ಶಿರಹಟ್ಟಿಯಲ್ಲಿ ರಂಗೇರಿದ ಬಣ್ಣದ ಹಬ್ಬ
ಟ ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 28
ಹೋಳಿ ಹಬ್ಬದ ಅಂಗವಾಗಿ ಗುರುವಾರ ಶಿರಹಟ್ಟಿಯಲ್ಲಿ ಯುವಕರು, ಮಕ್ಕಳು, ಮಹಿಳೆಯರು, ಹಿರಿಯರಾದಿಯಾಗಿ ಎಲ್ಲರೂ ಪರಸ್ಪರ ಬಣ್ಣ ಎರಚಿಕೊಂಡು ರಂಗು ರಂಗಿನ ಹಬ್ಬವನ್ನು ಸಡಗರ, ಸಂತಸದಿಂದ ಆಚರಿಸಿದರು.
ಮಧ್ಯರಾತ್ರಿಯೇ ಕಾಮನನ್ನು ಸುಟ್ಟು, ಬೆಳಗ್ಗೆ 7 ಗಂಟೆಯಿಂದಲೇ ಬಣ್ಣದಾಟ ಪ್ರಾರಂಭವಾಯಿತು. ಸಣ್ಣ ಸಣ್ಣ ಮಕ್ಕಳು ಮನೆ ಮಂದಿಗೆಲ್ಲ ಬಣ್ಣ ಎರಚಿ ಖುಷಿಪಟ್ಟರು. ರಸ್ತೆಗಳಲ್ಲಿ ಯುವಕರ ಗುಂಪುಗಳು ಹಲಗೆ ಬಾರಿಸುತ್ತ, ಕುಣಿಯುತ್ತ ಸ್ನೇಹಿತರಿಗೆ, ಸಾರ್ವಜನಿಕರಿಗೆ ಬಣ್ಣ ಹಚ್ಚುತ್ತಾ ಹೋಳಿ ಆಚರಣೆಯಲ್ಲಿ ತೊಡಗಿದ್ದರು.
ಪಟ್ಟಣದ ಕುಂಬಾರ ಓಣಿ, ಮಹಿಷಿ ಓಣಿ, ಮರಾಠ ಗಲ್ಲಿ, ಕುರುಬರ ಓಣಿ, ಮ್ಯಾಗೇರಿ ಓಣಿ, ಅಂಬೇಡ್ಕರ್ ನಗರ, ವಿಜಯನಗರ, ವಿದ್ಯಾನಗರ, ಸಮೀಪದ ಹರಿಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದರು.
ಯುವಕರ ಸಂಭ್ರಮ: ಬಣ್ಣದಾಟದಲ್ಲಿ ಯುವಕರು ಉತ್ಸಾಹದಿಂದ ಬೈಕ್ಗಳಲ್ಲಿ ಬಡಾವಣೆಯಿಂದ ಬಡಾವಣೆಗೆ ಸುತ್ತುತ್ತ ಎಲ್ಲರಿಗೂ ಬಣ್ಣ ಹಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರತಿ-ಮನ್ಮಥರನ್ನು ಪ್ರತಿಷ್ಠಾಪಿಸಿದ್ದ ಕೆಲವು ಓಣಿಗಳಲ್ಲಿ ಮಕ್ಕಳು, ಮಹಿಳೆಯರೆಲ್ಲರೂ ಬಣ್ಣದ ಓಕುಳಿ ಆಡಿದರು. ಪಟ್ಟಣದ ಜನರೆಲ್ಲ ಒಂದಾಗಿ ಜಾತಿ, ಧರ್ಮ ಬೇಧವಿಲ್ಲದೆ ಹಬ್ಬ ಆಚರಿಸಿದ್ದು ವಿಶೇಷ. ಯುವಕರ ದಂಡು ಹಲಗೆ ಬಾರಿಸುತ್ತ, ಕುಣಿಯುತ್ತ ಬಣ್ಣ ಎರಚುತ್ತಿದ್ದರಿಂದ ಪಟ್ಟಣದ ಎಲ್ಲ ಬಡಾವಣೆಗಳು, ಪ್ರಮುಖ ರಸ್ತೆಗಳು ರಂಗೇರಿದ್ದವು. ಕೆಂಪು, ಹಸಿರು, ಕೇಸರಿ, ಹಳದಿ, ನೀಲಿ ಹೀಗೆ ಎಲ್ಲ ಬಣ್ಣಗಳಿಂದ ರಸ್ತೆಗಳು ಕಂಗೊಳಿಸುತ್ತಿದ್ದವು. ಸಣ್ಣ ಮಕ್ಕಳಂತೂ ಪಿಚಕಾರಿ ಹಿಡಿದು ಹಿಂದಿನಿಂದ ಬಂದು ಜನರಿಗೆ ಬಣ್ಣದ ನೀರು ಹಾಕಿ ಓಡುತ್ತಿದ್ದರು. ವಿಚಿತ್ರ ವೇಷಧಾರಿಗಳು ಬಣ್ಣ ಎರಚುತ್ತ ಅಡ್ಡಾಡುತ್ತಿದ್ದರು.
ತಲೆಗೆ ಋಷಿಗಳ ರೀತಿಯಲ್ಲಿ ಕೂದಲು ಕಟ್ಟಿಕೊಂಡು ಕೆಲವರು ಗಮನಸೆಳೆದರೆ, ಇನ್ನು ಕೆಲವರು ಮುಖವಾಡಗಳ ಹಾಕಿಕೊಂಡು, ಟೋಪಿ ಹಾಕಿಕೊಂಡು ಹಲಗೆ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು. ಮಧ್ಯಾಹ್ನ 12 ಗಂಟೆಯಾದರೂ ಬಣ್ಣ ಕೊಳ್ಳುವುದು, ಬಣ್ಣದಾಟ ಮುಂದುವರಿದಿತ್ತು. ರಂಗಿನಾಟ ನಿಲ್ಲಿಸುವ ಮನಸ್ಸು ಯಾರಿಗೂ ಇದ್ದಂತಿರಲಿಲ್ಲ.
ಪೊಲೀಸ್ ಬಂದೋಬಸ್ತ್: ಬಣ್ಣದಾಟದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಲ್ಲ ವೃತ್ತಗಳಲ್ಲೂ ಪೊಲೀಸ್ರನ್ನು ನಿಯೋಜಿಸಲಾಗಿತ್ತು. ಬಣ್ಣದಾಟದ ಬಳಿಕ ರಂಗಪಂಚಮಿಯ ಭವ್ಯ ಮೆರವಣಿಗೆ ನಡೆಯಿತು. ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ರತಿ-ಮನ್ಮಥರನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ರಗ್ಗಲಗಿ, ತಮಟೆ, ಇತ್ಯಾದಿ ವಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿದರು.
ಕೆರೆ, ಹಳ್ಳಗಳಲ್ಲಿ ಸ್ನಾನ: ರಂಗಿನಾಟದಲ್ಲಿ ಮಿಂದೆದ್ದ ಯುವಕರು ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಹಳ್ಳ, ಹಾಗೂ ಬೆಳ್ಳಟ್ಟಿ ರಸ್ತೆಯಲ್ಲಿರುವ ಹೊಸಳ್ಳಿ ಕೆರೆಯಲ್ಲಿ ಸ್ನಾನ ಮಾಡಿದರು. ಇತ್ತೀಚೆಗೆ ಸುರಿದ ಮಳೆಯಿಂದ ಮೈತುಂಬಿಕೊಂಡಿದ್ದ ಕೆರೆಯಲ್ಲಿ, ಹಳ್ಳಗಳಲ್ಲಿ ಸಂಭ್ರಮದಿಂದ ಈಜಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

