ಗದಗ

ನೀರಿನ ಅಪವ್ಯಯ: ಜಾಗ್ರತೆ ವಹಿಸಿ

Published On :

ಹಾನಗಲ್ಲ: ದೇಶಾದ್ಯಂತ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಸಾರ್ವಜನಿಕರು ನೀರಿನ ಅಪವ್ಯಯ ತಡೆಗಟ್ಟುವ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕು ಎಂದು ಹಾವೇರಿ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಕರೆ ನೀಡಿದರು.
ಶನಿವಾರ ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿ ರು. 15.84 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 50 ಸಾವಿರ ಲೀ. ಸಾಮರ್ಥ್ಯದ ಮೇಲ್ಮಟ್ಟದ ಜಲಾಗಾರ ಉದ್ಘಾಟಿಸಿ, ರು. 10 ಲಕ್ಷ ವೆಚ್ಚದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಾಲ್ಮೀಕಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ದಿನವೊಂದಕ್ಕೆ ಪ್ರತಿಯೊಬ್ಬ ವ್ಯಕ್ತಿಗೆ ಸರಾಸರಿ 130 ಲೀ. ನೀರಿನ ಆವಶ್ಯಕತೆ ಇದೆ. ಆದರೆ, ಅನಿಶ್ಚಿತ ಮಳೆಗಾಲದ ಈ ದಿನಗಳಲ್ಲಿ ನೂರಾರು ಕೊಳವೆ ಬಾವಿಗಳ ಮೂಲಕ ನೀರನ್ನೆತ್ತಿ ಬಳಸುತ್ತಿದ್ದು, ಹೀಗಾಗಿ ಮರುಪೂರಣ ಕಾರ್ಯ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂತರ್ಜಲ ಕುಂಠಿತಗೊಂಡು ಎಲ್ಲರೂ ಸಮಸ್ಯೆ ಎದುರಿಸುವಂತಾಗಿದೆ. ರೈತ ಬೆಳೆಯುವ ಬತ್ತದಿಂದ ಒಂದು ಕೆಜಿ ಅಕ್ಕಿ ತಯಾರಾಗುವ ಹೊತ್ತಿಗೆ 5 ಸಾವಿರ ಲೀ. ನೀರು ಬಳಕೆಯಾಗುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಮುಂದಿನ ಪೀಳಿಗೆಗೆ ನೀರಿನ ಮಹತ್ವ ತಿಳಿಸಿ, ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು. ಜನಸಾಮಾನ್ಯರ ತೆರಿಗೆ ಹಣ ಸಂಗ್ರಹಿಸಿ ಅನುದಾನ ರೂಪದಲ್ಲಿ ಸರ್ಕಾರ ಬಿಡುಗಡೆ ಮಾಡುತ್ತದೆ. ಅದು ಅಪವ್ಯಯವಾಗದಂತೆ ಎಲ್ಲರೂ ಕಾಳಜಿ ವಹಿಸುವ ಆವಶ್ಯಕತೆ ಇದೆ. ಗ್ರಾಮಗಳಲ್ಲಿನ ಕೊರತೆಗಳ ಪಟ್ಟಿ ಮಾಡಿ, ಜನಪ್ರತಿನಿಧಿಗಳ ಗಮನ ಸೆಳೆದು ಮೂಲಭೂತ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಚುನಾವಣೆಗಳಲ್ಲಿ ಮತ ಚಲಾಯಿಸುವ ಮುನ್ನ ಮನೆಮಂದಿ ಕುಳಿತು ಚರ್ಚಿಸಿ ಅಭಿವೃದ್ಧಿಪರ, ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ಒತ್ತಡ, ಆಮಿಷಗಳಿಗೆ ಒಳಗಾಗಬೇಡಿ ಎಂದು ಶಿವಕುಮಾರ ಉದಾಸಿ ಮನವಿ ಮಾಡಿದರು.
ರೈತ ನಾಯಕ ಬಿ.ಆರ್. ಪಾಟೀಲ್ ಮಾತನಾಡಿ, ಕುಗ್ರಾಮವಾಗಿದ್ದ ಗೆಜ್ಜಿಹಳ್ಳಿ ಈಗ ಎಲ್ಲ ಮೂಲಸೌಕರ್ಯ ಹೊಂದಿದೆ. ಇದರೊಂದಿಗೆ ತಾಲೂಕಿನ ಎಲ್ಲ ಗ್ರಾಮಗಳೂ ಮಾದರಿ ಗ್ರಾಮಗಳಾಗಿವೆ. ಸರ್ವತೋಮುಖ ಅಭಿವೃದ್ಧಿಯ ಚಿಂತನೆ ಹೊಂದಿರುವ ಮಾಜಿ ಸಚಿವ ಸಿ.ಎಂ. ಉದಾಸಿ ಅವರ ಕಾರ್ಯಕ್ಷಮತೆಯಿಂದ ಹಾನಗಲ್ಲ ತಾಲೂಕು ರಾಜ್ಯದಲ್ಲಿಯೇ ಮಾದರಿಯಾಗಿ ಹೊರಹೊಮ್ಮಿದೆ. ಬಿಎಸ್‌ವೈ ಕುರ್ಚಿ ಬಿಟ್ಟ ದಿನದಿಂದ ರೈತ ಸಮುದಾಯ ಸಂಕಷ್ಟದಲ್ಲಿದೆ. ಕೃಷಿಕ ಬರಗಾಲ ಎದುರಿಸುತ್ತಿದ್ದರೂ ಇದುವರೆಗೂ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಲಾಗಿಲ್ಲ ಎಂದು ಪಾಟೀಲ್ ಆರೋಪಿಸಿದರು.
ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರು ಮಾತನಾಡಿ, ಪರಿಶಿಷ್ಟ ವರ್ಗದವರ ಕೃಷಿಭೂಮಿಗೆ ಕೊಳವೆಬಾವಿ ಮೂಲಕ ನೀರೊದಗಿಸಲು 78 ಫಲಾನುಭವಿಗಳಿಗೆ ತಲಾ ರು. 5 ಲಕ್ಷ ಅನುದಾನ ನೀಡಿ, ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ತಾಲೂಕಿನಾದ್ಯಂತ ವಿದ್ಯುತ್, ನೀರಾವರಿ, ರಸ್ತೆ, ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಗ್ರಾಪಂ ಅಧ್ಯಕ್ಷ ರಾಜು ಮಲ್ಲಿಗಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಸದಸ್ಯೆ ಕಸ್ತೂರವ್ವ ವಡ್ಡರ್, ಮಾಜಿ ಸದಸ್ಯ ರಾಜಣ್ಣ ಪಟ್ಟಣದ, ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಸದಸ್ಯೆ ರಹಮುನ್ನಿಸಾ ಮುಂಡರಗಿ, ಹೇಮಣ್ಣ ಮೂಗೂರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.