ಗದಗ

ಪೊಲೀಸರ ಗುಂಡಿಗೆ ಪ್ರಾಣತೆತ್ತ ರೈತರು

Published On :

ಕನ್ನಡಪ್ರಭ ವಾರ್ತೆ, ನರಗುಂದ, ಜು. 20
ರೈತ ಬಂಡಾಯದ ಮೂಲಕ ಇಡೀ ದೇಶಕ್ಕೆ ನರಗುಂದ ಎನ್ನುವುದು ಗೊತ್ತಾಗುವಂತಾಯಿತು. ಅಂದು ರೈತರು ಸರ್ಕಾರದ ಧೋರಣೆಯ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡಿ ಗೋಲಿಬಾರ್ನಲ್ಲಿ ತಮ್ಮ ಪ್ರಾಣತೆತ್ತರು.
ಇದರಿಂದ ರಾಜ್ಯಾದ್ಯಂತ ರೈತರ ಹೋರಾಟ ತೀವ್ರಗೊಂಡು ಅಂದಿನ ಸಿಎಂ ಗುಂಡೂರಾವ್ ಸರ್ಕಾರವೇ ಬಿದ್ದು ಹೋಯಿತು. ಇದು ನಡೆದು 3 ದಶಕ ಕಳೆದಿದೆ. ಅಂದು ಪೊಲೀಸರ ಗುಂಡಿಗೆ ಎದೆಯೊಡ್ಡಿ ಮೃತಪಟ್ಟ ವೀರ ರೈತರ ಸ್ಮರಣೆಯನ್ನು ನಮ್ಮ ಸರ್ಕಾರಗಳು ಕೇವಲ ಮಾಲಾರ್ಪಣೆ ಮಾಡಿ ಆಚರಿಸುವ ಮೂಲಕ ಕೈ ತೊಳೆದುಕೊಳ್ಳುತ್ತಿವೆ.
ನೀರಿನ ಕರ ವಿರುದ್ಧ ಹೋರಾಟ: ಮಲಪ್ರಭಾ ಜಲಾಶಯ ಕಾಲುವೆಗಳ ಮೂಲಕ ಈ ಭಾಗದ ರೈತರು ನೀರಾವರಿ ಮಾಡುತ್ತಿದ್ದರು. ಇದೇ ವಿಷಯವಾಗಿ ರೈತರು ಮತ್ತು ಸರ್ಕಾರದ ಮಧ್ಯೆ ಸಾಕಷ್ಟು ಗೊಂದಲ ಉಂಟಾಯಿತು. ಸರ್ಕಾರವು ರೈತರ ಜಮೀನುಗಳ ಪಹಣಿ ಪತ್ರದಲ್ಲಿ ಸರ್ಕಾರ ಎಂದು ನಮೂದಿಸಿ ರೈತರಿಗೆ ಸರ್ಕಾರದ ಸೌಲಭ್ಯ ಮತ್ತು ಕೃಷಿ ಸಾಲ ಸಿಗದಂತೆ ಮಾಡಿದ್ದರಿಂದ ಈ ಭಾಗದ ರೈತರು ಜುಲೈ 21, 1980 ರಂದು ಸರ್ಕಾರ ವಿರುದ್ಧ ಬೀದಿಗಿಳಿದು ಹೋರಾಟಕ್ಕೆ ನಿಂತರು. ತಹಸೀಲ್ದಾರ್ ಕಾರ್ಯಾಲದ ಒಳಗೆ ನುಗ್ಗುವ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ರೈತರ ಮಧ್ಯೆ ಮಾತಿನ ಚಕಮಕಿ ನಡೆದು ಪೊಲೀಸರು ಇದನ್ನು ನಿಯಂತ್ರಿಸಲು ಗೋಲಿಬಾರ್ ಮಾಡದ್ದರಿಂದ ತಾಲೂಕಿನ ಚಿಕ್ಕನರಗುಂದ ಯುವ ರೈತ ಈರಪ್ಪ ಕಡ್ಲಿಕೋಪ್ಪ ಗುಂಡಿಗೆ ಬಲಿ ಆಗಬೇಕಾಯಿತು. ಇದರಿಂದ ರೈತರು ರೊಚ್ಚಿಗೆದ್ದು ಸರ್ಕಾರಿ ಕಚೇರಿ ದಾಖಲೆಗಳಿಗೆ ಬೆಂಕಿ ಹಚ್ಚಿ 9 ಸರ್ಕಾರಿ ಅಧಿಕಾರಿಗಳನ್ನು ಈ ಬಂಡಾಯ ಬಲಿ ತೆಗೆದುಕೊಂಡು, ಇದೇ ರೀತಿ ಆವತ್ತಿನ ದಿನ ನವಲಗುಂದ ತಾಲೂಕಿನಲ್ಲಿ ರೈತ ಬಂಡಾಯ ನಡೆದು ಅಲ್ಲಿಯ ರೈತನೂ ಪೊಲೀಸರ ಗುಂಡಿಗೆ ಬಲಿಯಾಗಿ, ರಾಜ್ಯದಲ್ಲಿ ದೊಡ್ಡ ಕ್ರಾಂತಿಯೇ ನಡೆದು ಹೋಯಿತು.
