ಗದಗ

ಗಜೇಂದ್ರಗಡ: ಬಿಗಿ ಭದ್ರತೆ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 4
ವಿಧಾನಸಭಾ ಚುನಾವಣೆಗೆ ಭಾನುವಾರ ಮತದಾನ ಹಿನ್ನೆಲೆಯಲ್ಲಿ ಗಜೇಂದ್ರಗಡ ಪಟ್ಟಣದಲ್ಲಿ 11,074 ಪುರುಷ ಹಾಗೂ 10,822 ಮಹಿಳಾ ಮತ ಚಲಾಯಿಸಲಿದ್ದಾರೆ. ಒಟ್ಟು 25 ಮತಕೇಂದ್ರಗಳಿದ್ದು, ಇದರಲ್ಲಿ 8 ಅತಿ ಸೂಕ್ಷ್ಮ, 7 ಸೂಕ್ಷ್ಮ, 10 ಸಾಮಾನ್ಯ ಮತಗಟ್ಟೆಗಳೆಂದು ಗುರ್ತಿಸಲಾಗಿದೆ. ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಪ್ರಶಾಂತ ವರಗಪ್ಪನವರ, ಎಸ್.ಎಸ್.ಇಟೇಕರ ತಿಳಿಸಿದರು.
ಅವರು ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿ, ಮತದಾನ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆಯಾಗಿ 150 ಪೊಲೀಸರು, 70 ಅರೆ ಮೀಸಲು ಪಡೆ, ಓರ್ವ ಡಿಎಸ್‌ಪಿ, ಇಬ್ಬರು ಸಿಪಿಐ, ಇಬ್ಬರು ಪಿಎಸ್‌ಐ, ಮೂವರು ಎಎಸ್‌ಐ, 60 ಹೋಂಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸ್ಥಳೀಯ ಠಾಣೆಯ ಪಿಎಸ್‌ಐ ವೀರಾರಡ್ಡಿ ತಿಳಿಸಿದರು.
ವಿದ್ಯುನ್ಮಾನ ಮತಯಂತ್ರ ಬಳಕೆ
2007ರಿಂದ ಈಚೆಗೆ ತಯಾರಿಸಲ್ಪಡುತ್ತಿರುವ ವಿದ್ಯುನ್ಮಾನ ಮತ ಯಂತ್ರಗಳು ಹಳೆಯ ಯಂತ್ರಗಳಿಗಿಂತ ಸುಧಾರಿತ ರೂಪ ಪಡೆದುಕೊಂಡಿದೆ. ಮತದಾನ ಎಷ್ಟು ಗಂಟೆಗೆ ಆರಂಭವಾಯಿತು? ಎಷ್ಟು ಹೊತ್ತಿಗೆ ಮುಗಿಯಿತು? ಪ್ರತಿ ಗಂಟೆಗೊಮ್ಮೆ ಎಷ್ಟು ಮತದಾನ ಆಯಿತು? ಎಂಬುದನ್ನು ಈ ಯಂತ್ರ ನಮೂದಿಸುತ್ತದೆ. ಅಲ್ಲದೇ ಮತ ಚಲಾಯಿಸುವಾಗ ಮತದಾರ ತಾನು ಚಲಾಯಿಸಿದ ಮತ ಕುಲಗೆಟ್ಟಿದೆ ಎಂದು ಸಂಶಯಪಟ್ಟರೆ ಅದನ್ನೂ ಈ ಯಂತ್ರಗಳಲ್ಲಿ ಪತ್ತೆ ಮಾಡಲು ಸಾಧ್ಯ ಎಂದರು.
ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನಿಲ್ಲದ ಪ್ರಾಶಸ್ತ್ಯ. ಮತದಾನದ ಮಹತ್ವ ಸಾರಿ ಹೇಳುವ ಘೋಷಣೆ ವಾಕ್ಯಗಳು ಎಲ್ಲೆಡೆ ಧುಮ್ಮಿಕ್ಕುತ್ತಿವೆ. ಮತದಾನ ಪವಿತ್ರವಾದದ್ದು, ಅದನ್ನು ವ್ಯರ್ಥ ಮಾಡಬೇಡಿ. ಈ ರೀತಿಯ ಘೋಷ ವಾಕ್ಯಗಳು ಹುಟ್ಟಿಕೊಳ್ಳಲು ಸಾಕಷ್ಟು ಕಾರಣಗಳಿವೆ. ಕಳೆದ 2 ದಶಕಗಳ ಅವಧಿಯಲ್ಲಿ ರೋಣ ಕ್ಷೇತ್ರದಲ್ಲಿ ನಡೆದಿರುವ ಚುನಾವಣೆಗಳಲ್ಲಿ ದಾಖಲಾದ ಮತದಾನ ಪ್ರಮಾಣ ಅವಲೋಕಿಸಿದರೆ, ಮತದಾನ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ. ವಿದ್ಯಾವಂತರೆನಿಸಿಕೊಂಡ ಬಹಳಷ್ಟು ಜನ ಮತ ಚಲಾಯಿಸಲು ಮತಗಟ್ಟೆಗಳಿಗೆ ಹೋಗುವ ತೊಂದರೆಯನ್ನೇ ತೆಗೆದುಕೊಳ್ಳುವುದಿಲ್ಲ. ಇದಕ್ಕೆ ನಾನಾ ರೀತಿಯ ಕಾರಣಗಳಿರಬಹುದು.
ಈ ಹಿನ್ನೆಲೆಯಲ್ಲಿ ಮತದಾನ ಪವಿತ್ರವಾದುದು. ಅದಕ್ಕೆ ತನ್ನದೇ ಆದ ಮಹತ್ವವಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಚುನಾವಣೆಯೇ ಭದ್ರ ಬುನಾದಿ. ಈ ದೆಸೆಯಲ್ಲಿ ಚುನಾವಣಾ ಆಯೋಗದ ಜಾಗೃತಿಗಳು ಮತದಾರರ ಮನ ಮುಟ್ಟುವಂತೆ ಮಾಡಿವೆ. ಇದರ ಜತೆಗೆ ಈ ಬಾರಿ ಮತದಾನ ಸಮಯವನ್ನು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ನಿಗದಿಪಡಿಸಲಾಗಿದೆ. ಈ ನಿಟ್ಟಿನಲ್ಲಿ ಮತದಾರರು ತಮ್ಮ ಪವಿತ್ರ ಹಕ್ಕನ್ನು ಸೂಕ್ತ ಅಭ್ಯರ್ಥಿಗೆ ಚಲಾಯಿಸಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣರಾಗಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.