ಸಿಬ್ಬಂದಿ ಗೈರು: ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ
ರೋಣ: ಪುರಸಭೆಯ ಮುಖ್ಯಾಧಿಕಾರಿ, ಯೋಜನಾಧಿಕಾರಿ ಮತ್ತು ಅಭಿಯಂತರರು ಸಭೆಗಳಿಗೆ ನಿರಂತರ ಗೈರಾಗುತ್ತಿರುವುದರಿಂದ ಪುರಸಭೆ ಕೆಲಸಗಳು ನೆನಗುದಿಗೆ ಬಿದ್ದಿವೆ. ಜನತೆ ನೀರಿಲ್ಲದೆ ತೀವ್ರ ತೊಂದರೆ ಎದುರಿಸುತ್ತಿದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಪುರಸಭೆಯ ನೂತನ ಸದಸ್ಯರು ಪಟ್ಟಣದ ಜನತೆಯೊಂದಿಗೆ ಬುಧವಾರ ಪುರಸಭೆಗೆ ಬೀಗ ಹಾಕಿ ಪ್ರತಿಭಟಿಸಿದರು.
ಒಂದು ತಿಂಗಳಿನಿಂದ 7 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಕೆಲವು ವಾರ್ಡ್ಗಳಲ್ಲಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಜನತೆ ಸಮಸ್ಯೆ ಕೇಳಲು ಪುರಸಭೆಗೆ ಬಂದರೆ ಮುಖ್ಯಾಧಿಕಾರಿ ವಿ. ರಾಮಸ್ವಾಮಿ ಕಚೇರಿಯಲ್ಲಿ ಇರುವುದಿಲ್ಲ. ನೆಪ ಹೇಳಿ ಜನತೆಗೆ ಸಿಗದೆ ಜಾರಿಕೊಳ್ಳುತ್ತಾರೆ. ಅಭಿಯಂತರ ವಿ.ಎಂ. ಸಂಕನಗೌಡ್ರ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನೀತಿ ಸಂಹಿತೆಯನ್ನು ಮುಂದಿಡುತ್ತಿದ್ದಾರೆ. ಜನತೆಯ ಸಮಸ್ಯೆ ಆಲಿಸುವವರು ಯಾರು? ಯಾರ ಹತ್ತಿರ ಅವರು ಸಮಸ್ಯೆ ಹೇಳಿಕೊಳ್ಳಬೇಕು? ಸ್ಥಳಕ್ಕೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿಗಳು ಬರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವದಿಲ್ಲ ಎಂದು ಪಟ್ಟು ಹಿಡಿದರು. ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪುರಸಭೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ ಇಸ್ಲಾವುದ್ದಿನ ಗದ್ಯಾಳ, ಪ್ರತಿಭಟನಿರತರಿಂದ ಸಮಸ್ಯೆ ಆಲಿಸಿ, ಕೂಡಲೇ ಮುಖ್ಯಾಧಿಕಾರಿ ವಿ. ರಾಮಸ್ವಾಮಿ, ಅಭಿಯಂತರ ವಿ.ಎಂ. ಸಂಕನಗೌಡ್ರ, ಯೋಜನಾಧಿಕಾರಿ ಆರ್.ಎ. ಹೊಸಮನಿ ಮತ್ತು ಎಸ್.ವಿ. ಸಂಕನಗೌಡ್ರ ಅವರಿಗೆ ಶೋಕಾಸ್ ನೋಟಿಸ್ ನೀಡಬೇಕು ಎಂದು ಪುರಸಭೆ ವ್ಯವಸ್ಥಾಪಕ ಬಸಯ್ಯ ಅಂಗಡಿ ಅವರಿಗೆ ಸೂಚಿಸಿದರು. ಪಟ್ಟಣಕ್ಕೆ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪುರಸಭೆಯ ಯಾವುದೇ ಅಭಿವೃದ್ಧಿ ಕಾಮಗಾರಿ ನೆನಗುದಿಗೆ ಬೀಳದಂತೆ ನೋಡಿಕೊಳ್ಳಲಾಗುವುದು. ಈ ಕುರಿತು ಗುರುವಾರ ಪುರಸಭೆ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಎ.ಸಿ. ಇಸ್ಲಾವುದ್ದಿ ಗದ್ಯಾಳ ಭರವಸೆ ನೀಡಿದ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು. ಪುರಸಭೆ ಸದಸ್ಯ ತೋಟಪ್ಪ ನವಲಗುಂದ, ವಿಜಯೇಂದ್ರ ಗಡಗಿ, ಗುರುಪಾದೇಶ ರಡ್ಡೇರ, ಲಕ್ಷ್ಮೀ ಗಡಗಿ, ಶಿವಪ್ಪ ಕರಿಲಿಂಗಣ್ಣವರ, ಶರಣಪ್ಪ ದೊಡ್ಡಮನಿ, ವಿದ್ಯಾ ಬಡಿಗೇರ, ಮಾಜಿ ಸದಸ್ಯ ಸುರೇಶ ಜಗ್ಗಲ, ಕೆ.ಕೆ. ಮುಲ್ಲಾ, ಬಸವರಾಜ ನವಲಗುಂದ, ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ಸಂಗು ನವಲಗುಂದ, ಯೂಸುಫ್ ಇಟಗಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

