ಆಹಾರ ಭದ್ರತೆಗಿಂತ ಕೃಷಿ ಭದ್ರತೆ ಕಾನೂನು ಜಾರಿಯಾಗಲಿ
ಕನ್ನಡಪ್ರಭ ವಾರ್ತೆ, ಗದಗ, ಜು. 21
ದೇಶದಲ್ಲಿ ಆಹಾರ ಭದ್ರತೆ ಉಂಟಾಗಬೇಕಾದಲ್ಲಿ ಕೃಷಿ ಕ್ಷೇತ್ರ ಸದೃಢವಾಗಿರಬೇಕು. ಅದಕ್ಕಾಗಿ ಮೊದಲು ಕೃಷಿ ಭದ್ರತೆ ಕಾನೂನು ಜಾರಿಗೆ ಬರಬೇಕು ಎಂದು ರೈತ ಸಂಘದ ಹಿರಿಯ ಮುಖಂಡ, ಶಾಸಕ ಕೆ.ಎಸ್. ಪುಟ್ಟಣಯ್ಯ ಹೇಳಿದರು.
ಅವರು ಭಾನುವಾರ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.
ಕೃಷಿ ಮಾಡುವವರು ಎಂದರೆ ಆಹಾರ ಧಾನ್ಯ ಬೆಳೆಯುವವರು ಎಂದಷ್ಟೇ ನಮ್ಮ ರಾಜಕೀಯ ನಾಯಕರು ತಿಳಿದುಕೊಂಡಿದ್ದಾರೆ. ಇದು ತಪ್ಪು, ಕೋಟ್ಯಂತರ ಜನರಿಗೆ ಉದ್ಯೋಗ ಕಲ್ಪಿಸಿರುವ ಉದ್ಯಮ ಎಂದು ಕೃಷಿ ವಲಯವನ್ನು ಯಾರೂ ಪರಿಗಣಿಸುತ್ತಿಲ್ಲ. ಇಷ್ಟೊಂದು ದಶಕಗಳು ಕಳೆದರೂ ದೇಶದ ಯಾವೊಬ್ಬ ಆರ್ಥಿಕ ತಜ್ಞರು. ಮೂಲ ಕೃಷಿ ಬಂಡವಾಳ ಹೂಡಿಕೆಯ ಬಗ್ಗೆಯಾಗಲಿ, ಅದು ಹಾನಿಯಾದಾಗ ಅನುಭವಿಸುವ ಕೃಷಿ ನಷ್ಟದ ಕುರಿತು ಎಲ್ಲಿಯೂ ಪ್ರಸ್ತಾಪಿಸಿಲ್ಲ.ಹತ್ತಿಯೊಂದನ್ನೇ ತೆಗೆದುಕೊಳ್ಳಿ, ಇದರಿಂದ ದೇಶದಲ್ಲಿ 30 ಕೋಟಿ ಉದ್ಯೋಗ ಸೃಷ್ಟಿಯಾಗಿವೆ. 7 ವಿವಿಧ ಬಗೆಯ ಟ್ಯಾಕ್ಸ್ಗಳು ಸರ್ಕಾರಕ್ಕೆ ಸಂದಾಯವಾಗುತ್ತವೆ. ಆದರೆ, ಹತ್ತಿ ಬೆಳೆಗಾರನ ಬೆಲೆಯನ್ನು ಮಾತ್ರ ಯಾರೋ ದಲ್ಲಾಳಿ ನಿರ್ಧರಿಸಿ, ಅರ್ಧ ಬೆಲೆಗೆ ಖರೀದಿಸುತ್ತಾನೆ. ದೇಶದ ರೈತ ಹತ್ತಿ ಬೆಳೆಯದಿದ್ದರೆ ಎಲ್ಲರೂ ಬೆತ್ತಲಾಗಿ ನಡೆದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಸಾರ್ವಜನಿಕರ ಮಾನ ಮುಚ್ಚುವ ರೈತನಿಗೆ ಮಾತ್ರ ಶೋಷಣೆ ತಪ್ಪುತ್ತಿಲ್ಲ.
