ಗದಗ

ಕುಂಟುತ್ತ ಸಾಗಿದ ನೆಲ್ಲೂರು ಸಸಿಪಾಲನಾ ಕ್ಷೇತ್ರ

Published On :

ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 6

ನಾವು ಮಾನವನಿಗೆ ನೆರಳು ಜತೆಗೆ ಪರಿಸರ ಸ್ವಚ್ಛವಾಗಿಡಲು ಜನ್ಮತಾಳಿದ್ದೇವೆ ಎಂದು ನೆಲ್ಲೂರ ಗ್ರಾಮದಲ್ಲಿ ನಳ ನಳಿಸುವ ಸಸಿಗಳ ಹೇಳುತ್ತಿವೆ. ಮತ್ತೊಂದಡೆ ಒಂದೂ ಮರ ಇಲ್ಲದೇ ಜನ ಪರದಾಡುತ್ತಿರುವ ಪಟ್ಟಣದ ರಸ್ತೆಗಳು ಹಸಿರು ಪರಿಸರ ನಿರ್ಮಾಣಕ್ಕೆ ಹಾತೊರೆಯುತ್ತಿವೆ. ಇದು ರೋಣ ತಾಲೂಕಿನ ಸ್ಥಿತಿ, ಇದಕ್ಕಾಗಿ ಸಮೀಪದ ನೆಲ್ಲೂರು ಗ್ರಾಮದಲ್ಲಿರುವ ಸಸಿಪಾಲನಾ ಕ್ಷೇತ್ರವನ್ನು ಸ್ಥಾಪಿಸಿದ್ದು, ಅದು ಕುಂಟುತ್ತಾ ಸಾಗಿದ್ದು, ಈಗ ಮಳೆ ಸುರಿಯಲು ಪ್ರಾರಂಭಿಸಿದ್ದು, ಸಸಿ ನೆಡಲು ಮುಂದೆ ಬರುವರು ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ನೆಲ್ಲೂರು ಗ್ರಾಮದಲ್ಲಿ ಆರಂಭವಾದ ಸಸಿ ಪಾಲನಾ ಕ್ಷೇತ್ರವು ಹಲವಾರು ಸಂಕಷ್ಟಗಳ ಮಧ್ಯ ಬೆಳೆದು ಕುಂಟುತ್ತಾ ಸಾಗಿದೆ. ಇದಕ್ಕೆ ಅಂದುಕೊಂಡಂತೆ ಸೂಕ್ತ ಅನುದಾನ, ಸಾರ್ವಜನಿಕರ ಸಹಕಾರ, ಪರಿಸರ ಪ್ರೇಮಿಗಳ ಇಚ್ಛಾಶಕ್ತಿ, ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನೆರವು ದೊರೆತಿದ್ದರೆ, ಇದು ಮಾದರಿ ಸಸಿ ಪಾಲನಾ ಕ್ಷೇತ್ರವಾಗಿ ಕಂಗೋಳಿಸುತ್ತಿತ್ತು. ಆದರೆ, ಇವುಗಳ್ಯಾವವು ಸಕಾಲಕ್ಕೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಸಸಿನೆಟ್ಟು ಪರಿಸರ ರಕ್ಷಿಸಿ: 80ರ ದಶಕದಲ್ಲಿ ಮರಗಳ್ಳರ ಅಟ್ಟಹಾಸದಿಂದ ಕ್ಷೀಣಿಸಿದ್ದ ರೋಣ ತಾಲೂಕಿನ ಅರಣ್ಯ ಹಾಗೂ ಹಸಿರು ಪರಿಸರ ಕ್ಷೇತ್ರಕ್ಕೆ ಪುನರ್ ಜನ್ಮ ನೀಡಲು ಸರ್ಕಾರ 1982-83ರಲ್ಲಿ ನೆಲ್ಲೂರು ಗ್ರಾಮದ ಹೊರ ಹೊಲಯದಲ್ಲಿ ಬೃಹತ್ ಸಸಿ ಪಾಲನಾ ಕ್ಷೇತ್ರ ಆರಂಭಿಸಿತು. ಇದರಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಗಳು ಕಾರ್ಯಾರಂಭಿಸಿದವು. ಆರಂಭದಲ್ಲಿ ಎರಡೂ ಕ್ಷೇತ್ರಗಳು ಲಕ್ಷಾಂತರ ವಿಭಿನ್ನ. ಬಗೆಯ ಸಸಿಗಳನ್ನು ತಯಾರಿಸಿ ಅವುಗಳನ್ನು ತಾಲೂಕಿನ ತುಂಬೆಲ್ಲ ನೆಟ್ಟರು. ಹೀಗಾಗಿ ರಸ್ತೆಯ ಎರಡೂ ಬದಿಯಲ್ಲಿ, ಪುರಸಭೆ, ಪಪಂ, ಗ್ರಾಪಂ, ಸರ್ಕಾರಿ ಆಸ್ಪತ್ರೆ, ನ್ಯಾಯಾಲಯ ಆವರಣ, ಕೆರೆದಂಡೆ, ಅರಣ್ಯ ಭೂಮಿ, ಹಳ್ಳ ಸೇರಿದಂತೆ ಪ್ರಮುಖ ಪಟ್ಟಣ, ಗ್ರಾಮಗಳಾದ, ಸೂಡಿ, ಇಟಗಿ, ನಾಗೇಂದ್ರಗಡ, ರಾಜೂರು, ಲಕ್ಕಲಕಟ್ಟಿ, ದಿಂಡೂರು, ಕಲ್ಲಿಗನೂರು, ಮುಶಿಗೇರಿ, ಗೋಗೇರಿ, ರುದ್ರಾಪುರ, ಅಮರಗಟ್ಟಿ, ಬೇವಿನಕಟ್ಟಿಯಂತ ಸುಮಾರು 106 ಹಳ್ಳಿಗಳ ಸರ್ಕಾರಿ, ಅರೆ ಸರ್ಕಾರಿ ಭೂ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಯಿತು. 