ಗದಗ

ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

Published On :

-ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗದಗ, ಮೇ 4

ಜಿಲ್ಲೆಯಾದ್ಯಂತ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಭಾನುವಾರ ಜಿಲ್ಲೆಯ 47 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು, ಬಹುತೇಕ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮತದಾರರ ಮನ ಸೆಳೆಯುವ ಕಸರತ್ತು ಮುಗಿಸಿದ್ದು, ಎಲ್ಲರ ಚಿತ್ತ ಮತದಾನದತ್ತ ನೆಟ್ಟಿದೆ.
ಗದಗ ಜಿಲ್ಲೆಯಲ್ಲಿ ಗದಗ, ರೋಣ, ನರಗುಂದ, ಶಿರಹಟ್ಟಿ ಮತಕ್ಷೇತ್ರಗಳನ್ನು ಹೊಂದಿದ್ದು, ಪ್ರತಿ ಮತ ಕ್ಷೇತ್ರದಲ್ಲಿಯೂ ಚುನಾವಣೆ ಸುಗಮವಾಗಿ ಜರುಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಿರಹಟ್ಟಿ ಮತಕ್ಷೇತ್ರದಲ್ಲಿ 4 ಪೂರಕ ಮತಗಟ್ಟೆ ಸೇರಿದಂತೆ 230 ಮತಗಟ್ಟೆ, ಗದಗ ಮತಕ್ಷೇತ್ರದಲ್ಲಿ 200 ಮತಗಟ್ಟೆ, ರೋಣ ಮತಕ್ಷೇತ್ರದಲ್ಲಿ 2 ಪೂರಕ ಮತಗಟ್ಟೆ ಸೇರಿದಂತೆ 248 ಮತಗಟ್ಟೆ ಹಾಗೂ ನರಗುಂದ ಮತಕ್ಷೇತ್ರದಲ್ಲಿ 4 ಪೂರಕ ಮತಗಟ್ಟೆ ಸೇರಿದಂತೆ 197 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಒಟ್ಟು 875 ಮತಗಟ್ಟೆಗಳನ್ನು ತೆರೆಯಲಾಗಿದೆ. ಇದರಲ್ಲಿ ಶಿರಹಟ್ಟಿ ವ್ಯಾಪ್ತಿಯಲ್ಲಿ 70 ಸೂಕ್ಷ್ಮ, 48 ಅತಿ ಸೂಕ್ಷ್ಮ ಹಾಗೂ 108 ಸಾಮಾನ್ಯ, ಗದಗ ವ್ಯಾಪ್ತಿಯಲ್ಲಿ 22 ಸೂಕ್ಷ್ಮ, 78 ಅತಿ ಸೂಕ್ಷ್ಮ ಹಾಗೂ 100 ಸಾಮಾನ್ಯ, ರೋಣ ವ್ಯಾಪ್ತಿಯಲ್ಲಿ 63 ಸೂಕ್ಷ್ಮ, 64 ಅತಿ ಸೂಕ್ಷ್ಮ ಹಾಗೂ 119 ಸಾಮಾನ್ಯ ಮತ್ತು ನರಗುಂದ ವ್ಯಾಪ್ತಿಯಲ್ಲಿ 60 ಸೂಕ್ಷ್ಮ, 42 ಅತಿ ಸೂಕ್ಷ್ಮ ಹಾಗೂ 91 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇದರಲ್ಲಿ ಒಟ್ಟು 215 ಸೂಕ್ಷ್ಮ, 232 ಅತಿ ಸೂಕ್ಷ್ಮ ಹಾಗೂ 418 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಜಿಲ್ಲೆಯ ಆಯ್ದ 28 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಜಿಲ್ಲೆಯ ಒಟ್ಟು 875 ಮತಗಟ್ಟೆಗಳಿಗೂ ಭದ್ರತೆ ದೃಷ್ಟಿಯಿಂದ ಸಮಾನ ಪ್ರಾತಿನಿಧ್ಯ ನೀಡಲಾಗಿದೆ. ಈ ಚುನಾವಣಾ ಕಾರ್ಯಕ್ಕೆ ಸ್ಥಳೀಯ 450 ಗೃಹರಕ್ಷಕ ಸಿಬ್ಬಂದಿ, 40 ಮಹಾರಾಷ್ಟ್ರದ ಗೃಹರಕ್ಷಕರು, 4 ಡಿಎಸ್ಪಿ, 21 ಇನ್ಸ್‌ಪೆಕ್ಟರ್ ಹಾಗೂ 33 ಸಬ್‌ಇನ್ಸ್‌ಪೆಕ್ಟರ್‌ರನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಮತದಾನ ನಡೆಸುವ ಉದ್ದೇಶದಿಂದ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕೆಲವು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.