ಕಬ್ಬು ಬೆಳೆಯಿಂದ 28 ಕೋಟಿ ಉದ್ಯೋಗ ಸೃಷ್ಟಿಯಾಗುತ್ತವೆ. ಉತ್ಪಾದನೆಯಾಗುವ ಸಕ್ಕರೆಯ ಶೇ. 10ರಷ್ಟು ಮಾತ್ರ ಸಾರ್ವಜನಿಕ ಬಳಕೆಗೆ ಬರುತ್ತದೆ. ಇನ್ನುಳಿದ ಸಕ್ಕರೆ ಚಾಕಲೇಟ್, ಸಿಹಿ ಪಾನೀಯ ಸೇರಿದಂತೆ ಶೇ. 90 ರಷ್ಟು ಬಳಕೆಯಾಗುತ್ತದೆ. ಸರ್ಕಾರಗಳು ಕೈಗಾರಿಕೆಗಳಿಗೆ ನೀಡುವ ಸಕ್ಕರೆಗೆ ಕೆಜಿಗೆ ರು. 70 ನಿಗದಿ ಮಾಡಲಿ, ಸಾರ್ವಜನಿಕರಿಗೆ ಕೆಜಿಗೆ ರು. 5ಕ್ಕೆ ಸಕ್ಕರೆ ನೀಡಲಿ. ಕೈಗಾರಿಕೆಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರಿಂದ ಬರುವ ಹಣದಲ್ಲಿ ರೈತರಿಗೆ ಉತ್ತಮ ಬೆಲೆ ನೀಡಬೇಕು. ಇದ್ಯಾವುದನ್ನು ನಾಯಕರು ಮಾಡುತ್ತಿಲ್ಲ. ರೈತ ಬೆಳೆದ ಪ್ರತಿಯೊಂದು ಬೆಳೆಗೂ ಬೆಲೆ ನಿಗದಿ ಮಾಡುವ ಹಕ್ಕನ್ನು ರೈತನಿಗೆ ನೀಡಬೇಕು. ನಮ್ಮ ಹತ್ತಿಯಿಂದಲೇ ಸಿದ್ಧಪಡಿಸಿದ ಬಟ್ಟೆಯ ಬೆಲೆಯನ್ನು ಕಂಪನಿ ಮಾಲೀಕ ನಿರ್ಧರಿಸಿದರೆ, ನಾವು ಬೆಳೆದ ಬೆಳೆಯ ಬೆಲೆಯನ್ನು ಮತ್ತೊಬ್ಬ ನಿರ್ಧರಿಸುತ್ತಿದ್ದು, ಇದು ರೈತರ ಬೆವರು ಮತ್ತು ಶ್ರಮದ ಹರಾಜು ಎಂದರೆ ತಪ್ಪಾಗಲಾರದು ಎಂದರು.
ಬದುಕುವ ಭಾಗ್ಯ ಕೊಡಿ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಪ್ರಾರಂಭಿಸಿದೆ. ಇದು ಸ್ವಾಗತಾರ್ಹ. ಆದರೆ, ನಾನು ಸರ್ಕಾರಕ್ಕೆ ಕೇಳ್ತೇನೆ...ಸ್ವಾಮಿ, ಅನ್ನಭಾಗ್ಯ ಆಮೇಲೆ ಕೊಡುವಿರಂತೆ ಮೊದಲು ಬದುಕುವ ಭಾಗ್ಯ ಕೊಡ್ರಿ. ಕೋಟ್ಯಂತರ ರೈತರು ನೂರಾರು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಉತ್ತಮ ಜೀವನ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಿ. ಕೃಷಿ ಕ್ಷೇತ್ರದಿಂದ ಲಕ್ಷಾಂತರ ಯುವಕರು ವಿಮುಖರಾಗುತ್ತಿದ್ದು, ಅದನ್ನು ತಪ್ಪಿಸಿ, ಇಲ್ಲವೇ ದೇಶದಲ್ಲಿ ಆಹಾರ ಕೊರತೆ ಉಂಟಾಗಿ, ಎಲ್ಲರೂ ನಗರಗಳನ್ನೇ ಅರಸಿ ಬಂದಲ್ಲಿ ಕೃಷಿ ಕ್ಷೇತ್ರ ನಶಿಸಿಹೋಗಲಿದೆ. ಈ ಎಲ್ಲ ಸೂಕ್ಷ್ಮತೆ ಆಳುವ ಸರ್ಕಾರದ ಗಮನಕ್ಕೆ ಬರದೇ ಇರುವುದು ಅತೀವ ನೋವಿನ ಸಂಗತಿ.
