ರೈತರ ಅಭಿವೃದ್ಧಿಗೆ ಆದ್ಯತೆ: ಯಾವಗಲ್
ಕನ್ನಡಪ್ರಭ ವಾರ್ತೆ, ನರಗುಂದ, ಜು. 17
ನರಗುಂದ ವಿಧಾನಸಭೆ ಕ್ಷೇತ್ರ ಕೃಷಿ ಪ್ರಧಾನವಾಗಿದ್ದರಿಂದ ನನ್ನ ಅಧಿಕಾರದ ಅವಧಿಯಲ್ಲಿ ರೈತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಶಾಸಕ ಬಿ.ಆರ್.ಯಾವಗಲ್ ಹೇಳಿದರು.
ಈಚೆಗೆ ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನನ್ನ ಹಿಂದಿನ 4 ಅವಧಿಯ ಅಧಿಕಾರದಲ್ಲಿ ಸಾಕಷ್ಟು ರೈತಪರ ಅಭಿವೃದ್ಧಿ ಯೋಜನೆಗಳನ್ನು ಮಾಡಿದ ತೃಪ್ತಿ ನನಗಿದೆ. ಈ ಬಾರಿಯೂ ಸರ್ಕಾರದ ಮೇಲೆ ಹೆಚ್ಚು ಒತ್ತಡ ತಂದು ಈ ಭಾಗದಲ್ಲಿನ ರೈತರಿಗೆ ಬೇಕಾದ ಮೂಲ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೆಲವರು ಈ ಭಾಗದ ರೈತ ಸಮುದಾಯದ ದಾರಿ ತಪ್ಪಿಸುತ್ತಿದ್ದು, ಕಳಸಾ-ಬಂಡೂರಿ 1 ಸಣ್ಣ ಹಳ್ಳದ ಹೆಸರು ಹೇಳಿಕೊಂಡು ನಾವು ಅಧಿಕಾರಿಕ್ಕೆ ಬಂದರೆ ಈ ಯೋಜನೆಗಳನ್ನು 6 ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಹೇಳಿ ರಕ್ತದಲ್ಲಿ ಪತ್ರ ಬರೆದರು. ಮತ್ತು ಅವರ ಪಕ್ಷದ ಸರ್ಕಾರವು ರಾಜ್ಯದಲ್ಲಿ ಆಡಳಿತಕ್ಕೆ ಬಂದು 5 ವರ್ಷ ಗತಿಸಿದರೂ ಈ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಭಾಗದಲ್ಲಿ ಕೆಲವರು ಕಳಸಾ-ಬಂಡೂರಿ ಹೋರಾಟ ಸಮಿತಿ ಕಟ್ಟಿಕೊಂಡು ನೆಪಕ್ಕೆ ಹೋರಾಟ ಮಾಡಿ ಈ ಭಾಗದ ಜನತೆಯನ್ನು ದಾರಿ ತಪ್ಪಿಸಲು ನೋಡುತ್ತಿದ್ದಾರೆ. ಅದಕ್ಕೆ ಈ ಕಳಸಾ ಬಂಡೂರಿ ಯೋಜನೆಯಿಂದ ಈ ಭಾಗದ ರೈತರಗೆ ಹೆಚ್ಚು ನೀರು ಸಿಗುವುದಿಲ್ಲ. ಆದ್ದರಿಂದ ಮಲಪ್ರಭಾ ಆಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗಬೇಕೆಂದರೆ ಮಹಾದಾಯಿ ನದಿ ತಿರುವಿನಿಂದ ಮಾತ್ರ ಸಾಧ್ಯ. ಸುಮ್ಮನೆ ಯಾವುದಾದರೊಂದು ಹಳ್ಳದ ಹೆಸರು ಹೇಳಿ ಮುಗ್ದ ಜನತೆಯನ್ನು ದಾರಿ ತಪ್ಪಿಸಲು ಹೋಗಬೇಡಿ. ಮುಂದಿನ ದಿನಗಳಲ್ಲಿ ನನ್ನ ಅಧಿಕಾರಾವಧಿಯಲ್ಲಿ ರೈತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಅವರ ನೋವು-ನಲಿವುಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಧಶರಥ ಗಾಣಿಗೇರ, ದೇಸಾಯಿಗೌಡ ಪಾಟೀಲ, ವಿಠಲ ಶಿಂದೆ, ದ್ಯಾಮಣ್ಣ ಸವದತ್ತಿ, ಗ್ರಾಪಂ ಸದಸ್ಯ ಹನಮಂತ ಐನಾಪುರ, ವೈ.ಬಿ. ಮೊರಬದ, ಎಸ್.ಬಿ. ದಂಡಿನ, ಚಂದು ಮೊರಬದ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

