ಪಾಟೀಲಗೆ ಗುಂಡೇಟು: ರಾಜಕೀಯ ತಿರುವು?
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 19
ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲರಿಗೆ ಭಾನುವಾರ ರಾತ್ರಿ ಅವರ ಗನ್‌ಮ್ಯಾನ್ ಅಚಾತುರ್ಯದಿಂದಾಗಿ ಗುಂಡು ತಗುಲಿ, ರಾಜ್ಯದ ಗಮನವನ್ನೇ ಸೆಳೆದ ಈ ಪ್ರಕರಣ ದಿನ ಕಳೆದಂತೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುವುದು ಮತ್ತಷ್ಟು ಪುಷ್ಟೀಕರಿಸಿದೆ.
ಘಟನೆ ಬಳಿಕ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಎಲ್ಲರಲ್ಲಿಯೂ ಆತಂಕ ಮನೆ ಮಾಡಿದೆ. ಸಿ.ಸಿ. ಪಾಟೀಲರ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಬೆಳಗಾವಿ ಕೆಎಲ್‌ಇ ವೈದ್ಯರು ಸ್ಪಷ್ಟಪಡಿಸಿದ ನಂತರ ಗ್ರಾಮದಲ್ಲಿ ಉಂಟಾಗಿದ್ದ ಗೊಂದಲ, ಆತಂಕ ಸ್ವಲ್ಪ ಕಡಿಮೆಯಾಗಿದೆ. ಆದರೆ ಗನ್‌ಮ್ಯಾನ್ ಪಿಸ್ತೂಲ್ ತೆಗೆಯುವ ಮಟ್ಟಕ್ಕೆ ಅಲ್ಲಿನ ಕೆಲವರು ನಡೆದುಕೊಂಡಿದ್ದೇ ಈ ಘಟನೆಗೆ ಕಾರಣ ಎನ್ನುವುದು, ಪೊಲೀಸರ ತನಿಖೆಯ ದಿಕ್ಕನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ತಿಳಿದು ಬರುವ ಸತ್ಯವಾಗಿದ್ದು, ಈ ವಿಷಯ ಗ್ರಾಮಸ್ಥರಲ್ಲಿ ಸಹಜವಾಗಿ ಗೊಂದಲಕ್ಕೆ ಕಾರಣವಾಗಿದೆ.
ತನಿಖಾ ತಂಡ ರಚನೆ: ಈ ಘಟನೆಯ ಕುರಿತು 2 ತನಿಖಾ ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ಗನ್‌ಮ್ಯಾನ್ ಪಿಸ್ತೂಲಿನಿಂದ ಹಾರಿರುವ ಗುಂಡಿನ ಬಗ್ಗೆ ಡಿಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದರೆ, ಇನ್ನೊಂದು ತಂಡ ರೋಣ ಸಿಪಿಐ ನೇತೃತ್ವದಲ್ಲಿ ಘಟನೆಗೆ ಕಾರಣರಾದವರ ಕುರಿತು ಗ್ರಾಮದಲ್ಲಿ ತನಿಖೆ ನಡೆಸಲು ರಾಜ್ಯ ಪೊಲೀಸ್ ಇಲಾಖೆ ನಿರ್ಧರಿಸಿದೆ. ಇದು ಸಹಜವಾಗಿ ಮೆಣಸಗಿ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ. ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಬಂದು ನಮ್ಮನ್ನು ಏನು ಕೇಳುತ್ತಾರೆ? ಯಾವ ರೀತಿಯಲ್ಲಿ ಉತ್ತರಿಸಬೇಕು ಎನ್ನುವ ಭಯದಲ್ಲಿ ಕೆಲವರು (ಪ್ರಮುಖರು) ಗ್ರಾಮವನ್ನೇ ತ್ಯಜಿಸಿದ್ದರೆ, ಮತ್ತೆ ಕೆಲವರು ಅದು ರಾತ್ರಿ ಸಮಯದಲ್ಲಿ ನಡೆದಿರುವುದರಿಂದ ನಾವೆಲ್ಲಾ ಮಲಗಿದ್ದೆವು ಎನ್ನುವ ಸಿದ್ಧ ಉತ್ತರ ನೀಡುತ್ತಿದ್ದಾರೆ. