ಹೆಸರು ಬೆಳೆಗೆ ಸೀರುಹುಳು ಕಾಟ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 18
ಮುಂಗಾರು ಮಳೆ ರಾಜ್ಯದ ಬಹುತೇಕ ಕಡೆಗಳಲ್ಲಿ ಉತ್ತಮವಾಗಿದ್ದರೆ, ಗದಗ ಜಿಲ್ಲೆಯ ರೈತನ ಬಗ್ಗೆ ಮಳೆ ಮುನಿಸಿಕೊಂಡಂತಾಗಿದೆ.
ಇಷ್ಟೂ ಸಾಲದು ಎಂಬಂತೆ ಬೆಳೆದ ಅಲ್ಪಸ್ವಲ್ಪ ಬೆಳೆಗೆ ಇಲ್ಲ ಸಲ್ಲದ ರೋಗಗಳ ಬಾಧೆ ಕಾಡುತ್ತಿದ್ದರಿಂದ ರೈತರಿಗೆ ಮತ್ತೆ ಬರೆ ಎಳೆದಂತಾಗಿದೆ. ಹೆಸರು ಬೆಳೆಗೆ ಸೀರುಹುಳು ಬಾಧೆ ಕಾಣಿಸಿಕೊಂಡಿದ್ದು, ರೈತರಲ್ಲಿ ಸಂಕಷ್ಟವನ್ನುಂಟು ಮಾಡಿದೆ.
ಲಕ್ಷ್ಮೇಶ್ವರ ಹೋಬಳಿಯ ರಾಮಗೇರಿ, ಶಿಗ್ಲಿ, ಗೊಜನೂರು, ಅಕ್ಕಿಗುಂದ ಮಾಗಡಿ, ಪು.ಬಡ್ನಿ, ಬಟ್ಟೂರು, ಬಸಾಪುರ, ಹುಲ್ಲೂರ ಪ್ರದೇಶಗಳಲ್ಲಿ ಈ ಹಿಂದೆ ಆಗಿದ್ದ ಅಲ್ಪ ಮಳೆಗೆ ಮುಂಗಾರಿನ ಹಂಗಾಮಿನಲ್ಲಿ ಹೆಸರು, ಶೇಂಗಾ, ಬಿಟಿ ಹತ್ತಿ, ಈರುಳ್ಳಿ ಮುಂತಾದವಗಳನ್ನು ರೈತರು ಬಿತ್ತನೆ ಮಾಡಿದ್ದರು. ಮಳೆಯ ಕೊರತೆಯಿಂದ ಹೆಸರು ಬೆಳೆಗೆ ರಸ ಹೀರುವ ಸೀರು ಹುಳುಗಳ ಬಾಧೆ ಕಾಣಿಸಿಕೊಂಡಿದ್ದು ಹೆಸರು ಬೆಳೆಯನ್ನೇ ಖಾಲಿ ಮಾಡಿವೆ.
ಲಕ್ಷ್ಮೇಶ್ವರದ ರೈತ ಬಸವರಾಜ ಕಟ್ಟಿಮನಿ ಅವರ 2 ಎಕರೆಯಲ್ಲಿ ಮುಂಗಾರು ಹೆಸರನ್ನು ಬಿತ್ತನೆ ಮಾಡಿದ್ದಾರೆ. ಆದರೆ, ಈ ಹೆಸರು ಬೆಳೆಗೆ ರಸ ಹೀರುವ ಸೀರು ಬಾಧೆ ಕಾಣಿಸಿಕೊಂಡಿದ್ದು, ಹೆಸರು ಬೆಳೆ ಸರಿಯಾಗಿ ಬೆಳೆಯದೆ ಕುಂಠಿತಗೊಂಡಿದೆ. ಬೆಳೆಯ ಬಹುತೇಕ ಭಾಗಗಳಲ್ಲಿ ಸೀರುಗಳು ಮೆತ್ತಿಕೊಂಡು ಎಲೆ, ಹೀಚು, ಕಾಂಡಗಳು ರೋಗದ ಬಾಧೆಗೆ ತುತ್ತಾಗುತ್ತಿದ್ದು, ರೈತರಿಗೆ ಏನು ಮಾಡಬೇಕೆಂದು ತೋಚದಂತಾಗಿದೆ ಎಂದು ರೈತ ಬಸವರಾಜ ಹೇಳುತ್ತಾರೆ. ಮಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಈಗ ಬೆಳೆದ ಬೆಳೆಗಳು ಕಾಡುತ್ತಿರುವ ರಸ ಹೀರುವ ಸೀರು, ಹೇನು, ಹುಳು ಮತ್ತಿತರ ಕೀಟಗಳು ಇನ್ನಷ್ಟು ತೊಂದರೆ ಕೊಡುತ್ತಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆ ಆಗಿರುವುದರಿಂದ ಶೇಂಗಾ ಬೆಳೆಗೆ ಸುರುಳಿ ಪೂಚಿ ರೋಗ ಕಾಣಿಸಿಕೊಂಡು ಶೇಂಗಾ ಬೆಳೆಯ ಎಲೆಗಳು ಉದುರುತ್ತಿವೆ. ಅಲ್ಲದೆ ಬಿಟಿ ಹತ್ತಿ ಬೆಳೆಗೆ ಎಲೆ ಕೆಂಪು ರೋಗ ಬರುತ್ತಿದೆ. ರಸ ಹೀರುವ ಕೀಟಗಳ ಬಾಧೆ ಪ್ರಾರಂಭವಾಗಿದೆ. ತೇವಾಂಶದ ಕೊರತೆಯಿಂದ ಕೆಲ ಕಡೆಗಳಲ್ಲಿ ಶೇಂಗಾ, ಬಿಟಿ, ಹೆಸರು, ಗೋವಿನ ಜೋಳ, ಈರುಳ್ಳಿ, ಮತ್ತಿತರ ಬೆಳೆಗಳು ಒಣಗುತ್ತಿವೆ. ಒಟ್ಟಿನಲ್ಲಿ ದೇಶದ ಬೆನ್ನೆಲುಬಾಗಿರುವ ರೈತನ ಬಾಳು ಮತ್ತೆ ಸಂಕಷ್ಟಕ್ಕೆ ಗುರಿಯಾಗುವತ್ತ ಸಾಗಿದ್ದು, ವರುಣನ ಕೃಪೆಗಾಗಿ ರೈತರು ದೇವರ ಮೊರೆ ಹೋಗುತ್ತಿದ್ದಾರೆ.
ಹಲವು ದಿನಗಳಿಂದ ಸಮರ್ಪಕ ಮಳೆಯಿಲ್ಲದೇ ಬೆಳೆದ ಬೆಳೆಗಳೆಲ್ಲಾ ಬಾಡುವ ಹಂತದಲ್ಲಿದ್ದವು. 2-3 ದಿನಗಳಿಂದ ಸುರಿದ ತುಂತುರು ಮಳೆಯಿಂದಾಗಿ ಹೆಸರು ಬೆಳೆ ಚೇತರಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಹೆಸರು ಬೆಳೆಗೆ ಸೀರು ಹುಳು ಬಾಧೆಯಿಂದಾಗಿ ಬೆಳೆ ಹಾಳಾಗುತ್ತಿದೆ. ಮತ್ತೆ ಸಾವಿರಾರು ರುಪಾಯಿ ಖರ್ಚು ಮಾಡಿ ಔಷಧೋಪಚಾರ ಮಾಡಬೇಕು. ಇಲ್ಲವಾದಲ್ಲಿ ಇದ್ದ ಅಲ್ಪ ಸ್ವಲ್ಪ ಬೆಳೆಯು ರೋಗಗಳಿಗೆ ತುತ್ತಾಗುತ್ತವೆ.
- ಶಂಕ್ರಪ್ಪ ಗುರಿಕಾರ, ಶೇಖಪ್ಪ ಅಂದಲಗಿ, ರೈತರು
ಲಕ್ಷ್ಮೇಶ್ವರ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಸರು ಬೆಳೆಗೆ ಸೀರು ಹುಳು ಬಾಧೆ ರೋಗದ ಕುರಿತು ಗಮನಕ್ಕೆ ಬಂದಿದ್ದು, ಈ ರೋಗದ ಹತೋಟಿಗೆ ಬೇಕಾದ ಕ್ರಮ ಕೈಗೊಳ್ಳಲಾಗಿದೆ. ನಾನು ಇಂತಹ ಹೊಲಕ್ಕೆ ಭೇಟಿ ನೀಡಿ ರೋಗದ ಬಾಧೆ ನೋಡಿ ಯಾವ ಔಷಧವನ್ನು ಸಿಂಪಡಣೆ ಮಾಡಬೇಕು ಎಂಬುದರ ಕುರಿತು ರೈತರಿಗೆ ಸಲಹೆ ನೀಡುತ್ತೇನೆ.
- ನದಾಫ, ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ
-ಅಶೋಕ ಸೊರಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

