ಮಾನಸಿಕ ಅಸ್ವಸ್ಥ ಯುವತಿಗೆ ಗೃಹ ಬಂಧನ: ಆರೋಪ
ಧಾರವಾಡ: ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು ಎಂಬ ಕಾರಣಕ್ಕೆ ತಂದೆ ಹಾಗೂ ತಾಯಿ ಮಗಳನ್ನೇ ಬೆತ್ತಲೆ ಸ್ಥಿತಿಯಲ್ಲಿ ಗೃಹ ಬಂಧನದಲ್ಲಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದು ಎರಡು ದಿನಗಳ ಬೆನ್ನಲ್ಲೆ ಧಾರವಾಡದ ಮನೆಯೊಂದರಲ್ಲಿ ತಾಯಿಯೇ ತನ್ನ ಮಾನಸಿಕ ಅಸ್ವಸ್ಥ ಮಗಳನ್ನು ಕಳೆದ ಎರಡು ವರ್ಷಗಳಿಂದ ಮನೆಯಲ್ಲಿ ಕೂಡಿಟ್ಟಿದ್ದಳು ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಖಾಸಗಿ ವಾಹಿನಿಯೊಂದು ಗುರುವಾರ ಸುದ್ದಿಯೊಂದನ್ನು ಪ್ರಸಾರ ಮಾಡಿದ್ದು, ಮಾಳಮಡ್ಡಿಯ ನಿವಾಸಿ ಸುಮಾರು 70 ವಯಸ್ಸಿನ ಉಷಾ ಗಾಡಗೋಳಿ ಎಂಬುವರು ತಮ್ಮ 26 ವಯಸ್ಸಿನ ಮಾನಸಿಕ ಅಸ್ವಸ್ಥೆ ಸಂಧ್ಯಾಳನ್ನು ಅರೆ ನಗ್ನಾವಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ಕೂಡಿಟ್ಟಿದ್ದರು. ಸಂಧ್ಯಾ ವೃತ್ತಿಯಲ್ಲಿ ಉಪನ್ಯಾಸಕಳಾಗಿದ್ದು, ಈ ಸಂದರ್ಭದಲ್ಲಿ ಕಾಲೇಜಿನ ಸಹದ್ಯೋಗಿಯೊಬ್ಬರನ್ನು ಪ್ರೀತಿಸುತ್ತಿರುವುದು ತಂದೆ-ತಾಯಿಗೆ ಗೊತ್ತಾಗಿ ಅವಳನ್ನು ಈ ರೀತಿ ಕೂಡಿ ಹಾಕಲಾಗಿದೆ ಎಂದು ವಾಹಿನಿಯಲ್ಲಿ ಬಿತ್ತರಿಸಲಾಗಿದೆ.
ವಿದ್ಯಾರ್ಥಿ ದಿಸೆಯಿಂದಲೇ ಅತ್ಯಂತ ಚುರುಕಾಗಿದ್ದ ಸಂಧ್ಯಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪಿಯುಸಿಯಲ್ಲೂ ಸಾಧನೆ ಮಾಡಿದ್ದಳು. ಪದವಿ ಮುಗಿಸಿ ಕರ್ನಾಟಕ ವಿವಿಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಸಹ ಪಡೆದಿದ್ದಳು. ನಂತರ ಗದಗ ಜಿ.ಟಿ. ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಳು. ಕಾಲೇಜಿನಲ್ಲಿಯ ಸಹೋದ್ಯೋಗಿ ಪ್ರೀತಿಸುತ್ತಿದ್ದು, ಈ ಕುರಿತು ತಂದೆ ವಿಲಾಸ ಮತ್ತು ತಾಯಿ ಉಷಾ ಅವರು ವಿರೋಧ ಮಾಡಿದ್ದರು. ಪ್ರೀತಿಸಿದ ಯುವಕನಿಂದ ದೂರ ಮಾಡಿದ ಹಿನ್ನೆಲೆಯಲ್ಲಿ ಸಂಧ್ಯಾ ಮಾನಸಿಕವಾಗಿ ಕುಗ್ಗಿದ್ದು, ತನ್ನ ಬಟ್ಟೆಯನ್ನು ತಾನೇ ಹರಿದುಕೊಳ್ಳುತ್ತಿದ್ದಳು. ಮಗಳ ಕಾಯಿಲೆ ಕುರಿತು ತಾಯಿ ಉಷಾ ಆಸ್ಪತ್ರೆಗೂ ತೋರಿಸಿದ್ದಾರೆ ಹೊರತು ಸಂಧ್ಯಾಳನ್ನು ಗೃಹ ಬಂಧನದಲ್ಲಿ ಇಟ್ಟಿಲ್ಲ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ. ಈ ಕುರಿತಾಗಿ ಸುದ್ದಿ ಬಿತ್ತರವಾದ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ವಿದ್ಯಾಗಿರಿ ಠಾಣೆ ಪೊಲೀಸರನ್ನು ಅವರ ಮನೆಗೆ ಕಳುಹಿಸಲಾಗಿತ್ತು. ಆದರೆ, ವಾಹಿನಿಯ ತಂಡವು ಸಂಧ್ಯಾ ಹಾಗೂ ತಾಯಿ ಉಷಾಳನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದೆ ಎಂಬ ಮಾಹಿತಿ ಬಂತು. ಇಂತಹ ಸಂದರ್ಭದಲ್ಲಿ ಮಾಧ್ಯಮದವರು ಪೊಲೀಸ್ ಆಯುಕ್ತರಿಗೆ ಅಥವಾ ತಮಗಾದರೂ ತಿಳಿಸಿ ಸುದ್ದಿ ಮಾಡಬಹುದಿತ್ತು. ತಮಗೆ ಮಾಹಿತಿ ನೀಡದೆ ಏಕಾಏಕಿ ಅವರಿಬ್ಬರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದು ತಪ್ಪು. ಸಂಧ್ಯಾಳಿಗೆ ಚಿಕಿತ್ಸೆ ಕೊಡಿಸಿ ನಂತರದಲ್ಲಿ ಅವಳನ್ನು ಗೃಹ ಬಂಧನದಲ್ಲಿ ಇಡಲಾಗಿತ್ತೋ ಅಥವಾ ಇಲ್ಲವೋ ಎಂಬ ಸತ್ಯಾಸತ್ಯತೆಯನ್ನು ತನಿಖೆ ಮೂಲಕ ತಿಳಿಯಲಾಗುವುದು ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲ ಕನ್ನಡಪ್ರಭಕ್ಕೆ ಸ್ಪಷ್ಟಪಡಿಸಿದರು.
ದಿನವಿಡಿ ಹುಡುಕಾಟ : ಮಾನಸಿಕ ಅಸ್ವಸ್ಥೆಯೊಬ್ಬಳನ್ನು ತನ್ನ ವಾಹನದಲ್ಲಿ ಕರೆದೊಯ್ದ ಖಾಸಗಿ ವಾಹಿನಿಯ ವರದಿಗಾರನ ವಾಹನಕ್ಕಾಗಿ ನಗರದಲ್ಲಿ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಿನವಿಡಿ ಹುಡುಕಾಟ ನಡೆಸಿದರು. ಮನೆಯಲ್ಲಿ ಕಳೆದೆರೆಡು ವರ್ಷದಿಂದ ಕೂಡಿಹಾಕಿದ್ದ ಧಾರವಾಡ ಮಾಳಮಡ್ಡಿಯ ಸಂಧ್ಯಾ ವಿಲಾಸರಾವ್ ಗಾಡಗೋಳೆ (26) ಎಂಬ ಮಾನಸಿಕ ಅಸ್ವಸ್ಥೆಯನ್ನು ಖಾಸಗಿ ವಾಹಿನಿಯ ವರದಿಗಾರನೊಬ್ಬ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ತನ್ನ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗಿದ್ದ. ನಂತರ ಕಿಮ್ಸ್ಗೆ ಕರೆದುಕೊಂಡು ಬರುತ್ತಾನೆಂಬ ಸುದ್ದಿ ಹಬ್ಬಿದ್ದರಿಂದ ಪೊಲೀಸರು, ಮಾಧ್ಯಮದವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಿಮ್ಸ್ ಬಳಿ ಜಮಾಯಿಸಿದ್ದರು.
ಮಾನಸಿಕವಾಗಿ ಕುಗ್ಗಿದ್ದ ಸಂಧ್ಯಾಳನ್ನು ಆಕೆಯ ತಾಯಿ ಉಷಾ ನೋಡಿಕೊಳ್ಳುತ್ತಿದ್ದಳು. ಸಂಧ್ಯಾ ಹಾಗೂ ಆಕೆಯ ತಾಯಿ ಉಷಾ ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಸಂಧ್ಯಾಳ ಸಂಪೂರ್ಣ ಆರೈಕೆಯನ್ನು ಆಕೆಯ ತಾಯಿಯೇ ನಿರ್ವಹಿಸುತ್ತಿದ್ದಳು.
ಖಾಸಗಿ ವಾಹಿನಿಯ ವಾಹನದಲ್ಲಿ ಹೊರಟಿದ್ದ ವರದಿಗಾರ, ಸಂಧ್ಯಾ ಹಾಗೂ ಆಕೆಯ ತಾಯಿ ಉಷಾಳನ್ನು ದಾವಣಗೆರೆ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು, ನಂತರ ಬಿಡುಗಡೆಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

