ಸಂಘಟನಾ ಚತುರನಿಂದ ಅದೃಷ್ಟ ಪರೀಕ್ಷೆ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಅತಿ ಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ಮತ್ತು ತೀವ್ರ ಕುತೂಹಲ ಕೆರಳಿಸಿರುವ 12ನೇ ವಾರ್ಡ್ನಲ್ಲಿ ಈ ಬಾರಿ ಕೆಜೆಪಿಯಿಂದ ಅದೃಷ್ಟ ಪರೀಕ್ಷೆಗಿಳಿದಿರುವ ಯುವಕ, ಸಂಘಟನಾ ಚತುರ ದಾನು ದಾನಪ್ಪಗೌಡ್ರ ವಾರ್ಡ್ನಲ್ಲಿ ಚುನಾವಣೆಯ ಪೂರ್ವದಲ್ಲಿಯೇ ಹೊಸ ಸಂಚಲನಕ್ಕೆ ಕಾರಣವಾಗಿದ್ದಾರೆ.
ಈ ವಿಷಯವಾಗಿ 'ಕನ್ನಡಪ್ರಭ' ನಡೆಸಿದ ಸಮೀಕ್ಷೆಯಲ್ಲಿ ಅಲ್ಲಿನ ಸಾರ್ವಜನಿಕರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಗಮನಿಸಿದಲ್ಲಿ ದಾನು ದಾನಪ್ಪಗೌಡ್ರ ಮತದಾನದ ದಿನಾಂಕದವರೆಗೂ ಇನ್ನಷ್ಟು ತೀವ್ರವಾಗಿ ಪ್ರಚಾರ ನಡೆಸಿದಲ್ಲಿ, ಗೆಲುವಿನ ಹತ್ತಿರ ಹೋಗುವ ಸಾಧ್ಯತೆ ಇದೆ. ಎಬಿವಿಪಿ ಸಂಘಟನೆಯ ಮೂಲಕ ತಮ್ಮ ಸಂಘಟನಾ ಕಲೆಯನ್ನು ಮೈಗೂಡಿಸಿಕೊಂಡಿರುವ ದಾನು ದಾನಪ್ಪಗೌಡ್ರ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಹೋರಾಟದಿಂದಲೇ ವಿದ್ಯಾರ್ಥಿ ವಲಯದಲ್ಲಿ ದಾನು ಎಂದೇ ಖ್ಯಾತಿ ಹೊಂದಿರುವ ಯುವಕ.
ನಂತರ ತಮ್ಮ ರಾಜಕೀಯ ಜೀವನವನ್ನು ಬಿಜೆಪಿಯ ಮೂಲಕ ಪ್ರಾರಂಭಿಸಿ, 2008ರ ವಿಧಾನಸಭೆ, 2009ರ ಲೋಕಸಭೆ ಹಾಗೂ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಪಕ್ಷವನ್ನು ಗೆಲುವಿನತ್ತ ಸೇರಿಸಲು ಮತ್ತು ಮುಖ್ಯವಾಗಿ ಯುವಕರಿಗೆ ಗ್ರಾಪಂ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಪಕ್ಷದ ಮೇಲೆ ಅವರು ಹಾಕಿದ ಒತ್ತಡ ಹಾಗೂ ಆ ವಿಷಯದಲ್ಲಿ ಅವರು ಸಾಧಿಸಿದ ಪ್ರಗತಿಯಿಂದಾಗಿ ಹಲವಾರು ಗ್ರಾಪಂಗಳಲ್ಲಿ ಇಂದು ಯುವಕರು ಸಣ್ಣ ವಯಸ್ಸಿನಲ್ಲೇ ಅಧಿಕಾರವನ್ನು ಅನುಭವಿಸುವಂತಾಗಿದೆ. ಕಾರಣಾಂತರಗಳಿಂದ ಕೆಜೆಪಿಯಲ್ಲಿ ಗುರುತಿಸಿಕೊಂಡಿರುವ ದಾನು ಚುನವಾಣೆ ಘೋಷಣೆಯಾಗುವ ಪೂರ್ವದಲ್ಲಿಯೇ 12ನೇ ವಾರ್ಡ್ನ ಜನತೆಯ ಸಮಸ್ಯೆಗೆ ಸ್ಪಂದಿಸುವ, ಅವರೊಟ್ಟಿಗೆ ಗುರುತಿಸಿಕೊಳ್ಳುವ ಮೂಲಕ ನಾನು ಈ ವಾರ್ಡ್ನ ಮೂಲಕ ನಿಮ್ಮ ಸೇವೆ ಮಾಡಲು ಇಚ್ಛಿಸಿದ್ದೇನೆ ಎನ್ನುವುದನ್ನು ಸಾಬೀತು ಪಡಿಸಿದ್ದರು. ಇದರಿಂದಾಗಿಯೇ ಇಂದು ಅವರಿಗೆ ಪಕ್ಷದ ಟಿಕೆಟ್ ಲಭ್ಯವಾಗಿದೆ. ಪದವೀಧರರಾಗಿರುವ ದಾನು ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸುವ ಮನೋಭಾವನೆ ಹೊಂದಿರುವುದರಿಂದ ವಿದ್ಯಾರ್ಥಿ ಸಂಘಟನೆಯಲ್ಲಿ ಬಹು ಬೇಗ ದೊಡ್ಡ ಹೆಸರನ್ನು ಗಳಿಸಿದ್ದರು.
ಪ್ರಮುಖ ನಾಯಕರ ಭೇಟಿ: ಈ ವಾರ್ಡ್ ಇತರೆ ವಾರ್ಡ್ಗಳಿಗಿಂತ ಹೆಚ್ಚಿನ ಪ್ರಾಮುಖ್ಯ ಹೊಂದಿದೆ. ಶನಿವಾರ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಭಾನುವಾರು ಚಿತ್ರನಟಿ ಶೃತಿ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಇನ್ನು ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ದಾನು ದಾನಪ್ಪಗೌಡ್ರ ಗೆಳೆಯರೆಲ್ಲಾ ಮಿತ್ರನ ಗೆಲುವಿಗಾಗಿ ಸ್ವಯಂ ಪ್ರೇರಣೆಯಿಂದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ವಾರ್ಡ್ ರಾಜಕೀಯಕ್ಕೆ ಒಂದೇ ದಿನದಲ್ಲಿಯೇ ಸ್ಟಾರ್ ವ್ಯಾಲು ಬಂದಿದೆ. ಈಗಾಗಲೇ ಪಕ್ಷದ ಹಿರಿಯರು ಕಾರ್ಯಾಲಯವನ್ನು ಪ್ರಾರಂಭಿಸಿ, ಮತ ಬೇಟೆಯನ್ನು ನಡೆಸಿರುವುದು ಗಮನಾರ್ಹ ಸಂಗತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

