ಗದಗ

ನರಗುಂದ ಪುರಸಭೆ ಅಧಿಕಾರ ಮತ್ತೆ 'ಕೈ'ವಶ

Published On :

ಗದಗ: ಬಿಜೆಪಿ ಸರ್ಕಾರದ ದುರಾಡಳಿತ, ಸ್ವಜನ ಪಕ್ಷಪಾತ, ಸ್ಥಳೀಯ ಶಾಸಕರ ಜನ ವಿರೋಧಿ ನೀತಿಯಿಂದ ಜನತೆ ಬೇಸತ್ತಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಿ.ಆರ್. ಯಾವಗಲ್ಲ ಹೇಳಿದರು.
ಕನ್ನಡಪ್ರಭಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಹಾಲಿ ಶಾಸಕ ಸಿ.ಸಿ. ಪಾಟೀಲ ನರಗುಂದ ಪಟ್ಟಣಕ್ಕೆ ನೂರಾರು ಕೋಟಿ ಅನುದಾನ ತಂದಿದ್ದೇನೆ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ವಾಸ್ತವದಲ್ಲಿ ಕಾಮಗಾರಿಗಳೇ ನಡೆದಿಲ್ಲ. ನಡೆದಿರುವ ಕಾಮಗಾರಿಗಳಲ್ಲೂ ಸಾಕಷ್ಟು ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿದರು.
ಐತಿಹಾಸಿಕ ನರಗುಂದ ಪಟ್ಟಣದ ಜನತೆ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವುದನ್ನು ಕಂಡು ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಎಸ್.ಎಂ. ಕೃಷ್ಟ ಈ ಭಾಗದಲ್ಲಿ ಶಾಶ್ವತ ಕುಡಿವ ನೀರು ಯೋಜನೆಗೆ ರು. 1.50 ಕೋಟಿಯನ್ನು ಕೆಂಪಗೆರಿಗೆ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭವಾಗಿತ್ತು. ಮುಂದೆ ರು. 6ರಿಂದ 7 ಕೋಟಿ ವೆಚ್ಚದಲ್ಲಿ ಕೆರೆಯ ಕಾಮಗಾರಿ ಪೂರ್ಣಗೊಳಿಸಿ ಇಂದು ಸಮಸ್ತ ಪಟ್ಟಣದ ಜನತೆಗೆ ಕುಡಿವ ನೀರನ್ನು ಪೂರೈಕೆ ಮಾಡುತ್ತಿದೆ ಎಂದು ಯಾವಗಲ್ಲ ವಿವರಿಸಿದರು.
ಆಗಿನ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಬದಾಮಿ ಬಿಟ್ಟರೆ ನರಗುಂದಕ್ಕೆ ಒಳಚರಂಡಿ ಯೋಜನೆ ತರಲಾಗಿತ್ತು. ಸರ್ಕಾರದ ಮೇಲೆ ಒತ್ತಡ ತಂದು ಜಾರಿ ಮಾಡಿಸಿಕೊಂಡು ಬಂದ ಯೋಜನೆಯನ್ನು ಈಗಿನ ಶಾಸಕರಿಂದ ಇಲ್ಲಿಯವರೆಗೆ ಪೂರ್ಣಗೊಳಿಸಲಾಗಿಲ್ಲ. ನನ್ನ ಅಧಿಕಾರಾವಧಿಯಲ್ಲಿ ಸರ್ಕಾರದ ಜತೆ ಹೋರಾಡಿ ಪಟ್ಟಣಕ್ಕೆ ಮೂಲಭೂತ ಸೌಲಭ್ಯಗಳನ್ನು ತರುವಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಸಂದರ್ಭದಲ್ಲಿ ರು. 60 ಸಾವಿರ ಕೋಟಿ ಸಾಲ ಮಾಡಿತ್ತು. ಬಿಜೆಪಿ ಸರ್ಕಾರ 5 ವರ್ಷದ ಅವಧಿಯಲ್ಲಿ ರು. 120 ಸಾವಿರ ಕೋಟಿ ಸಾಲವನ್ನು ರಾಜ್ಯದ ಜನತೆ ಮೇಲೆ ಹೊರಸಿದೆ ಎಂದು ಆರೋಪಿಸಿದರು.
ಕೈ ಹಿಡಿಯುವ ಮತದಾರರು: ಹಾಲಿ ಶಾಸಕರಿಂದ ಪಟ್ಟಣದ ಜನರು ಬೇಸತ್ತು ಹೋಗಿದ್ದಾರೆ. ಇವರು ಮಾಡಿದ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ಮತ್ತು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನೋಡಿ ಜನ ಬೇಸತ್ತಿದ್ದಾರೆ, ಸ್ಥಳೀಯ ಸಂಸ್ಥೆಯ ಚುನಾವಣೆಯ 23 ವಾರ್ಡ್‌ಗಳಲ್ಲಿ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪರವಾಗಿ ಮತಯಾಚನೆಗೆ ಹೋದ ಸಂದರ್ಭದಲ್ಲಿ ಜನತೆ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ಹುಮ್ಮಸ್ಸು ಹೊಂದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಈ ಚುನಾವಣೆಯಲ್ಲಿ 16ರಿಂದ 17 ಅಭ್ಯರ್ಥಿಗಳು ಸಂಪೂರ್ಣ ಬಹುಮತದೊಂದಿಗೆ ಆಯ್ಕೆಯಾಗುವರು. ಶಾಸಕರ ಪ್ರಕಾರ ತಾವು ರು. 90 ಕೋಟಿ ತಂದು ಸಮಗ್ರ ಪಟ್ಟಣ ಅಭಿವೃದ್ಧಿ ಮಾಡಿದ್ದೇನೆಂದು ಜಂಬ ಕೊಚ್ಚಿಕೊಳ್ಳುವವರಿಗೆ ಮಾ. 11ರಂದು ಮತದಾರರು ತಕ್ಕ ಪಾಠ ಕಲಿಸುವರು ಎಂದು ಶಾಸಕರನ್ನು ಟೀಕಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.