ಕೈ ಟಿಕೆಟ್ ಆಕಾಂಕ್ಷಿಗಳು ದೆಹಲಿಗೆ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 29
ಕಾಂಗ್ರೆಸ್ ಟಿಕೆಟ್ ಹಂಚಿಕೆ ದಿನೇ ದಿನೇ ಗೊಂದಲದ ಗೂಡಾಗುತ್ತಿದ್ದು, ಆದರೆ, ಗದಗ ಜಿಲ್ಲೆಯ ಮಟ್ಟಿಗೆ ಶಿರಹಟ್ಟಿ ಕ್ಷೇತ್ರದ ಟಿಕೆಟ್ ಹಂಚಿಕೆಯೂ ಪಕ್ಷದ ವರಿಷ್ಠರಿಗೆ ತಲೆನೋವಾಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಿರಹಟ್ಟಿ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಸೇರಿದಂತೆ ಬಹುತೇಕ ಆಕಾಂಕ್ಷಿಗಳು ದೆಹಲಿಗೆ ತೆರಳಿದ್ದಾರೆ.
ಹೆಚ್ಚಿನ ಕುತೂಹಲ
ಜಿಲ್ಲೆಯ 4 ಕ್ಷೇತ್ರಗಳಲ್ಲಿ ಶಿರಹಟ್ಟಿ ಕ್ಷೇತ್ರವೂ ಪುನರ್ ವಿಂಗಡಣೆಯ ನಂತರ ಮೀಸಲಾತಿಗೆ ಒಳಪಟ್ಟಿರುವುದರಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ವಲಸಿಗರು ಮತ್ತು ಸ್ಥಳೀಯರು ಶತಾಯ ಗತಾಯ ಪ್ರಯತ್ನ ಮಾಡಿ ಟಿಕೆಟ್ ಪಡೆಯಲು ಎಲ್ಲ ಪ್ರಭಾವಗಳನ್ನು ಬಳಸುತ್ತಿದ್ದಾರೆ. ತಮ್ಮ ನಾಯಕರ ಮುಖಾಂತರ ಒತ್ತಡ ಹೇರಲು ಇದುವರೆಗೆ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದರು. ಆದರೆ, ಗುರುವಾರ ರಾತ್ರಿಯಿಂದ ಎಲ್ಲ ಚಟುವಟಿಕೆ ದೆಹಲಿಗೆ ಶಿಫ್ಟ್ ಆಗಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಎದೆಬಡಿತ ಜೋರಾಗಿದೆ.
ಇತರ ಪಕ್ಷಗಳೂ ಹೊರತಾಗಿಲ್ಲ
ಇನ್ನು ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅವರು ಅಧಿಕಾರದಲ್ಲಿದ್ದಾಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಜಾನು ಲಮಾಣಿ, ಈಶ್ವರ ಲಮಾಣಿ ಅವರು ಟಿಕೆಟ್,ಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಮುಖಾಂತರ ಒತ್ತಡ ಹೇರುತ್ತಿರುವುದು ಕಂಡುಬರುತ್ತಿದೆ. ಜೆಡಿಎಸ್ ಕೂಡಾ ಸ್ಥಳೀಯರಿಗೆ ಆದ್ಯತೆ ನೀಡುವ ದೃಷ್ಟಿಯಲ್ಲಿದ್ದು, ಎಂ.ಕೆ. ಲಮಾಣಿ ಹಾಗೂ ಗುರಪ್ಪ ವಡ್ಡರ ಅವರ ನಡುವೆ ಟಿಕೆಟ್,ಗಾಗಿ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಬಿ.ಎಸ್.ಆರ್. ಕಾಂಗ್ರೆಸ್ ಟಿಕೆಟ್ ಜಯಶ್ರೀ ಹಳ್ಳೆಪ್ಪನವರ ಅವರಿಗೆ ಘೋಷಣೆಯಾಗಿದೆ. ಇನ್ನು ಕೆಜೆಪಿ ಅಭ್ಯರ್ಥಿಗಳ ಹುಟುಕಾಟದಲ್ಲಿದೆ.
ಸ್ಥಳೀಯರಿಗೆ ಆದ್ಯತೆಯೇ?
ಈ ಹಿಂದಿನ ಚುನಾವಣೆಗಳನ್ನು ಗಮನಿಸಿದಾಗ ಶಿರಹಟ್ಟಿ ಮತಕ್ಷೇತ್ರದ ಮತದಾರರು ಸ್ಥಳೀಯರಿಗೆ ಆದ್ಯತೆ ನೀಡುವ ಮೂಲಕ ಅವರನ್ನೇ ಆಯ್ಕೆ ಮಾಡುತ್ತಾ ಬಂದಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಆಯ್ಕೆಯಾದ ದಿ. ವೆಂಕಟೇಶ ಮಾಗಡಿ, ದಿ. ಲೀಲಾವತಿ ಮಾಗಡಿ, ದಿ. ಸಿದ್ದಯ್ಯ ಕಾಶಿಮಠ, ದಿ. ಗೂಳಪ್ಪ ಉಪನಾಳ, ದಿ. ಟಿ.ಬಿ. ಬಾಳಿಕಾಯಿ, ಎಸ್.ಎನ್. ಪಾಟೀಲ, ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಎಲ್ಲರೂ ಶಿರಹಟ್ಟಿ ತಾಲೂಕಿನವರೇ ಆಗಿರುವುದು ಗಮನಿಸಬೇಕಾದ ಅಂಶವಾಗಿದೆ. ಕ್ಷೇತ್ರ ಪುರ್ನವಿಂಗಡಣೆಯ ನಂತರ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಎಸ್,ಸಿಗೆ ಮೀಸಲಾಗಿರುವುದರಿಂದ ಹೊರಗಿನವರೂ ಕೂಡ ತಮ್ಮ ಅದೃಷ್ಟ ಪರೀಕ್ಷೆಗೆ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿದ್ದಾರೆ.
-ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

