣೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಾಗೂ ರೈತರು ಪಡೆದುಕೊಳ್ಳಬಹುದಾದ ಸೂಕ್ತ ಮಾಹಿತಿಯು ಸೇರಿದಂತೆ ಹಲವು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗಬೇಕು ಎಂಬ ಉದ್ದೇಶದಿಂದ ಹಲವು ರೀತಿಯ ಪ್ರಾತ್ಯಕ್ಷಿಕೆ ಮಾದರಿಗಳನ್ನು ಏರ್ಪಡಿಸಲಾಗಿತ್ತು. ಅವುಗಳಲ್ಲಿ ಒಣ ಬೇಸಾಯದಲ್ಲಿ ಅಧಿಕ ಹಾಲು ಉತ್ಪಾದನೆಗಾಗಿ ಪೌಷ್ಟೀಕರಿಸಿದ ಒಣ ಮೇವು ಸಂಗ್ರಹಿಸುವಿಕೆಯ ಮಾಹಿತಿ, ಕೊಳವೆ ಬಾವಿಗಳ ಮೂಲಕ ಅಂತರ್ಜಲ ಮರುಪೂರಣ, ತೆರೆದ ಬಾವಿಗಳ ಮೂಲಕ ರೋಟೋವೇಟರ್, ಹಳ್ಳಿಗಳಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಚೆಕ್‌ಡ್ಯಾಂ ನಿರ್ಮಾಣ, ಮಣ್ಣು ಮತ್ತು ನೀರು ಸಂರಕ್ಷಣೆ, ಮಳೆನೀರು ಕೊಯ್ಲು, ಪರ್ಯಾಯ ಭೂಬಳಕೆ ಪದ್ಧತಿಗಳು, ಒಣ ಬೇಸಾಯದಲ್ಲಿ ತೋಟಗಾರಿಕೆ ಹಾಗೂ ಸಾವಯವ ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಹೈನುಗಾರಿಕೆ ತಂತ್ರಜ್ಞಾನ, ಶ್ರಮ ಕಡಿಮೆ ಮಾಡುವ ಸಾಧನಗಳ ಪ್ರದರ್ಶನವು ಸಾರ್ವಜನಿಕರನ್ನು ಆಕರ್ಷಿಸಿತು.
ರೈತರು ತಾವು ಬೆಳೆದ ಬೆಳೆಗಳು ಕೈಗೆಟುಕುವ ಸಂದರ್ಭದಲ್ಲಿ ತಲೆದೂರುವ ಕೀಟಗಳ ಹಾವಳಿಯ ನಿಯಂತ್ರಣಕ್ಕಾಗಿ ವಿವಿಧ ಬಗೆಯ ಸಾಧನಗಳ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ರೈತ ಮಹಿಳೆಯರಿಗೆ ಸಹಕಾರಿಯಾಗುವ ಉದ್ದೇಶದಿಂದ ಮಹಿಳೆಯರಿಗೆ ಶೇಂಗಾ ಕುಟ್ಟುವ, ಒಡೆಯುವ ಸಾಧನ, ಶಾವಿಗೆ, ಚಕ್ಕಲಿ ಯಂತ್ರ, ಬೆಳೆಕಾಳು, ಮಸಾಲೆ ಹುರಿಯುವ ಯಂತ್ರ, ವಿವಿಧ ಬಗೆಯ ಅತ್ಯಾಧುನಿಕ ಕುಕ್ಕರ್‌ಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹಲವು ಗ್ರಾಮಗಳಿಂದ ರೈತರು: ಗದಗ ನಗರ ಸೇರಿದಂತೆ ಶಿರಹಟ್ಟಿ, ಮುಂಡರಗಿ, ನರಗುಂದ, ರೋಣ ತಾಲೂಕು ಹಾಗೂ ಸುತ್ತಲಿನ ಗ್ರಾಮಗಳಾದ ಬಿಂಕದಕಟ್ಟಿ, ಅಣ್ಣಿಗೇರಿ, ಸಾಸ್ವಿಹಳ್ಳಿ, ಕುರ್ತಕೋಟಿ, ನರೇಗಲ್ಲ, ಹೊಸಳ್ಳಿ, ಶಿರೋಳ, ಅಡವಿಸೋಮಾಪೂರ, ಲಕ್ಕುಂಡಿ, ಹರ್ಲಾಪುರ, ಕಣವಿ, ಕೋಳಿವಾಡ, ಭದ್ರಾಪುರ ಮತ್ತಿತರ ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ರೈತರು ಕೃಷಿ ಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ಮೇಳದ ಯಶಸ್ಸಿಗೆ ಕಾರಣರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.