ಗದಗ

ನಿಷೇಧಿತ ಗುಟ್ಕಾ ಮಾರಾಟ: ಅಧಿಕಾರಿಗಳಿಂದ ದಾಳಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜೂ. 7
ನಿಷೇಧಿತ ಗುಟ್ಕಾ ಮಾರಾಟದಲ್ಲಿ ತೊಡಗಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಪಾರ ಪ್ರಮಾಣದ ಗುಟ್ಕಾ ವಶಪಡಿಸಿಕೊಂಡ ಘಟನೆ ಶುಕ್ರವಾರ ಜರುಗಿದೆ.
ನಗರದ ಸ್ಟೇಷನ್ ರಸ್ತೆ, ಜೆ.ಟಿ. ಮಠ ರಸ್ತೆ, ಬ್ಯಾಂಕ್ ರಸ್ತೆ, ಮುಳಗುಂದ ನಾಕಾ, ಹಳೆ ಬಸ್ ನಿಲ್ದಾಣ, ಗ್ರೇನ್ ಗ್ರೋಸರಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಏಕಾಏಕಿ ದಾಳಿ ನಡೆಸಿ ಗುಟ್ಕಾ ವಶಪಡಿಸಿಕೊಂಡು ಸರ್ಕಾರದ ಆದೇಶದ ಕುರಿತು ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಯಿತು. ದಾಳಿಯ ವಿಷಯ ಹಬ್ಬುತ್ತಿದ್ದಂತೆಯೇ ಗದಗ-ಬೆಟಗೇರಿ ಅವಳಿ ನಗರದ ಕೆಲ ಅಂಗಡಿಗಳು ತಕ್ಷಣ ವ್ಯಾಪಾರ ಸ್ಥಗಿತಗೊಳಿಸಿದ್ದು ಕಂಡು ಬಂದಿತು.
ದಾಳಿಯ ವಿಷಯ ಅರಿತಿದ್ದ ಪ್ರಮುಖ ದಾಸ್ತಾನುದಾರರು ತಮ್ಮಲ್ಲಿದ್ದ ಗುಟ್ಕಾ ದಾಸ್ತಾನನ್ನು ಬೇರೆಡೆ ಸಾಗಿಸಿರುವ ಕಾರಣ ದಾಳಿಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ದಾಸ್ತಾನು ವಶಪಡಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಅಲ್ಲಲ್ಲಿ ಬೀಡಾ ಅಂಗಡಿಗಳಲ್ಲಿ, ಸಣ್ಣ ಪುಟ್ಟ ವ್ಯಾಪಾರಸ್ಥರು ಮಾತ್ರ ದಾಳಿಗೆ ಸಿಕ್ಕಿಹಾಕಿಕೊಂಡಿರುವುದು ವಿಶೇಷವಾಗಿತ್ತು.
ರಾಜ್ಯ ಸರ್ಕಾರ ಜೂನ್ 1 ರಿಂದ ರಾಜ್ಯದಲ್ಲಿ ಗುಟ್ಕಾ ನಿಷೇಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ 5 ತಂಡಗಳ ರಚನೆ ಮಾಡಲಾಗಿದ್ದು, ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ನಿರಂತರ ದಾಳಿ ನಡೆಸಲು ಉದ್ದೇಶಿಸಲಾಗಿದ್ದು, ಸಂಪೂರ್ಣ ಗುಟ್ಕಾ ಮಾರಾಟ ಸ್ಥಗಿತವಾಗುವವರೆಗೂ ತಂಡಗಳು ಕಾರ್ಯೋನ್ಮುಖವಾಗಿರುತ್ತವೆ ಎಂದು ದಾಳಿಯ ನೇತೃತ್ವ ವಹಿಸಿದ್ದ ತಾಲೂಕು ವೈದ್ಯಾಧಿಕಾರಿ ಹಾಗೂ ಜಿಲ್ಲಾ ಸಮೀಕ್ಷಣಾಧಿಕಾರಿ ಸತೀಶ ಬಸರಿಗಿಡದ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.