ಶಿಂಗಟಾಲೂರ ಯೋಜನೆ ಪೂರ್ಣಗೊಳಿಸುತ್ತೇವೆ
ಕನ್ನಡಪ್ರಭ ವಾರ್ತೆ, ಗದಗ, ಮೇ. 1
ಈ ಹಿಂದೆ ಕಾಂಗ್ರೆಸ್ ಸರ್ಕಾರ ಕೈಗೊಂಡ ಶಿಂಗಟಾಲೂರ ಏತ ನೀರಾವರಿ ಯೋಜನೆಯನ್ನು ಕಳೆದ 5 ವರ್ಷ ಆಡಳಿತ ನಡೆಸಿದ ಬಿಜೆಪಿ ಈ ಯೋಜನೆಯನ್ನು ಪೂರ್ಣಗೊಳಿಸಲು ವಿಫಲವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈ ಭಾಗದ ಜನತೆಗೆ ಅನುಕೂಲವಾದ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದೆಂದು ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಹೇಳಿದರು.
ಅವರು ಬುಧವಾರ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಹಲವಾರು ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸಮಾಜದಲ್ಲಿರುವ ದೀನ-ದಲಿತ, ರೈತರ, ಬಡವರ ಹಾಗೂ ಕಾರ್ಮಿಕರ ಸಲುವಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.
ಬಿಜೆಪಿ ಸರ್ಕಾರದಲ್ಲಿರುವ ಹಲವಾರು ಸಚಿವರು ಹಾಗೂ ಮುಖ್ಯಮಂತ್ರಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ದೇಶದಲ್ಲಿ ಇಂದು ಕರ್ನಾಟಕದವರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎನ್ನುವ ಬಿಜೆಪಿಗರು ತಮ್ಮ ಸ್ವಾರ್ಥ ಸಾಧನೆಗಾಗಿ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಾರಿ ರೋಣ ಮತಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ರವಿ ದಂಡಿನ ಮಾತನಾಡಿ, ಜಿ.ಎಸ್. ಪಾಟೀಲರು ಎಂದೂ ದ್ವೇಷ ರಾಜಕಾರಣ ಮಾಡಿದವರಲ್ಲ. ಸರ್ವರನ್ನೂ ಪ್ರಗತಿಯತ್ತ ಕೊಂಡೊಯ್ಯುವ ಕನಸನ್ನು ಹೊಂದಿದ್ದಾರೆ ಎಂದರು. ಗ್ರಾಮದ ಮನೆ ಮನೆಗಳಿಗೂ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಆರ್.ವೈ. ಕಲಾಲ, ಸುರೇಶ ಮಾಳಗಿಮನಿ, ಎಸ್.ಡಿ. ಮಕಾಂದಾರ, ದುರ್ಗೋಜಿ ಕಲಾಲ, ಗ್ರಾಪಂ ಅಧ್ಯಕ್ಷ ಹಾಲನಗೌಡ ಅಮರಗೋಳ, ಈರನಗೌಡ ಕೊಂಬಳಿ, ಮಲ್ಲನಗೌಡ ಶಿಂಗಟಾಲೂರ, ರವಿ ಕರಿಗಾರ, ಮಂಜುನಾಥ ಕೋಸಲಾಪುರ, ಮಹೇಶ ಕೊರ್ಲಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಪಾಟೀಲರಿಂದ ಸಮಾಜಮುಖಿ ಕಾರ್ಯ