20 ಸಾವಿರ ಹೆಕ್ಟೇರ್ ಸಾಮಾಜಿ, 10 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ 7-8 ಲಕ್ಷಕ್ಕೂ ಅಧಿಕ ಸಂಖ್ಯೆಯ ಸಸಿಗಳನ್ನು ನೆಟ್ಟು ಅವುಗಳ ಪಾಲನೆ, ಪೋಷಣೆಗೆ ಇಲಾಖೆ ಮುಂದಾಗಿತ್ತು.
ನಿತ್ಯ ಮಾರಣ ಹೋಮ: ಸಸಿಪಾಲನಾ ಕ್ಷೇತ್ರದ ಶ್ರಮ, ಅರಣ್ಯ ಇಲಾಖೆಯ ಪರಿಸರ ಕಾಳಜಿಯಿಂದ ರೋಣ ತಾಲೂಕಿನಲ್ಲಿ ಎರಡೂ ಇಲಾಖೆಯಿಂದ ಬೆಳೆದು ನಿಂತ ದೊಡ್ಡ ದೊಡ್ಡ ಮರಗಳಾದ ಅಶೋಕ, ನೀಲಗೀರಿ, ಬಿದಿರು, ಸಾವಗಾನಿ, ಹುಣಸಿ, ಅರಳೆ, ಇಲಾತಿ, ಹೊಂಗೆ, ಬಸಿರು, ಬೇವು ಹೀಗೆ ನೂರಾರು ತಳಿಯ ಲಕ್ಷಾಂತರ ರು. ಬೆಲೆಬಾಳುವ ಮರಗಳು ಮತ್ತು ಅರಣ್ಯ ಪ್ರದೇಶವನ್ನು ಹಗಲು ರಾತ್ರಿಯೆನ್ನದೇ ಅವುಗಳನ್ನು ಕಡಿದು ಮಾರಣ ಹೋಮ ಮಾಡಲಾಯಿತು. ಅರಣ್ಯಗಳ ಅಟ್ಟಹಾಸಕ್ಕೆ ನೂರಾರು ಹೆಕ್ಟೇರ್ ಅರಣ್ಯ ಪ್ರದೇಶ ಲೂಟಿಯಾಗಿತು. ಇದಕ್ಕೆ 90ರ ದಶಕದಲ್ಲಿನ ಇಲಾಖೆಯ ನಿರ್ಲಕ್ಷ್ಯದ ಜತೆಗೆ ಕೆಲ ಸಿಬ್ಬಂದಿ ಆಂತರಿಕ ಬೆಂಬಲವೇ ಮುಖ್ಯ ಕಾರಣವೆಂದು ಪರಿಸರ ಪ್ರೇಮಿಗಳ ಆರೋಪ.
ಸಿಬ್ಬಂದಿ ಕೊರತೆ: ಸದ್ಯ ತಾಲೂಕಿನ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ 4 ಸಿಬ್ಬಂದಿ ಹೊಂದಿದರೆ, ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಕರ್ತವ್ಯ ನಿರ್ವಹಿಸ್ಕುತ್ತಿದ್ದಾರೆ. ಇದರಿಂದ 20-30 ಸಿಬ್ಬಂದಿ ಪ್ರಾದೇಶಿಕ ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ನೆಲ್ಲೂರು ಸಸಿ ಪಾಲನಾ ಕ್ಷೇತ್ರದಲ್ಲಿ ಪ್ರಸಕ್ತ ವರ್ಷಕ್ಕೆ ಜಲಾನಯನ ಇಲಾಖೆಯ ಅರಣ್ಯ ಘಟಕ ಸೇರ್ಪಡೆ ಮಾಡಲಾಗಿದೆ. ಈ ಘಟಕದಿಂದ ಪ್ರಸ್ತುತ ವರ್ಷ ಇಲಾತಿ, ಸಾಗವಾನಿ, ಬೇವು, ಹೊಂಗೆ ಸೇರಿದಂತೆ ನೂರಕ್ಕೂ ಹೆಚ್ಚು ತಳಿಯ 2.5 ಲಕ್ಷ ಸಸಿಗಳು ಸಿದ್ಧಗೊಂಡಿವೆ. ಆದರೆ, ಅವುಗಳನ್ನು ಬೇರೆಡೆ ನೆಡುವ ನಿಟ್ಟಿನಲ್ಲಿ ಯಾವುದೇ ಸಂಘ-ಸಂಸ್ಥೆಗಳು ಮುಂದೆ ಬರದೇ ಇರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಂದು ಲಕ್ಷಾಂತರ ಬೆಲೆ ಬಾಳುವ ಸಸಿಗಳು ಹಾಳಾಗುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.