ಶಾಸಕ ರಾಮಣ್ಣ ಲಮಾಣಿಗೆ ಟಿಕೆಟ್ ನೀಡಬೇಡಿ: ಜಾನು
ಲಕ್ಷ್ಮೇಶ್ವರ: ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಪಕ್ಷಾಂತರ ಮಾಡಿ, ಕೆಜೆಪಿಯೊಂದಿಗೆ ಗುರುತಿಸಿಕೊಂಡವರಿಗೆ ಬಿಜೆಪಿ ವರಿಷ್ಠರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಬಾರದು ಎಂದು ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ ಆಗ್ರಹಿಸಿದರು.
ಅವರು ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಬಿಜೆಪಿ ಅಭಿಮಾನಿಗಳನ್ನು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ, ಬೇರೆ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಶಾಸಕ ರಾಮಣ್ಣ ಲಮಾಣಿಯವರಿಗೆ ಮತ್ತೆ ಟಿಕೆಟ್ ನೀಡಬಾರದು. ಬಿಜೆಪಿ ವರಿಷ್ಠರು ಕ್ಷೇತ್ರದಲ್ಲಿನ ಪಕ್ಷದ ಅಭಿಮಾನಿಗಳ ಹಾಗೂ ಮುಖಂಡರುಗಳ ಅಭಿಪ್ರಾಯ ಪಡೆದು ಮುಂಬರುವ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಬೇಕು ಎಂದರು. ಈ ಹಿಂದೆ ಜನೆವರಿ 4 ರಂದು ಗದಗ ಜಿಲ್ಲೆಯಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಪಕ್ಷದ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಹೋಗಬಾರದು ಎಂದು ಅಡ್ಡಿಪಡಿಸಿದ ಶಾಸಕ ರಾಮಣ್ಣ ಲಮಾಣಿಯವರು ಯಾವ ಮುಖ ಇಟ್ಟುಕೊಂಡು ಪಕ್ಷದ ಟಿಕೆಟ್ ಕೇಳುತ್ತಿದ್ದಾರೆ. ಇವರಿಗೆ ನೈತಿಕ ಹೊಣೆಗಾರಿಕೆ ಇಲ್ಲವೇ. ಹೀಗೆ ಪಕ್ಷದಿಂದ ಪಕ್ಷಕ್ಕೆ ಹಾರಾಟ ನಡೆಸುವ ಮೂಲಕ ಕ್ಷೇತ್ರದ ಜನರ ವಿಶ್ವಾಸ ಗಾಳಿಗೆ ತೂರಿದ್ದಾರೆ. ಇಂತವರಿಗೆ ಮುಂಬರುವ ವಿಧಾನಸಭೆಯ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ. ನಮ್ಮ ಬಿಜೆಪಿ ಪಕ್ಷದಲ್ಲಿನ ಟಿಕೆಟ್ ಆಕಾಂಕ್ಷಿಗಳಾಗಿರುವ ಜಾನು ಲಮಾಣಿ, ಈಶ್ವರ ಲಮಾಣಿ, ಎಂ.ಬಿ. ಚೆಪ್ಪರಮನಿ ಇವರಲ್ಲಿ ಯಾರಿಗಾದರೂ ಟಿಕೆಟ್ ನೀಡಿದಲ್ಲಿ ಅದನ್ನು ಒಪ್ಪಿಕೊಂಡು ಮುಂಬರುವ ಚುನಾವಣೆಯಲ್ಲಿ ದುಡಿಯಲು ನಾವು ಸಿದ್ಧರಾಗಿದ್ದೇವೆ. ಪಕ್ಷದ ವರಿಷ್ಠರು ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಅಲ್ಲದೆ ಪಕ್ಷದ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. ನೀಲಪ್ಪ ಹತ್ತಿ ಮತ್ತು ನ್ಯಾಯವಾದಿ ಎಂ.ಬಿ. ಚೆಪ್ಪರಮನಿ ಮಾತನಾಡಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅವರು ಕಳೆದ 2-3 ವರ್ಷಗಳಲ್ಲಿ ಪಕ್ಷದ ಯಾವುದೇ ಸಂಘಟನೆಯಲ್ಲಿ ತೊಡಗಿಕೊಳ್ಳದೇ ಕೇವಲ ತಮ್ಮ ಗುತ್ತಿಗೆದಾರಿಕೆಯ ವ್ಯವಹಾರದಲ್ಲಿ ತೊಡಗಿಕೊಂಡು ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ಎಳ್ಳಷ್ಟು ಕಾಳಜಿ ತೋರಿಸಿಲ್ಲ. ಕೇವಲ ಶಾಸಕರ ಕೈಗೊಂಬೆಯಾಗಿ ವರ್ತಿಸುತ್ತ ತಮ್ಮ ಕಾರ್ಯಗಳನ್ನು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಇಂತವರಿಂದ ಪಕ್ಷದ ಸಂಘಟನೆ ಸಾಧ್ಯವಿಲ್ಲ. ಅದಕ್ಕಾಗಿ ಈ ಕೂಡಲೇ ಪಕ್ಷದ ತಾಲೂಕು ಅಧ್ಯಕ್ಷರನ್ನು ಬದಲಿಸಬೇಕೆಂದರು.
ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಜಾನು ಲಮಾಣಿ, ಈಶ್ವರ ಲಮಾಣಿ, ಎಂ.ಬಿ, ಚೆಪ್ಪರಮನಿ, ಚೆಂದ್ರು ಹಂಪಣ್ಣವರ, ಜಿ.ಆರ್. ಕೊಪ್ಪದ, ಮಂಜು ಬಟ್ಟೂರ, ಲಿಂಬಣ್ಣ ಪೂಜಾರ, ಬೋಜಪ್ಪ ಲಮಾಣಿ, ಜಿ.ಪಿ. ಸಿಂಧೊಳ್ಳಿಮಠ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