ಗದಗ: ರೋಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ದಿಂದ ಸ್ಪರ್ಧಿಸಿರುವ ಜಿ.ಎಸ್. ಪಾಟೀಲರು ಮತಕ್ಷೇತ್ರದಾದ್ಯಂತ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಸೋಲಾರ್ ಲ್ಯಾಂಪ್ ವಿತರಿಸಿ, ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡಿದ್ದು, ಇಂತಹ ಸಮಾಜಮುಖಿ ನಾಯಕರನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಹೇಳಿದರು. ಅವರು ಬುಧವಾರ ಸ್ಥಳೀಯ ನಿವಾಸದಲ್ಲಿ ರೋಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಭೆ ಉದ್ದೇಶಿಸಿ ಮಾತನಾಡಿದರು. ರೋಣದ ಜಿ.ಎಸ್. ಪಾಟೀಲರ ಮನೆತನ ರಾಜಕೀಯವಾಗಿ, ಆಡಳಿತಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ಈ ಭಾಗಕ್ಕೆ ಮಹತ್ತ ಕೊಡುಗೆ ನೀಡಿದೆ. ಉತ್ತರ ಕರ್ನಾಟಕದಲ್ಲಿ ಎಲೆ ಮರೆಯ ಕಾಯಿಯಂತೆ ಶೈಕ್ಷಣಿಕ ಸೇವೆ ಸಲ್ಲಿಸುತ್ತಾ, ಬಡ, ಹಿಂದುಳಿದ, ಅಲ್ಪಸಂಖ್ಯಾತ, ರೈತರ, ಕೂಲಿ ಕಾರ್ಮಿಕರ, ಶೋಷಿತರ ಮಕ್ಕಳ ಶಿಕ್ಷಣದ ಉನ್ನತಿಗೆ ಶ್ರಮಿಸಿದ ಜಿ.ಎಸ್. ಪಾಟೀಲರ ಸೇವೆ ಅಮೋಘ ಎಂದರು. ದ್ವೇಷದ ರಾಜಕೀಯ ಇಲ್ಲದ ನಿಷ್ಠುರವಾದಿ, ಜನಪರ ಹೋರಾಟದ ಕೆಚ್ಚೆದೆಯ ಧೀರ, ಅಜಾತ ಶತ್ರುಗಳಾಗಿ ವಿಶೇಷ ವ್ಯಕ್ತಿತ್ವದ ಛಾಪು ಮೂಡಿಸಿದ ಜಿ.ಎಸ್. ಪಾಟೀಲರವರು ಉತ್ತರ ಕರ್ನಾಟಕದ ಜನಪ್ರತಿನಿಧಿಗಳಿಗೆ ಮಾದರಿಯರಾಗಿದ್ದಾರೆ ಎಂದರು.
ತಾಪಂ ಮಾಜಿ ಸದಸ್ಯ ಹಾಲಪ್ಪ ಹರ್ತಿ ಮಾತನಾಡಿ, ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಹಿಂದುಳಿದ ತಾಲೂಕಾಗಿದ್ದ ರೋಣದ ಜನತೆಗೆ ವೈದ್ಯಕೀಯ ಸೇವೆ ಮತ್ತು ಉತ್ತಮ ಆರೋಗ್ಯ ನೀಡಿ, ಎಲ್ಲ ಸಮುದಾಯಗಳ ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿ, ರಕ್ತದಾನ ಶಿಬಿರದಂತಹ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡ ರವಿ ದಂಡಿನ ಮಾತನಾಡಿದರು. ಶಕುಂತಲಾ ದಂಡಿನ, ಶ್ರೀನಿವಾಸ ಶೇಠ, ಸಿದ್ದು ಕವಲೂರ, ರಂಗಪ್ಪ ಕಾಶಪ್ಪನವರ, ಸುದರ್ಶನ ಕುರಿ, ಶೇಖಣ್ಣ ಅಗಸಿಮನಿ, ಫಕೀರಪ್ಪ ಅಗಸಿಮನಿ, ಟಿ.ವೈ. ಕುರಿ, ಮಲ್ಲಿಕಾರ್ಜುನ ಆವಾರಿ, ಶೇಖಪ್ಪ ಕಡಿವಾಲ, ಬಸವರಾಜ ಕೊಪ್ಪದ, ಬಸವರಾಜ ಬೆನಕನವಾರಿ, ಬಸವರಾಜ ದಂಡಿನ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

