ಗದಗ

ಸುದ್ದಿ ಸಂಕ್ಷೇಪ

Published On :

22ಕ್ಕೆ ನೀರಾವರಿ ಇಲಾಖೆ ಸಭೆ
ಮುನಿರಾಬಾದ್: ಬೆಂಗಳೂರಿನ ವಿಕಾಸಸೌಧದಲ್ಲಿ ಬೃಹತ್ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಜಾರಿಯಲ್ಲಿರುವ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ಅವುಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನೀರಾವರಿ ಸಚಿವರು ಸಭೆ ಕರೆದಿದ್ದಾರೆ. ಸಭೆಯಲ್ಲಿ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದು, ಜು.22ರಂದು ಸಂಜೆ 5ಕ್ಕೆ ವಿಕಾಸಸೌಧದ 3ನೇ ಮಹಡಿಯಲ್ಲಿರುವ ನೀರಾವರಿ ಸಚಿವರ ಕೊಠಡಿಯಲ್ಲಿ ಸಭೆ ನಡೆಯಲಿದೆ. ಇತ್ತೀಚೆಗೆ ಮುನಿರಾಬಾದ್ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ, ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದು ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಶೀಘ್ರದಲ್ಲಿ ಬೆಂಗಳೂರಿನಲ್ಲಿ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗುವುದು ಎಂದಿದ್ದರು. ಈ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.
ಶೇ. 3.56 ಬಂಡವಾಳ ಹಿಂತೆಗೆತಕ್ಕೆ ಒಪ್ಪಿಗೆ
ನವದೆಹಲಿ: ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ನಿಂದ ಶೇ.3.56 ರಷ್ಟು ಬಂಡವಾಳ ಹಿಂತೆಗೆತಕ್ಕೆ ಸರ್ಕಾರ ನಿರ್ಧರಿಸಿದೆ. ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ನೇತೃತ್ವದ ಉನ್ನತಾಧಿಕಾರದ ಸಚಿವರ ಸಮಿತಿ ಈ ಬಗ್ಗೆ ಶಿಫಾರಸು ಮಾಡಿದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಸಾಂಸ್ಥಿಕ ಹೂಡಿಕೆ ಮೂಲಕ ಈ ಕ್ರಮ ಕೈಗೊಳ್ಳಲಾಗುವುದು. ತಮಿಳುನಾಡು ಮೂಲದ ಕಂಪನಿಯಿಂದ ಶೇ.5ರಷ್ಟು ಬಂಡವಾಳ ಹಿಂತೆಗೆತಕ್ಕೆ ನಿರ್ಧರಿಸಲಾಗಿತ್ತು.
ಡೆಂಘೀಗೆ ಬಾಲಕ ಬಲಿ
ತುರುವೇಕೆರೆ: ತಾಲೂಕಿನ ದುಂಡ ಗ್ರಾಮದಲ್ಲಿ ಡೆಂಘೀಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಗ್ರಾಮದ ಲೋಕೇಶ್ ಎಂಬುವವರ ಮಗ ದರ್ಶನ್ (10) ಎಂದು ಎಂಬುವವನೇ ಸಾವನ್ನಪ್ಪಿದ ಬಾಲಕ. ಕಳೆದ ನಾಲ್ಕೈದು ದಿನಗಳ ಹಿಂದೆ ದರ್ಶನ್ಗೆ ಜ್ವರ ಕಾಣಿಸಿಕೊಂಡಿದೆ. ಕೂಡಲೇ ದಂಡಿನಶಿವರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಆಸ್ಪತ್ರೆಗೆ ಕಳಿಸಿದ್ದಾರೆ. ಅಲ್ಲೂ ಸಹ ಚಿಕಿತ್ಸೆಗೆ ದರ್ಶನ್ ಸ್ಪಂದಿಸಲಿಲ್ಲ ಎನ್ನಲಾಗಿದೆ. ಅಂತಿಮವಾಗಿ ದರ್ಶನ್ನನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದರ್ಶನ್ ಮಂಗಳವಾರ ರಾತ್ರಿ ಕೊನೆಯುಸಿರೆಳೆದ.
