ಗದಗ

ದಾಳಿ: ಮದ್ಯ ವಶ

Published On :

ರೋಣ: ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಗ್ರಾಮದ ಮೆಣಸಗಿ-ಶಿರೋಳ ರಸ್ತೆಯ ಬಸವನ ಗುಡಿ ಹತ್ತಿರದ ದ್ಯಾಮನಗೌಡ ಪೊಲೀಸ್‌ಪಾಟೀಲ ಎಂಬುವರ ಹೊಲದ ಗೋದಾಮಿನ ಮೇಲೆ ಶುಕ್ರವಾರ ರಾತ್ರಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ರು. 20 ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ರೋಣ ತಾಲೂಕು ಅಬಕಾರಿ ನಿರೀಕ್ಷಕ ಎ.ಬಿ. ಮಠಪತಿ, ಚುನಾವಣೆ ಸಂಚಾರಿ ದಳ ಸಿಬ್ಬಂದಿ ಮಂಜುನಾಥ ಎಸ್.ಎನ್. ಹಾಗೂ ಅಬಕಾರಿ ಸಿಬ್ಬಂದಿ ಭಾಗವಹಿಸಿದ್ದರು.

ಮತದಾನ ಅವಧಿ ವಿಸ್ತರಣೆ
ಗದಗ: ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಲು ಚುನಾವಣಾ ಆಯೋಗವು ನಿಗಧಿಪಡಿಸಿದ್ದ ಅವಧಿಯನ್ನು ಬಿಸಿಲಿನ ತಾಪಮಾನ ಹೆಚ್ಚಾದ ಕಾರಣದಿಂದ ವಿಸ್ತರಿಸಿ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ಎಸ್.ಟಿ. ಅಂಜನಕುಮಾರ್ ತಿಳಿಸಿದ್ದಾರೆ. ಮೇ 5ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಬಹುದು.

ಮತದಾನದ ಸಮೀಕ್ಷೆ ಪ್ರಸಾರಕ್ಕೆ ನಿರ್ಬಂಧ
ಗದಗ: ಮೇ 5ರಂದು ರಾಜ್ಯಾದ್ಯಂತ ಜರುಗಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ವೇಳೆ ವಿದ್ಯುನ್ಮಾನ ಚಾನೆಲ್‌ಗಳು ಸೇರಿದಂತೆ ಯಾವುದೇ ಸುದ್ದಿ ಮಾಧ್ಯಮಗಳು ಚುನಾವಣಾ ಸಮೀಕ್ಷೆ ನಡೆಸದಂತೆ ಭಾರತೀಯ ಚುನಾವಣಾ ಆಯೋಗ ನಿಬಂಧನೆ ವಿಧಿಸಿದೆ. ಬೆಳಗ್ಗೆ 7ರಿಂದ ಸಂಜೆ 6.30ರ ವರೆಗೆ ಯಾವುದೇ ರೀತಿಯ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಪ್ರಸಾರ ಮಾಡಬಾರದೆಂದು ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ: ಮತಗಟ್ಟೆ ಸುತ್ತ 200 ಮೀ. ನಿಷೇಧ
ಗದಗ: ಭಾನುವಾರ ಜರುಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಶಾಂತಿ-ಸುವ್ಯವಸ್ಥೆ ಪಾಲನೆ ದೃಷ್ಟಿಯಿಂದ ಗದಗ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮೇ 4ರ ಮಧ್ಯರಾತ್ರಿ 12ರಿಂದ ಮೇ 5ರ ರಾತ್ರಿ 12ರ ವರೆಗೆ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಟಿ. ಅಂಜನಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಪ್ರದೇಶಗಳಲ್ಲಿ ಯಾವುದೇ ರಾಜಕೀಯ ಪಕ್ಷದವರು, ಏಜೆಂಟರು ಅಥವಾ ಕಾರ್ಯಕರ್ತರಾಗಲಿ ಪ್ರವೇಶ ಮಾಡುವಂತಿಲ್ಲ. ಈ ಆದೇಶ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿ, ಸಿಬ್ಬಂದಿಗೆ ಹಾಗೂ ಮತ ಚಲಾಯಿಸಲು ಬರುವ ಮತದಾರರಿಗೆ ಅನ್ವಹಿಸುವುದಿಲ್ಲ.

ರಾಣಿಬೆನ್ನೂರು: 233 ಮತಗಟ್ಟೆಗಳ ಸ್ಥಾಪನೆ
ರಾಣಿಬೆನ್ನೂರು: ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಮೇ 5ರಂದು ಶಾಂತಿ-ಸುವ್ಯವಸ್ಥೆಯಿಂದ ನಡೆಸಲು ತಾಲೂಕಾಡಳಿತ ಸಕಲ ವ್ಯವಸ್ಥೆ ಮಾಡಿದೆ ಎಂದು ತಹಸೀಲ್ದಾರ್ ಕೆ.ಎಚ್. ಶಿವಕುಮಾರ, ಚುನಾವಣಾಧಿಕಾರಿ ಬಸನಗೌಡ ತಿಳಿಸಿದರು. ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾಲೂಕಿನಲ್ಲಿ ಒಟ್ಟು 233 ಮತಗಟ್ಟೆ ತೆರೆಯಲಾಗಿದೆ. ಕುಪ್ಪೆಲೂರು, ಮೇಡ್ಲೆರಿ ಹೋಬಳಿ ವ್ಯಾಪ್ತಿಯ ಚಳಗೇರಿ, ಮಾಕನೂರು, ಕುಪ್ಪೇಲೂರು ಗ್ರಾಮಗಳಲ್ಲಿ ವಿಶೇಷ ಠಾಣೆಗಳನ್ನು ತೆರೆದು ಅಕ್ರಮಗಳಿಗೆ ತಡೆ ಹಾಕಲಾಗುತ್ತಿದೆ ಎಂದರು. 233 ಮತಗಟ್ಟೆಗಳ ಪೈಕಿ 71 ಸೂಕ್ಷ್ಮ, 68 ಅತಿ ಸೂಕ್ಷ್ಮ, 94 ಸಾಮಾನ್ಯ ಎಂದು ಗುರುತಿಸಿದ್ದು, ಎಲ್ಲ ಮತಗಟ್ಟೆಗಳ ರಕ್ಷಣೆಗಾಗಿ ಪೊಲೀಸ್, ಅರೆ ಸೇನಾಪಡೆ ಮತ್ತು ಗೃಹರಕ್ಷಕ ದಳವನ್ನು ನೇಮಿಸಲಾಗಿದೆ. ತಾಲೂಕಿನಲ್ಲಿ 1,04,404 ಪುರುಷರು, 96,372 ಸ್ತ್ರೀಯರು, 11 ಇತರರು ಸೇರಿ ಒಟ್ಟು 200737 ಮತದಾರರಿದ್ದಾರೆ. 12ರಿಂದ 14 ಗ್ರಾಮೀಣ ಮತಗಟ್ಟೆಗಳಿಗೆ ಒಬ್ಬರಂತೆ ಸೆಕ್ಟರ್ ಅಧಿಕಾರಿಗಳನ್ನು, ನಗರದ 24 ಮತಗಟ್ಟೆಗಳಿಗೆ ಒಬ್ಬರಂತೆ 16 ಸೆಪ್ಟರ್ ಆಫೀಸರ್‌ಗಳನ್ನು, 3ಹೋಬಳಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾ ವಹಿಸಲು 3 ಅಧಿಕಾರಿಗಳನ್ನು, ಅಕ್ರಮಗಳ ತಡೆಯುವುದಕ್ಕಾಗಿ 5 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.