ಗದಗ

ಕಾರ್ಯಾಗಾರದಿಂದ ಸಮಸ್ಯೆ ಇತ್ಯರ್ಥ

Published On :

ಗದಗ: ಪ್ರತಿವರ್ಷ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರಿಂದ ಇಲಾಖೆಯಲ್ಲಿನ ನ್ಯೂನ್ಯತೆ ಹಾಗೂ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಿ, ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಚ್. ಆವಿನ್ ಹೇಳಿದರು.
ಅವರು ಭಾನುವಾರ ಜಿಲ್ಲಾಡಳಿತದ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಗದಗ ಜಿಲ್ಲಾ ಪೊಲೀಸ್ ಇಲಾಖೆ ಇವುಗಳ  ಆಶ್ರಯದಲ್ಲಿ ಪೊಲೀಸ್ ಹಾಗೂ ಇತರೆ ವಿವಿಧ ಅಧಿಕಾರಿಗಳೊಂದಿಗೆ ಸಮನ್ವಯ ಸಮಸ್ಯೆಗಳ ಬಗ್ಗೆ ಚರ್ಚಾಗೋಷ್ಠಿ ಹಾಗೂ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಚಲಿತ ದಿನಮಾನಗಳ ಅನುಸಾರವಾಗಿ ನಿತ್ಯ ಕಾನೂನು ತಿದ್ದುಪಡಿಯಾಗುತ್ತಿದೆ. ಈ ಕುರಿತು ಅಧಿಕಾರಿಗಳು ಅರಿತುಕೊಂಡು ಹೊಸ ಕಾನೂನು ಸಿದ್ದುಪಡಿಯನ್ನು ತಮ್ಮ ಕಾರ್ಯಗಳಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕಾಗಿದೆ. ಇಂದು ಹಮ್ಮಿಕೊಂಡಿರುವ ಈ ಕಾರ್ಯಾಗಾರವು ಶ್ಲಾಘನೀಯವಾಗಿದ್ದು, ಈ ಕಾರ್ಯಾಗಾರದಿಂದ ಪೊಲೀಸ್ ಅಧಿಕಾರಿಗಳ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ಮಧ್ಯೆ ಸಮನ್ವಯತೆ ಬೆಳೆಯಲು ಸಹಕಾರಿಯಾಗಲಿದೆ ಎಂದರು. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆಯೇ ಈಗ ಪ್ರತಿ ಜಿಲ್ಲೆಯಲ್ಲಿ ಇಂತಹ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆಯಲ್ಲಿನ ಕುಂದುಕೊರತೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಸಹಕಾರಿಯಾಗಲಿದೆ. ಪೊಲೀಸ್ ಅಧಿಕಾರಿಗಳು ಸಾಮಾಜಿಕ, ರಾಜಕೀಯ ಹಾಗೂ ಮೇಲಧಿಕಾರಿಗಳ ಒತ್ತಡಗಳ ನಡುವೆಯೂ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಹಾಗೆಯೇ ನ್ಯಾಯಾಲಯದ ಅಧಿಕಾರಿಗಳೂ ಹಲವು ಒತ್ತಡಗಳ ನಡುವೆಯ ಸಮಾಜದ ಏಳ್ಗೆಗೆ ಶ್ರಮಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜೆಗಳು ಉತ್ತಮ ಜೀವನ ನಡೆಸಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿ ಸಮಾಜವನ್ನು ಸದೃಢವಾಗಿಡಲು ಪೊಲೀಸರ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ಕಾರ್ಯ ಅತ್ಯವಶ್ಯ. ದೇಶವು ತನ್ನದೇಯಾದ ಸಂಸ್ಕೃತಿ ಹೊಂದಿದ್ದು, ಈ ಸಂಸ್ಕೃತಿಯನ್ನು ಮೀರಿ ಅಪರಾಧ ಕೃತ್ಯ ನಡೆಸುತ್ತಿರುವವರಿಗೆ ಸೂಕ್ತ ಶಿಕ್ಷೆ ವಿಧಿಸುವುದು ಪೊಲೀಸರ ಹಾಗೂ ನ್ಯಾಯಾಧೀಶರ ಕರ್ತವ್ಯವಾಗಿದೆ. 1950-60ನೇ ಸಾಲಿನಲ್ಲಿ ದೇಶದಲ್ಲಿ 1 ಲಕ್ಷದಷ್ಟು ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಇಂದು ಅವಲೋಕಿಸಿದಲ್ಲಿ ದೇಶದಲ್ಲಿ ಪ್ರತಿವರ್ಷ 60-65 ಲಕ್ಷ ಪ್ರಕರಣಗಳು ದಾಖಲಾಗುತ್ತಿರುವುದು ಕಂಡು ಬರುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ದಿನನಿತ್ಯ ಹೊಸ ತರಹದ ಅಪರಾಧಗಳು ಹೆಚ್ಚುತ್ತಿವೆ. ಹಾಗಾಗಿ ಪೊಲೀಸರು ಈ ಕುರಿತು ಅರಿವು ಹೊಂದುವುದು ಅವಶ್ಯಕವಾಗಿದೆ. ದೇಶದಲ್ಲಿನ ಅಪರಾಧ ಕೃತ್ಯಗಳನ್ನು ತಡೆಗಟ್ಟುವಿಕೆಗೆ ಬೇಕಾದ ಕ್ರಮ ಕೈಗೊಳ್ಳಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿವೆ ಎಂದರು.ನಂತರ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಇತರೇ ಅಧಿಕಾರಿಗಳು ತಮ್ಮಲ್ಲಿರುವ ಸಮಸ್ಯೆಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಂಡರು. ಗದಗ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕುಲಕರ್ಣಿ, ಸರ್ಕಾರಿ ಅಭಿಯೋಜಕ ಎಸ್.ಆರ್. ಸಿಂಧೆ, ರೋಣದ ಹಿರಿಯ ದಿವಾಣಿ ನ್ಯಾಯಾಧೀಶ ಡಿ.ಜಿ. ಮಹಾವರ್ಕರ, ಎಂ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಸುವರ್ಣ ಬಿ, ಎಂ. ಶೋಭಾ, ಪುಂಡಲಿಕ ಹೊಸಮನಿ, ಡಿಎಚ್‌ಓ ಡಿ.ಬಿ. ಚೆನ್ನಶೆಟ್ಟಿ ಸೇರಿದಂತೆ ಜಿಲ್ಲೆಯ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು. ಡಿಎಸ್‌ಪಿ ವಿ.ವಿ. ಕುಂಬಾರ ಸ್ವಾಗತಿಸಿದರು. ಪಿಎಸ್‌ಐ ಆರ್.ಎಫ್. ದೇಸಾಯಿ ನಿರೂಪಿಸಿದರು. ಡಿಸಿಆರ್‌ಬಿಯ ಡಿ.ಎಸ್.ಪಿ. ಅನಿತಾ ಹದ್ದಣ್ಣವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.