ಉಚಿತ ಸಮಾನ ಶಿಕ್ಷಣ ಜಾರಿಗೆ ಬರಲಿ: ಶಿಕ್ಷಣ ವ್ಯವಸ್ಥೆಯಲ್ಲೂ ರೈತರ ಮಕ್ಕಳಿಗೆ ಸಾಕಷ್ಟು ಶೋಷಣೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ಹಾಗೂ ನಗರ ಪ್ರದೇಶದಲ್ಲಿನ ಶಾಲೆಗಳನ್ನು ನೀವು ಹೋಲಿಕೆ ಮಾಡಿದರೆ ತಿಳಿಯುತ್ತದೆ. ಅದಕ್ಕಾಗಿ ಉಚಿತ ಸಮಾನ ಶಿಕ್ಷಣ ಕಾಯ್ದೆ ಜಾರಿಗೆ ತರಬೇಕು. ನಗರ ಪ್ರದೇಶದ ಮಾದರಿಯಲ್ಲಿಯೇ ಹಳ್ಳಿಗಳಲ್ಲಿರುವ ರೈತರ ಮಕ್ಕಳಿಗೂ ಉತ್ತಮ ಹಾಗೂ ಉನ್ನತ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುವುದು. ಬಡವರು ಇನ್ನಷ್ಟು ಬಡವರಾಗುತ್ತಾ ಹೋಗುತ್ತಿರುವ ಈ ಶಿಕ್ಷಣ ವ್ಯವಸ್ಥೆ ನಮ್ಮ ರೈತರಿಗೆ ಬೇಡ ಎಂದರು.
6 ತಿಂಗಳು ತರಬೇತಿ ನೀಡಲಿ: ಇಂದು ವಿಧಾನಸೌಧದಲ್ಲಿರುವ ಶಾಸಕರಲ್ಲಿ ಬಹುತೇಕರಿಗೆ ಶ್ರಮ ಅಂದ್ರೆನೇ ಗೊತ್ತಿಲ್ಲ. ಬರಗಾಲ, ಬವಣೆ, ರೈತ, ಕೂಲಿ ಕಾರ್ಮಿಕರ ಶ್ರಮದ ಅರಿವಿಲ್ಲ. ಹಾಗಾಗಿ ದೇಶದಲ್ಲಿ ವಿಧಾನಸಭೆಗೆ ಆಯ್ಕೆ ಬಯಸುವವರಿಗೆ ಮೊದಲೇ 6 ತಿಂಗಳ ಕಠಿಣ ತರಬೇತಿಯನ್ನು ನೀಡಬೇಕು.
ಕಷ್ಟ ಮತ್ತು ಬೆವರಿನ ಬೆಲೆಯನ್ನು ಅವರು ಅರಿತಾಗಲೇ ನೊಂದವರ ಧ್ವನಿಯಾಗಿ ಕೆಲಸ ಮಾಡತ್ತಾರೆಯೇ ಹೊರತು ಇಲ್ಲವಾದಲ್ಲಿ ಇದೆಲ್ಲ ಸಾಧ್ಯವಿಲ್ಲ. ಸಮಗ್ರ ಕೃಷಿ ನೀತಿಗಳು ದೇಶದಲ್ಲಿ ಜಾರಿಯಾಗಬೇಕಾದಲ್ಲಿ ಕೃಷಿ ಕ್ಷೇತ್ರವೂ ಒಂದು ಉದ್ಯಮ ಎಂದು ಪರಿಗಣಿಸುವಲ್ಲಿ ಈ ರೀತಿಯ ತರಬೇತಿಗಳು ಹೆಚ್ಚು ಪೂರಕವಾಗಲಿವೆ ಎಂದರು.
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

