ಅಕ್ರಮಗಳ ಅಧ್ವಾನ ಮಕ್ಕಳ ಪಾಲಿಟಿಕ್ಸ್
ಕನ್ನಡಪ್ರಭ ವಾರ್ತೆ, ಗದಗ, ಮಾ. 3
ಸ್ಥಳೀಯ ಸಂಸ್ಥೆಗಳ ಚುನಾವಣೆಯ ದಿನ ಸಮೀಪಿಸುತ್ತಿದಂತೆಯೇ ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿರುವ ಪುರಸಭೆ ಮತ್ತು 3 ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸಾಕಷ್ಟು ಅಕ್ರಮಗಳು ಬೆಳಕಿಗೆ ಬರುತ್ತಿವೆ.
ಅಕ್ರಮ ಮದ್ಯ, ಚುನಾವಣಾ ಪ್ರಚಾರ ಕಾರ್ಯಕ್ಕೆ ಮಕ್ಕಳ ಬಳಕೆ ಸೇರಿದಂತೆ, ಅಭ್ಯರ್ಥಿಗಳು ಗೆಲುವು ಸಾಧಿಸುವ ಭರಾಟೆಯಲ್ಲಿ ಗೊತ್ತಿದ್ದೋ, ಗೊತ್ತಿಲ್ಲದಂತೆಯೋ ಚುನಾವಣೆಯಲ್ಲಿ ಅಕ್ರಮ ನಡೆಸುತ್ತಿದ್ದಾರೆ.
ಮಾರ್ಚ್ 7 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ನಡೆಯಲಿದ್ದು, ಈ ಮತದಾನ ಪೂರ್ವದಲ್ಲಿಯೇ ಮತದಾರರನ್ನು ತಮ್ಮತ್ತ ಸೆಳೆಯಲು ಹಲವು ರೀತಿಯ ಆಮಿಷಗಳನ್ನು ಅಭ್ಯರ್ಥಿಗಳು ನೀಡುತ್ತಿದ್ದಾರೆ. ಇದೆಲ್ಲಾ ಜಿಲ್ಲಾ ಚುನಾವಣಾ ಆಯೋಗದ ಗಮನಕ್ಕೆ ಬಾರದೇ ಇರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಮಾರ್ಚ್ 1 ರಂದು ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಿಂದ ಶಿರಹಟ್ಟಿ ಮಾರ್ಗವಾಗಿ ಸಾಗಿಸುತ್ತಿದ್ದ ರು. 34 ಸಾವಿರ ಮೌಲ್ಯದ 18 ಬಾಕ್ಸ್ ಅಕ್ರಮ ಸಾರಾಯಿಯನ್ನು ಖಾನಾಪುರ ಗ್ರಾಮದ ಪೊಲೀಸ್ ಚೆಕ್‌ಪೋಸ್ಟ್ ಬಳಿ ಪತ್ತೆಹಚ್ಚಿ, ವಶಪಡಿಸಿಕೊಳ್ಳಲಾಗಿದೆ. ಅಂದೇ ಗಜೇಂದ್ರಗಡ ಪಟ್ಟಣದಲ್ಲಿಯೂ ಅಕ್ರಮ ಮದ್ಯ ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಮಕ್ಕಳ ಬಳಕೆ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಚುನಾವಣಾ ಕಾರ್ಯಕ್ಕೆ ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು, ಚುನಾವಣಾ ವೀಕ್ಷಕರ ಸಮ್ಮುಖದಲ್ಲಿಯೇ ನಡೆಯುತ್ತಿದ್ದರೂ ಅವರೇನೂ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ಮಕ್ಕಳ ಚುನಾವಣಾ ಪ್ರಚಾರದ ವಿಷಯದಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷ ಮುಂಚೂಣಿಯಲ್ಲಿದ್ದು, ಅವರ ಪ್ರಚಾರದ ವೇಳೆಯಲ್ಲಿಯೇ ಮಕ್ಕಳ ಕೈಯಲ್ಲಿಯೇ ಧ್ವಜ ಕಂಡು ಬರುತ್ತಿವೆ. ಈ ಬಗ್ಗೆ ಆ ಪಕ್ಷಗಳ ವರಿಷ್ಠರು ಗಮನ ನೀಡಬೇಕಿದೆ.
ಮದ್ಯದ ವಾಹನ ವಶ: ಭಾನುವಾರ ಗದಗನ 27ನೇ ವಾರ್ಡಿನ ಅಭ್ಯರ್ಥಿಯೋರ್ವರಿಗೆ ಸೇರಿದ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರು. 2500 ಮೌಲ್ಯದ ಅಕ್ರಮ ಮದ್ಯದ ಬಾಟಲಿ ಹೊಂದಿದ್ದ ವಾಹನವು ಗದಗ ಉಪ ವಿಭಾಗಾಧಿಕಾರಿ ಐ.ಜೆ. ಗದ್ಯಾಳ ದಾಳಿ ನಡೆಸಿದ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ವಾಹನ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿರಹಟ್ಟಿ ತಾಲೂಕಿನ ಹರಿಪುರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 33 ಬಾಕ್ಸ್ ಅಕ್ರಮ ಮದ್ಯ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದು, ಇದರ ಒಟ್ಟು ಮೌಲ್ಯ ರು. 44,483 ಎಂದು ಅಂದಾಜಿಸಲಾಗಿದೆ. ಈ ಕುರಿತು ಇಬ್ಬರನ್ನು ಬಂಧಿಸಿದ್ದು, ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟ್ಟುನಿಟ್ಟಿನ ಕ್ರಮ ಅವಶ್ಯ: ಚುನಾವಣೆ ದಿನ ಹತ್ತಿರ ಬರುತ್ತಿದ್ದಂತೆ ಇಂತಹ ಅಕ್ರಮಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ನಿಚ್ಚಳವಾಗಿದೆ. ಜಿಲ್ಲಾಡಳಿತ, ಚುನಾವಣಾ ಆಯೋಗ ಇನ್ನು ಬಿಗುವಿನ ಕ್ರಮಕ್ಕೆ ಮುಂದಾಗಬೇಕಿದೆ. ಜಿಲ್ಲೆಯ ಪ್ರತಿಯೊಂದು ರಸ್ತೆಗಳಲ್ಲಿಯೂ ಹೆಚ್ಚಿನ ತಪಾಸಣಾ ಕಾರ್ಯಕ್ಕೆ ಸಿಬ್ಬಂದಿ ನಿಯೋಜನೆ ಮಾಡಬೇಕು. ಅಂಥಹ ಪ್ರಯತ್ನಗಳು ಮಾತ್ರ ಜಿಲ್ಲೆಯಲ್ಲಿ ನಡೆಯುತ್ತಿಲ್ಲ. ಹಾಗಾಗಿಯೇ ಚುನಾವಣೆಯಲ್ಲಿ ಅಕ್ರಮಗಳು ಹೆಚ್ಚಾಗುತ್ತಿವೆ ಎನ್ನುವ ಮಾತುಗಳು ಪ್ರಜ್ಞಾವಂತ ನಾಗರಿಕರಿಂದ ಕೇಳಿ ಬರುತ್ತಿವೆ.
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

