ಬಿಜೆಪಿ ರಾಜನೀತಿ ಕಳೆದುಕೊಂಡಿದೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 24
ಬಿಜೆಪಿ ಜನರ ಆಶೋತ್ತರಗಳಿಗೆ ಸ್ಪಂದಿಸಿದೇ ಕೇವಲ ಅಕ್ರಮ ಗಣಿ, ಭ್ರಷ್ಟಾಚಾರದಂತಹ ನೀತಿ ಅನುಸರಿಸಿ ರಾಜಕೀಯ ನೀತಿ ಕಳೆದುಕೊಳ್ಳುವ ಮೂಲಕ ಭ್ರಷ್ಟ ಆಡಳಿತ ನಡೆಸಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ಭಾನುವಾರ ನಗರದ ವೀರನಾರಾಯಣ ಕಲ್ಯಾಣ ಮಂಟಪದಲ್ಲಿ ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಗದಗ ಜಿಲ್ಲಾ ಘಟಕದ ವತಿಯಿಂದ ಈಚೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತರಾದ ನೂತನ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದರು. ಕೇವಲ ಅಧಿಕಾರದ ಆಸೆಗಾಗಿ ಹಲವು ಭ್ರಷ್ಟಾಚಾರ ಎಸಗುವ ಮೂಲಕ ರಾಜ್ಯದಲ್ಲಿ ಹಿಂದೆಂದೂ ನಡೆಸದ ಭ್ರಷ್ಟಾಚಾರ ಆಡಳಿತವನ್ನು ನಡೆಸಿದ ಕೀರ್ತಿ ಬಿಜೆಪಿ ಸಲ್ಲುತ್ತದೆ. ಕೇಂದ್ರದ ಕಾಂಗ್ರೆಸ್ ಸರ್ಕಾರವು ನೀಡಿರುವ ಹಲವು ಅಭಿವೃದ್ಧಿಗಳನ್ನು ಬಿಜೆಪಿ ತಾನೇ ಜಾರಿಗೆ ತಂದಿರುವುದಾಗಿ ಹೇಳುತ್ತ, ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದು, ಇದನ್ನರಿತ ಜನತೆಯು ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ.
99 ಸ್ಥಾನ ಕಾಂಗ್ರೆಸ್ಗೆ
ಈಚೆಗೆ ನಡೆದ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಜಿಲ್ಲೆಯಲ್ಲಿರುವ 203 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಳ್ಳುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜನತೆಯು ಕಾಂಗ್ರೆಸ್ ಮೇಲೆ ನಂಬಿಕೆಯನ್ನಿಟ್ಟು ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಆರಿಸಿ ಕಳಿಸಿದ್ದು, ಚುನಾಯಿತ ಸದಸ್ಯರು ಜನರ ಆಶೋತ್ತರಗಳಿಗೆ ಸ್ಪಂದಿಸಲು ಶ್ರಮಿಸಬೇಕಾಗಿದೆ.
ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ಗೆ ಬೆಂಬಲ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಧಿಕಾರದ ಗದ್ದುಗೆ ಹಿಡಿಯಲಿದ್ದು, ಪಕ್ಷದ ಎಲ್ಲ ಪದಾಧಿಕಾರಿಗಳು, ಪಕ್ಷವನ್ನು ಸಂಘಟನೆಗೆ ಶ್ರಮಿಸುವಂತೆ ಕರೆ ನೀಡಿದರು.
ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಮಸಭೆಗಳಂತೆ ನಗರ ಪ್ರದೇಶಗಳಲ್ಲಿ ವಾರ್ಡ್ ಸಭೆಗಳನ್ನು ಅಸ್ತಿತ್ವಕ್ಕೆ ತಂದು ವಾರ್ಡ್ನಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುವ ಕಾರ್ಯ ಮಾಡುವ ಯೋಚನೆ ಹೊಂದಲಾಗಿದೆ. ಅಲ್ಲದೇ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುವಲ್ಲಿ ಎಲ್ಲ ಚುನಾಯಿತ ಸದಸ್ಯರು ಶ್ರಮಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ನಗರಸಭೆ, ಪುರಸಭೆ, ಪಪಂಗಳಲ್ಲಿ ಕಾಂಗ್ರೆಸ್ನಿಂದ ಚುನಾಯಿತರಾದ ಎಲ್ಲ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಗಡ್ಡದ್ದೇವರಮಠ, ತಾಪಂ ಉಪಾಧ್ಯಕ್ಷ ಅಬ್ದುಲ್ ಶೇಖ ಕರೂರ, ಐ.ಎಸ್.ಪಾಟೀಲ, ನಗರಸಭೆಯ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ಖಮರಸುಲ್ತಾನ್ ನಮಾಜಿ, ಶೇಖಣ್ಣ ಬಡ್ನಿ, ಗುರಣ್ಣ ಬಳಗಾನೂರ, ಎಲ್.ಡಿ.ಚಂದಾವರಿ, ಅನಿಲ ಶಿಂಗ್ಟಾಲಕೇರಿ, ಅಶೋಕ ಮಂದಾಲಿ ಉಪಸ್ಥಿತರಿದ್ದರು. ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ಪ್ರಭಣ್ಣ ಮೇಟಿ ಸ್ವಾಗತಿಸಿದರು. ವಿದ್ಯಾಧರ ದೊಡ್ಡಮನಿ ನಿರೂಪಿಸಿದರು. ಬಿ.ಬಿ.ಅಸೂಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

