ಗದಗ

ಇಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Published On :

ಶಿರಹಟ್ಟಿ: ಅದೆಷ್ಟೋ ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಗಳಿಗೆ ಮಾ. 7 ಕೊನೆಗೂ ಬಂದೇ ಬಿಟ್ಟಿತು. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ನಿದ್ದೆಗೆಟ್ಟು ಪ್ರಚಾರ ಮಾಡಿದ ಅಭ್ಯರ್ಥಿಗಳ ಎದೆ ಢವ ಢವ ಹೊಡೆದುಕೊಳ್ಳಲಾರಂಭಿಸಿದೆ. ಮತದಾರರು ತಮಗೇ ಆಶೀರ್ವದಿಸುವರೋ ಇಲ್ಲವೋ ಎಂಬ ಚಿಂತೆ ಅಭ್ಯರ್ಥಿಗಳಲ್ಲಿ ಶುರುವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಗುರುವಾರ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ.
ಅಭ್ಯರ್ಥಿಗಳ ಲೆಕ್ಕಾಚಾರ: ಒಟ್ಟಾರೆ ಮತದಾನ ಪ್ರಮಾಣ ಎಷ್ಟಾಗಬಹುದು. ಮತದಾನ ಹೆಚ್ಚಾದರೆ ತಮಗೆ ಲಾಭವೋ ಅಥವಾ ಕಡಿಮೆಯಾದರೇ ಅನುಕೂಲವೋ, ಯಾವ ಅಭ್ಯರ್ಥಿ ಪ್ರತಿಸ್ಪರ್ಧಿಯಾಗಿ ನಿಂತಿರುವುದು ತಮಗೆ ಪ್ಲಸ್ ಆಗಿದೆ ಅಥವಾ ಮೈನಸ್ ಆಗಲಿದೆ. ಯಾವ ಮನೆಯಿಂದ ಎಷ್ಟು ಮತ ತಮಗೆ ಸಿಗಬಹುದು, ಒಟ್ಟಾರೆ ಇಷ್ಟು ಮತ ಬಂದರೆ ತಾವು ಗೆಲ್ಲಬಹುದು, ಎಷ್ಟು ಮತ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ತೊಡಗಿದ್ದಾರೆ.
ಮತದಾರರ ಓಲೈಕೆ ಪೂರ್ಣ: ಅಭ್ಯರ್ಥಿಗಳು ಮತದಾರರನ್ನು ಓಲೈಸಲು ನಡೆಸಿದ ಕಸರತ್ತು ಕೊನೆಗೊಂಡಿದೆ. ವಿಧಾನಸಭೆ, ಲೋಕಸಭೆ, ವಿಧಾನ ಪರಿಷತ್ ಚುನಾವಣೆಯನ್ನೂ ಮೀರಿಸುವಷ್ಟರ ಮಟ್ಟಿಗೆ ಸ್ಥಳೀಯ ಸಂಸ್ಥೆಗಳ ಆಖಾಡದಲ್ಲಿ ಸೆಣಸಾಟ ಕಂಡುಬಂದಿದೆ. ಮತದಾರರನ್ನು ಸೆಳೆಯಲು ಬಹಿರಂಗ ಪ್ರಚಾರ, ಮನೆ ಮನೆ ಪಾದಯಾತ್ರೆ, ನಾನಾ ತಂತ್ರಗಳನ್ನು ಅಭ್ಯರ್ಥಿಗಳು ಮುಗಿಸಿದ್ದಾರೆ. ಹಲವು ಅಭ್ಯರ್ಥಿಗಳು ಪಕ್ಷದ ಮುಖಂಡರಿಲ್ಲದೇ ಹಗಲು, ರಾತ್ರಿ ಎನ್ನದೇ ತಮ್ಮ ಗೆಲುವಿಗಾಗಿ ಶ್ರಮಪಟ್ಟಿದ್ದಾರೆ. ಪಪಂ ಅಭ್ಯರ್ಥಿಗಳು ತಾವೇನೂ ಕಡಿಮೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಬಲ ಪ್ರದರ್ಶಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚು ಹಣ, ಹೆಂಡ ಹಂಚುವ ಉದಾಹರಣೆಗಳು ಕಡಿಮೆ. ಆದರೆ, ಈ ಬಾರಿ ಮಾತ್ರ ಮತ ಪಡೆಯಲು ಏನೆಲ್ಲಾ ಮಾಡಬೇಕೋ ಆ ಎಲ್ಲ ತಂತ್ರಗಳಿಗೆ ಅಭ್ಯರ್ಥಿಗಳು ಮೊರೆಹೋಗಿದ್ದಾರೆ. ಚುನಾವಣೆಯ ಸಲುವಾಗಿಯೇ ಅಗ್ಗ ದರದ ಸಾರಾಯಿ ತರಿಸಿಕೊಂಡು ಹಂಚಲಾಗಿದೆ. ನಾರಿಯರ ಮತ ಸೆಳೆಯಲು ಕೆಲವೊಂದು ಕಡೆಗಳಲ್ಲಿ ಅಭ್ಯರ್ಥಿಗಳು ಸೀರೆ ಹಂಚಿ ಮತಯಾಚಿಸಿದ್ದಾರೆ.
ಭರವಸೆಯ ಹೊಳೆ: ಮಾರುಕಟ್ಟೆಯಲ್ಲಿ ಚುನಾವಣೆಗೆಂದೇ ಅಗ್ಗ ದರದ ವಿಶೇಷ ಸೀರೆಗಳು ಬಂದಿದ್ದವು. ಅಲ್ಲದೆ ಪಟ್ಟಣದ ಪ್ರಮುಖ ವ್ಯಕ್ತಿಗಳನ್ನು ಗುರುತಿಸಿ, ಅವರ ಕೈಗೊಂದಿಷ್ಟು ಹಣ ಕೊಟ್ಟು ತಮ್ಮ ಪರವಾಗಿ ಮತ ಹಾಕಿಸುವಂತೆ ಕೋರಿದ್ದಾರೆ. ಗೆಲುವಿನ ಹಾದಿ ಸುಗಮವಾಗುವ ದಿಸೆಯಲ್ಲಿ ಏನೆಲ್ಲ ಕಸರತ್ತು ಮಾಡಬೇಕಿದೆಯೋ ಅದನ್ನೆಲ್ಲ ಮಾಡಿ ಮುಗಿಸಿದ್ದಾರೆ. ನ್ಯಾಯವೋ, ಅನ್ಯಾಯವೋ ಎಲ್ಲ ರೀತಿಯಲ್ಲೂ ಸಾಗಿ ಮತಭಿಕ್ಷೆ ಕೇಳಿದ್ದಾಗಿದೆ. ಗೆದ್ದು ಬಂದರೆ ಹಲವಾರು ಅಭಿವೃದ್ಧಿ ಕೆಲಸ ಮಾಡುತ್ತೇವೆಂದು ಭರವಸೆಯ ಹೊಳೆ ಹರಿಸಿದ್ದಾರೆ. ಆದರೆ ಜನರು ಮಾತ್ರ ಇದೆಲ್ಲದರಿಂದ ಎಷ್ಟು ಪ್ರಭಾವತರಾಗಿ ಯಾರಿಗೆ ಮತ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಂತಿಮ ಕಸರತ್ತು ಮಾಡಿ ಮುಗಿಸಿರುವ ಅಭ್ಯರ್ಥಿಗಳು ಫಲಿತಾಂಶ ತಮ್ಮ ಪರಆಗಲೆಂದು ದೈವದ ಮೇಲೆ ಭಾರ ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.