ರೈತರ ಹೆಸರಿನಲ್ಲಿ ರಾಜಕಾರಣ: ಮಲಪ್ರಭೆಗೆ ಕಳಸಾ ಬಂಡೂರಿ ನಾಲೆಗಳನ್ನು ಜೋಡಣೆ ಮಾಡಿದರೆ ಈ ಭಾಗದ ರೈತರ ಜಮೀನುಗಳಿಗೆ ಮತ್ತು ಕುಡಿಯುವ ನೀರಿನ ತೊಂದರೆ ನೀಗಿಸಬಹುದೆಂದು ಆಗಿನ ಬಿಜೆಪಿ ನಾಯಕರು ಈ ಭಾಗದಲ್ಲಿ ಪಾದಯಾತ್ರೆ ಮಾಡಿ, ಪಟ್ಟಣದಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ ತಮ್ಮ ರಕ್ತದಲ್ಲಿ ಪತ್ರ ಬರೆದು ಆಗಿನ ಕಾಂಗ್ರೆಸ್ ಪಕ್ಷಕ್ಕೆ ಈ ಕಾಮಗಾರಿ ಪ್ರಾರಂಭಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು. ಮುಂದೆ ಕಾಂಗ್ರೆಸ್ ಸರ್ಕಾರ ಪತನಗೊಂಡು ಇದೇ ರಕ್ತದಲ್ಲಿ ಪತ್ರ ಬರೆದವರ ಸರ್ಕಾರ ಬಂತು. 6 ತಿಂಗಳಲ್ಲಿ ಈ ಕಾಮಗಾರಿ ಸಂಪೂರ್ಣ ಮುಗಿಸುತ್ತೇವೆಂದು ಹೇಳಿದವರು 5 ವರ್ಷ ಸರ್ಕಾರ ನಡೆಸಿದರೂ ಕಾಮಗಾರಿ ಮಾತ್ರ ಮುಗಿಸಲಿಲ್ಲ.
ಒಗ್ಗಟ್ಟಿನ ಕೊರತೆ: ಈ ಭಾಗದ ರೈತರು ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರಿಂದ ಯಾವುದೇ ರೈತ ಹೋರಾಟದಲ್ಲಿ ಭಾಗವಹಿಸಬೇಕೆಂದರೆ ಅವರ ಪಕ್ಷದ ನಾಯಕರಿಗೆ ಹೆದರಿ ಭಾಗವಹಿಸಲಾರದ ಸ್ಥಿತಿಗೆ ಈ ಭಾಗದ ರೈತರು ಬಂದಿದ್ದಾರೆ. ಮೇಲಾಗಿ ಈ ಭಾಗದಲ್ಲಿ ಇಂದು 3 ವರ್ಷದಿಂದ ಭೀಕರ ಬರಗಾಲ ಒಂದೆಡೆ ಆವರಿಸಿದರೆ, ಇನ್ನೊಂದೆಡೆ ಕೆಳ ಭಾಗದ (ಕಾಲುವೆ ಕೊನೆಯ) ರೈತರ ಜಮೀನುಗಳಿಗೆ ನೀರು ಸಿಗುತ್ತಿಲ್ಲ. ಇದೆಲ್ಲ ಸಮಸ್ಯೆಗಳ ಮಧ್ಯೆಯೇ ಮತ್ತೆ ರೈತ ಹುತಾತ್ಮ ದಿನಾಚರಣೆ ಬಂದಿದೆ. ನಮ್ಮ ಸರ್ಕಾರ ಮತ್ತು ಆಳುವ ದೊರೆಗಳು (ಎಲ್ಲ ಪಕ್ಷಗಳ) ಹುತಾತ್ಮ ದಿನಾಚರಣೆಯಂದು ರೈತರ ವೀರ ಗಲ್ಲಿಗೆ ಮಾಲಾರ್ಪಣೆ ಮಾಡಿ, ನಾಲ್ಕಾರು ದೊಡ್ಡ ಮಾತುಗಳನ್ನು ಹೇಳಿ ಹೋಗುವುದಕ್ಕಾಗಿಯೇ ಈ ದಿನವನ್ನು ಸೀಮಿತಗೊಳಿಸಿದ್ದು, ಇನ್ನಾದರೂ ರೈತರ ಅಭಿವೃದ್ಧಿಗಾಗಿ ಯೋಜನೆ ರೂಪಿಸಿ, ಆ ಮೂಲಕ ಹುತಾತ್ಮ ರೈತರಿಗೆ ಗೌರವ ಸಲ್ಲಿಸುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ.
ಇಂದು ನರಗುಂದಕ್ಕೆ ಜೋಶಿ
ನರಗುಂದ:  1980 ಜುಲೈ 21ರ ರೈತ ಹೋರಾಟದಲ್ಲಿ ಮಡಿದ ವೀರ ರೈತರ 34ನೇ ರೈತ ಹುತಾತ್ಮ ದಿನಾಚರಣೆಯನ್ನು ಜು. 21 ರಂದು ನರಗುಂದಲ್ಲಿ ಆಯೋಜಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕಳಕಪ್ಪ ಬಂಡಿ, ಅಣ್ಣಪ್ಪಗೌಡ ಪಾಟೀಲ ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.


-ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.