ಅಪೌಷ್ಟಿಕತೆ: ಕಳಕಪ್ಪ ಜಿಲ್ಲೆ ಕಳವಳ
ಕನ್ನಡಪ್ರಭ ವಾರ್ತೆ, ಗದಗ, ಮಾ. 14
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ತವರು ಜಿಲ್ಲೆಯಾದ ಗದಗದಲ್ಲಿಯೇ 2,245 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದನ್ನು ಅವರ ಇಲಾಖೆ ದಾಖಲೆಗಳೇ ಸಾರಿ ಹೇಳುತ್ತಿವೆ.
ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರತಿ ತಾಲೂಕಿನಲ್ಲಿಯೂ ಈ ಸಮಸ್ಯೆ ಪ್ರಮುಖವಾಗಿದೆ. ಆದರೆ, ಜಿಲ್ಲಾ ಕೇಂದ್ರ ಗದಗ ತಾಲೂಕಿನಲ್ಲಿಯೇ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ನೋವಿನ ಸಂಗತಿ. ಗದಗ ತಾಲೂಕಿನಲ್ಲಿ 707, ರೋಣ ತಾಲೂಕಿನಲ್ಲಿ 538, ಮುಂಡರಗಿ ತಾಲೂಕಿನಲ್ಲಿ 248, ನರಗುಂದ ತಾಲೂಕಿನಲ್ಲಿ 316, ಶಿರಹಟ್ಟಿ ತಾಲೂಕಿನಲ್ಲಿ 436 ಮಕ್ಕಳು ಸೇರಿದಂತೆ ಒಟ್ಟು 2,245 ಮಕ್ಕಳು ತೀವ್ರ ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿರುವುದು ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಸಮಸ್ಯೆಗಳೇನು?: ಮಕ್ಕಳಲ್ಲಿರುವ ಪ್ರೋಟಿನ್, ಸಾರಜನಕ, ಸಕ್ಕರೆ, ಮುಖ್ಯವಾಗಿ ಕಬ್ಬಿಣಾಂಶ, ರಕ್ತ ಬೆಳವಣಿಗೆ ಮಾದರಿ ಆಧಾರದಲ್ಲಿ ಅಪೌಷ್ಟಿಕತೆಯನ್ನು ನಿರ್ಧರಿಸಲಾಗುತ್ತದೆ. ತಾಯಿಯಲ್ಲಿ ರಕ್ತಹೀನತೆ, ಚಿಕ್ಕವಯಸ್ಸಿಗೆ ಮದುವೆ ಹಾಗೂ ವಿಶ್ರಾಂತಿ ಕೊರತೆಯಿಂದ ಅಪೌಷ್ಟಿಕತೆ ಉಂಟಾಗುತ್ತದೆ. ಈ ಸಮಸ್ಯೆ ಕಂಡು ಬಂದ ಮಕ್ಕಳಿಗೆ ವಯಸ್ಸು ಹೆಚ್ಚಾಗಿದ್ದರೂ, ತೂಕ ಮಾತ್ರ ಕಡಿಮೆಯಾಗಿರುತ್ತದೆ ಎಂದು ವೈದ್ಯಕೀಯ ಇಲಾಖೆ ಹೇಳುತ್ತದೆ. ಇಲಾಖಾ ಸಚಿವರ ತವರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಹಾಲಿನ ಪೌಡರ್, ಮೊಟ್ಟೆ ಸರಬರಾಜು ಆಗುತ್ತಿಲ್ಲ ಎನ್ನುವ ಆರೋಪವಿದೆ. ಇದು ಅಂಗನವಾಡಿ ಕಾರ್ಯಕರ್ತೆಯರಿಗೂ ತಲೆ ನೋವಾಗಿದ್ದು, ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
ಮಕ್ಕಳ ತಜ್ಞ ವೈದ್ಯರ ನೇಮಕಾತಿ ನಡೆದಿಲ್ಲ
ಮಕ್ಕಳ ಆರೋಗ್ಯ ಸುಧಾರಣೆಗೆ ವಾರದಲ್ಲಿ ಎರಡು ದಿನ 200 ಎಂಎಲ್ ಹಾಲು, ನಾಲ್ಕು ದಿನ ಬೇಯಿಸಿದ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇಲಾಖೆ ದಾಖಲೆಗಳ ಆಧಾರದಲ್ಲಿ 2012ರ ಏಪ್ರಿಲ್ ತಿಂಗಳಲ್ಲಿ 2972 ಇದ್ದ ಅಪೌಷ್ಟಿಕ ಮಕ್ಕಳ ಸಂಖ್ಯೆ ಡಿಸೆಂಬರ್ ಅಂತ್ಯದ ವೇಳೆಗೆ 2245ಕ್ಕೆ ಇಳಿದಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮಂಜೂರಾಗಿರುವುದೇ ಏಕೈಕ ಮಕ್ಕಳ ತಜ್ಞ ವೈದ್ಯರ ಹುದ್ದೆ. ಆದರೆ ಹಲವಾರು ವರ್ಷಗಳಿಂದ ಅದಕ್ಕೆ ನೇಮಕಾತಿ ನಡೆಯದೇ ಇರುವುದರಿಂದ ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರಿಂದ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡ ಪ್ರಕಾರ ಪೌಷ್ಟಿಕಾಂಶ ಕೊರತೆ ಇರುವ ಮಕ್ಕಳ ಸಾಮಾನ್ಯ ತೂಕ, ಸಾಧಾರಣ ಕಡಿಮೆ ತೂಕ ಹಾಗೂ ವಿಪರೀತ ಕಡಿಮೆ ತೂಕ ಎಂದು ಗುರುತಿಸಲಾಗಿದೆ. ಅದಕ್ಕೆ ಸರ್ಕಾರ ನಿಗದಿಪಡಿಸಿದ ಮಾದರಿಯಲ್ಲಿಯೇ ಪೌಷ್ಟಿಕಾಂಶದ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ. ಕೆಲವೆಡೆ ಮೊಟ್ಟೆ ಹಾಗೂ ಹಾಲಿನ ಪುಡಿ ಪೂರೈಕೆಯಲ್ಲಿ ತೊಂದರೆಯಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ತಕ್ಷಣವೇ ಪರಿಶೀಲಿಸಿ, ಕ್ರಮ ತೆಗೆದುಕೊಳ್ಳಲಾಗುವುದು.
-ಎಚ್.ಎಸ್. ಪರಮೇಶ್ವರ
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