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ರಾಜಕೀಯ ತಿರುವು?: ಈ ಪ್ರಕರಣ ದಿನ ಕಳೆದಂತೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆಯೇ ಎನ್ನುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಜೋರಾಗಿಯೇ ಚರ್ಚೆಯಾಗುತ್ತಿದೆ. ಒಂದು ಮೂಲದ ಪ್ರಕಾರ ಶಾಸಕ ಸಿ.ಸಿ. ಪಾಟೀಲರು ಮೊದಲು ಯಡಿಯೂರಪ್ಪನವರ ಕೆಜೆಪಿಗೆ ಸೇರಲು ಸಿದ್ಧರಾಗಿ, ಮತ್ತೆ ಬಿಜೆಪಿಯಲ್ಲೇ ಉಳಿಯುವ ನಿರ್ಧಾರ ಪ್ರಕಟಿಸಿದ ಬಳಿಕ, ಆ ಗ್ರಾಮದಲ್ಲಿನ ಟಿಕೆಟ್ ಆಕಾಂಕ್ಷಿಗಳು ಪಾಟೀಲರ ವಿರುದ್ಧ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ವಿರೋಧ ವ್ಯಕ್ತಪಡಿಸುವ ತವಕದಲ್ಲಿ ಗೊಂದಲ ಸೃಷ್ಟಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇದರಿಂದಾಗಿ ಇದು ಮುಂದೆ ರಾಜಕೀಯ ತಿರುವು ಪಡೆದುಕೊಂಡರೂ ಆಶ್ಚರ್ಯವಿಲ್ಲ.
ಅಂಗ ರಕ್ಷಕನ ನಿರ್ಲಕ್ಷ್ಯ-ಪ್ರಕರಣ ದಾಖಲು: ಈಗಾಗಲೇ ಮೆಣಸಗಿ ಗ್ರಾಮದಲ್ಲಿನ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರೊಟ್ಟಿಗೆ ಶಾಸಕರೊಂದಿಗೆ ಕರ್ತವ್ಯದ ಮೇಲಿದ್ದ ಗನ್‌ಮ್ಯಾನ್ ಮಂಜುನಾಥ ವಿರುದ್ಧವೂ ಕರ್ತವ್ಯದ ವೇಳೆಯಲ್ಲಿ ನಿರ್ಲಕ್ಷ್ಯತನದ ಪ್ರಕರಣವೂ ದಾಖಲಾಗಿದೆ. ಪಾಟೀಲರ ಗುಂಡೇಟಿಗೆ ಸಂಬಂಧಿಸಿದಂತೆ ರೋಣ ಪೊಲೀಸ್ ಠಾಣೆಯಲ್ಲಿ ಒಟ್ಟು 2 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಗ್ಯಕ್ಕಾಗಿ ಪ್ರಾರ್ಥಿಸಿ ಪಾದಯಾತ್ರೆ
ನರಗುಂದ: ಆಕಸ್ಮಿಕ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ನರಗುಂದ ವಿಧಾನಸಭಾ ಮತಕ್ಷೇತ್ರದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲರು ಶೀಘ್ರ ಗುಣಮುಖರಾಗಿ, ಕ್ಷೇತ್ರದ ಜನತೆಯ ಸೇವೆ ಮಾಡಲು ಬರಲೆಂದು ಹಾರೈಸಿ, ಮಂಗಳವಾರ ಬಿಜೆಪಿ ಕಚೇರಿಯಿಂದ ಗುಡ್ಡದ ಮೇಲಿರುವ ಸಿದ್ದೇಶ್ವರ ದೇವಸ್ಥಾನಕ್ಕೆ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ದೇವರಿಗೆ ಪೂಜೆ, ಅಭಿಷೇಕ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿದರು. ಪಂಚಗೃಹ ಗುಡ್ಡದ ಹಿರೇಮಠದ ಸಿದ್ದವೀರ ಶ್ರೀಗಳು, ಪತ್ರಿವನ ಮಠದ ಸಿದ್ದವೀರ ಶ್ರೀಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