18 ಕುರಿ ಸಾವು
ಲಕ್ಷ್ಮೇಶ್ವರ: ಮಾಲೀಕನೆ ತನ್ನ ಕುರಿಗಳಿಗೆ ಮಿತಿಮೀರಿ ಔಷಧ ನೀಡಿದ್ದರಿಂದ 18 ಕುರಿಗಳು ಸಾವನ್ನಪ್ಪಿದ ಘಟನೆ ಸಮೀಪದ ಬಾಲೆಹೊಸೂರನಲ್ಲಿ ಬುಧವಾರ ಬೆಳಗ್ಗೆ ಜರುಗಿದೆ. ಸಮೀಪದ ಬಾಲೆಹೊಸೂರಿನ ಕುರಿಗಾರ ನಿಂಗಪ್ಪ ಗುಡ್ಡಪ್ಪ ಕರೆಣ್ಣವರ ತನ್ನ 200 ಕುರಿಗಳು ಕೆಮ್ಮುತ್ತಿರುವುದಕ್ಕೆ ಶಿಗ್ಲಿಯ ಪಶು ಆಸ್ಪತ್ರೆಯಿಂದ ಔಷಧವನ್ನು ತಂದಿದ್ದಾನೆ. ಆಗ ಪಶು ವೈದ್ಯ ಡಾ. ಎಸ್.ಎಸ್. ಸಜ್ಜನರ, ಪ್ಲುವೀಸ್ ನ್ಯೂಕ್ಸೋವೊಮಿಕಾ ಎನ್ನುವ 500 ಗ್ರಾಂ ಪೌಡರ್ ನೀಡಿದ್ದಾರೆ. 300 ಕುರಿಗಳಿಗೆ ಒಂದು ಪಾಕೆಟ್ (500 ಗ್ರಾಂ) ಔಷಧವನ್ನು ನೀಡಬೇಕೆಂದು ತಿಳಿಸಿ ಔಷಧ ನೀಡಿದ್ದಾರೆ. ಆದರೆ, ಕುರಿಗಾರ ಒಟ್ಟು 3 ಪಾಕೆಟ್ ಔಷಧವನ್ನು ತೆಗೆದುಕೊಂಡು ಬಂದು, ಬುಧವಾರ ಬೆಳಗ್ಗೆ ತನ್ನ 200 ಕುರಿಗಳಿಗೆ ಒಮ್ಮೆಲೆ 2 ಪಾಕೆಟ್ ಔಷಧ ನೀಡಿದ್ದಾನೆ. ಹೀಗೆ ಮಿತಿ ಮೀರಿದ ಪ್ರಮಾಣದ ಔಷಧ ಸೇವನೆ ಮಾಡಿದ ಕೆಲ ಸಮಯದ ನಂತರ ಕುರಿಗಳು ಮೃತಪಟ್ಟಿವೆ.
'ದೋಗ್ರ ಪೂಜಾರಿ ಸ್ಮಾರಕ' ಪ್ರಶಸ್ತಿ ಪ್ರದಾನ
ಮಂಗಳೂರು: ತೆಂಕು ಹಾಗೂ ಬಡಗು, ಬಡಾಬಡಗು ತಿಟ್ಟಿನ ಸವ್ಯಸಾಚಿ ಸ್ತ್ರೀವೇಷ ಕಲಾವಿದ, 50 ವರ್ಷದಲ್ಲಿ 11 ಮೇಳಗಳಲ್ಲಿ ತಿರುಗಾಟ ನಡೆಸಿದ 73 ವರ್ಷದ ಕೊಕ್ಕಡ ಈಶ್ವರ ಭಟ್ರಿಗೆ ಬೋಳೂರು ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ ಬುಧವಾರ ಮಂಗಳೂರು ಪುರಭವನದಲ್ಲಿ ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವರು 10 ಸಾವಿರ ನಗದು, ಪ್ರಶಸ್ತಿಪತ್ರ ಒಳಗೊಂಡ ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್, ಮಂಗಳೂರು ಹರಿಕಥಾ ಪರಿಷತ್ತು ಅಧ್ಯಕ್ಷ ಮಹಾಬಲ ಶೆಟ್ಟಿ ಹಾಜರಿದ್ದರು.
ಪಡಿತರ ಅಕ್ಕಿ ಅಕ್ರಮ ದಾಸ್ತಾನು: ದಾಳಿ
ಗದಗ: ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಘಟನೆ ಬುಧವಾರ ಜರುಗಿದೆ.  ನಗರದ ಕುಷ್ಟಗಿಯವರ ಗೋದಾಮಿನ ಹಿಂಬದಿಯಲ್ಲಿ ಸುಮಾರು 100 ಚೀಲ ಅಕ್ಕಿಯನ್ನು ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶಶಿಧರ್ ಕುರೇರ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಅಕ್ಕಿಯನ್ನು ವಶ ಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.