ಸಮರ್ಥ ನಾಯಕತ್ವಕ್ಕೆ ಬಿಜೆಪಿ ಅಧಿಕಾರಕ್ಕೆ ತನ್ನಿ
ಕನ್ನಡಪ್ರಭ ವಾರ್ತೆ, ಗದಗ, ಜು. 22
ದೇಶಕ್ಕೆ ಇಂದು ಸಮರ್ಥ ನಾಯಕತ್ವದ ಅವಶ್ಯಕತೆ ಇದ್ದು, ಅದಕ್ಕಾಗಿ ನಾವೆಲ್ಲರೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಅವರು ಸೋಮವಾರ ಸಂಜೆ ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ನೂತನ ಜಿಲ್ಲಾಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 9 ವರ್ಷದಲ್ಲಿ ಯುಪಿಎ ಸರ್ಕಾರ ಮಾಡಿದ ಸಾಧನೆ ಕೇವಲ ಬೆಲೆ ಏರಿಕೆ ಹಾಗೂ ಸಾವಿರಾರು ಕೋಟಿ ಹಗರಣ, ಭಯೋತ್ಪಾದನೆ. ನಕ್ಸಲ್ ಚಟುವಟಿಕೆ, ಪಕ್ಕದ ದೇಶಗಳಾದ ಚೀನಾ ಮತ್ತು ಪಾಕಿಸ್ತಾನದಿಂದ ನಿರಂತರ ದಾಳಿ ನಡೆಯುತ್ತಿದ್ದರೂ ದೇಶದ ಪ್ರಧಾನ ಮಂತ್ರಿ ಮಾತ್ರ ತುಟಿ ಬಿಚ್ಚದೇ ಕುಳಿತಿದ್ದಾರೆ. ಇಂತವರ ನಾಯಕತ್ವ ನಮಗೆ ಬೇಡ. ಅದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ತನಕ ನಾವೆಲ್ಲ ನಿದ್ರಿಸುವುದಿಲ್ಲ ಎಂದು ಶಪಥ ಮಾಡಿ ಕೆಲಸ ಮಾಡಬೇಕು ಎಂದರು.
ಹೋಲಿಕೆ: ಪೆಟ್ರೋಲ್ ಬೆಲೆ ಏರಿಕೆಯನ್ನು ಕಾಂಗ್ರೆಸ್ ನಾಯಕರ ವಯಸ್ಸಿಗೆ ಹೋಲಿಕೆ ಮಾಡಿದ ಜೋಶಿ, ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದ ವೇಳೆಯಲ್ಲಿ ಪೆಟ್ರೋಲ್ ಬೆಲೆ ರಾಹುಲ್ ಗಾಂಧಿ ವಯಸ್ಸಿನಷ್ಟಿತ್ತು. ಯುಪಿಎ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಸೋನಿಯಾಗಾಂಧಿ ಅವರ ವಯಸ್ಸಿನಷ್ಟಾಯಿತು. 2ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಅಂದರೆ ಈಗ ಮನಮೋಹನ್ಸಿಂಗ್ ಅವರ ವಯಸ್ಸಿನಷ್ಟು ಬೆಲೆ ಹೆಚ್ಚಳವಾಗಿದೆ ಎಂದು ಯುಪಿಎ ಕಾರ್ಯವೈಖರಿಯನ್ನು ಟೀಕಿಸಿದರು.
ನಾವು ಸೋತಿಲ್ಲ, ಕಾಂಗ್ರೆಸ್ ಗೆದ್ದಿಲ್ಲ: ನಾವು ಈಚೆಗೆ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಸೋತಿಲ್ಲ, ಕಾಂಗ್ರೆಸ್ ಗೆದ್ದಿಲ್ಲ. ನಮ್ಮಲ್ಲಿರುವ ಗೊಂದಲಗಳು ಹಾಗೂ ನಮ್ಮ ಮೂಲ ಮತಗಳು ಒಡೆದು ಹೋದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾರ್ಯಕರ್ತರೇ ಸೋಲಿನ ಜಪ ಮಾಡುತ್ತಾ ಕುಳಿತುಕೊಳ್ಳಬೇಡಿ, ನಮ್ಮಮುಂದೆ ದೊಡ್ಡ ಸವಾಲಿದೆ ಅದನ್ನು ಎದುರಿಸಲು ನಾವು, ನೀವು ದೊಡ್ಡಮಟ್ಟದ ಹೋರಾಟಕ್ಕೆ ಸನ್ನದ್ಧರಾಗಬೇಕಿದೆ ಎಂದ ಅವರು, ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷದ ಆಡಳಿತ ಹಾಗೂ ಸಿದ್ದರಾಮಯ್ಯ ಮತ್ತು ಎಚ್.ಕೆ. ಪಾಟೀಲ ಕಾರ್ಯವೈಖರಿಯನ್ನು ತಮ್ಮ ವ್ಯಂಗ್ಯ ಶೈಲಿಯ ಮೂಲಕ ಕಟುವಾಗಿ ಟೀಕಿಸಿದರು.
ಕಳಕಪ್ಪ ಬಂಡಿ ನೂತನ ಅಧ್ಯಕ್ಷ: ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಆಯ್ಕೆಯನ್ನು ಗದಗ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಲಿಂಗರಾಜ ಪಾಟೀಲ ಘೋಷಣೆ ಮಾಡುತ್ತಿದ್ದಂತೆ ಸಭೆಯಲ್ಲಿ ನೆರೆದಿದ್ದ ಅಭಿಮಾನಿಗಳು ಜೋರಾದ ಚಪ್ಪಾಳೆ ಮೂಲಕ ಸ್ವಾಗತಿಸಿದರು. ಹಿಂದಿನ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ರಾಮಣ್ಣ ಲಮಾಣಿ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ರಮೇಶ ಮುಂದಿನಮನಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪರಶುರಾಮ ಹೆಬಸೂರ ನಿರೂಪಿಸಿದರು. ಸಂಗಮೇಶ ದುಂದೂರ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

