ಗದಗ

ಮತದಾನ ವಂಚಿತರಿಂದ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ರೋಣ, ಮೇ 5
250ಕ್ಕೂ ಹೆಚ್ಚು ಜನರ ಹೆಸರು ಮತದಾರ ಪಟ್ಟಿಯಿಂದ ನಾಪತ್ತೆಯಾಗಿದ್ದರಿಂದ ಮತದಾನ ವಂಚಿತರಾಗಿ ಆಕ್ರೋಶಗೊಂಡ ತಾಲೂಕಿನ ಸರ್ಜಾಪುರ ಗ್ರಾಮಸ್ಥರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಎದುರು ತಾಲೂಕು ಆಡಳಿತದ ಬೇಜವಾಬ್ದಾರಿ ಖಂಡಿಸಿ ಭಾನುವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ 1300ಕ್ಕೂ ಹೆಚ್ಚು ಮತದಾರರಿದ್ದು, ಅದರಲ್ಲಿ 250ಕ್ಕೂ ಹೆಚ್ಚು ಮತದಾರರು ಗುರುತಿನ ಚೀಟಿ ಇದ್ದು, ಆದರೆ ಮತದಾರರ ಯಾದಿಯಲ್ಲಿ ಅವರ ಹೆಸರಿಲ್ಲದ್ದರಿಂದ ಮತದಾನಕ್ಕೆ ಅವಕಾಶ ಸಿಗಲಿಲ್ಲ. ನಮ್ಮ ಹಕ್ಕನ್ನು ಉದ್ದೇಶ ಪೂರ್ವಕವಾಗಿ ಕಸಿದುಕೊಳ್ಳಲಾಗಿದೆ. ನಮಗೆ ತೀವ್ರ ಅನ್ಯಾಯವಾಗಿದೆ. ಇದರ ಹಿಂದೆ ಕ್ಷೇತ್ರದ ಪ್ರಮುಖ ವ್ಯಕ್ತಿ ಮತ್ತು ಅಧಿಕಾರಿಗಳ ಕೈವಾಡವಿದೆ. ಮತದಾನ ವಂಚಿತರಾದವರಲ್ಲಿ ಬಹುತೇಕ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯವರ ಹೆಸರು ಅಧಿಕವಾಗಿವೆ. ಈ ಹಿಂದಿನ ಅನೇಕ ಚುನಾವಣೆಯಲ್ಲಿ ನಾವು ಮತ ಚಲಾಯಿಸಿದ್ದೇವೆ. ಇದೇ ಚುನಾವಣಾ ಗುರುತಿನ ಚೀಟಿಯಿಂದಲೇ ಅನೇಕ ಸೌಲಭ್ಯ ಪಡೆದುಕೊಂಡಿದ್ದೇವೆ. ಆದರೆ ದೀಢಿರ್ ಹೆಸರು ನಾಪತ್ತೆಯಾಗಿದ್ದರಿಂದ ಮತದಾನ ಅವಕಾಶ ತಪ್ಪಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ತನಿಖೆಗೆ ಒತ್ತಾಯ: ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಬಗ್ಗೆ ನಮಗೆ ಯಾವುದೇ ಅಧಿಕಾರಿಗಳು ಈ ವರೆಗೂ ತಿಳಿಸಿಲ್ಲ. ನಾವು ನಿತ್ಯ ಕೂಲಿಗಾಗಿ ಹೊಲಗಳಿಗೆ ಹೋಗುತ್ತವೆ. ಮರಳಿ ಸಂಜೆ ಬರುತ್ತವೆ. ನಾವಿಲ್ಲದಾಗ ಬಂದು ಬೇಕಾಬಿಟ್ಟಿಯಾಗಿ ಸರ್ವೆ ಮಾಡಿದ್ದಲ್ಲದೆ, ಉದ್ದೇಶಪೂರ್ವಕವಾಗಿ ಒಂದೇ ಸಮೂದಾಯಕ್ಕೆ ಸೇರಿದ 200ಕ್ಕೂ ಹೆಸರುಗಳನ್ನು ಡಿಲೀಟ್ ಮಾಡಿಸಲಾಗಿದೆ. ಇದೊಂದು ಪೂರ್ವ ನಿಯೋಜಿತ ಕಾರ್ಯವಾಗಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಅಲ್ಲದೇ ಮತದಾರ ಪಟ್ಟಿಯಿಂದ ಹೆಸರು ನಾಪತ್ತೆಯಾದ ಕುರಿತು ವಿವರಣೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಶರಣಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಬೇವಿನಮರದ, ಮಾಲಿಂಗಪ್ಪ ಬೊಮ್ಮಸಾಗರ, ಅಂದಪ್ಪ ನಾಗನೂರ, ಶಾಂತಪ್ಪ ಬೊಮ್ಮಸಾಗರ, ಕೊಮಪ್ಪ ಲಮಾಣಿ, ದುರ್ಗಪ್ಪ ಲಮಾಣಿ, ಶಿವಾನಂದ ರಾಠೋಡ, ಶರಣಪ್ಪ ರಾಠೋಡ, ಯಲ್ಲಪ್ಪ ನಾಗನೂರ, ಚಂದ್ರಶೇಖರ ನಾಗನೂರ, ಎಸ್.ಬಿ. ಪಾಟೀಲ, ಈಶಪ್ಪ ಲಮಾಣಿ, ಅಂದಪ್ಪ ಕಾತರಕಿ, ಹನಮವ್ವ ಚಿಕ್ಕಬಾವಿ, ರುದ್ರವ್ವ ನಾಗನೂರ, ಹನಮವ್ವ ಬಂಡಿವಡ್ಡರ, ಲಕ್ಷ್ಮವ್ವ ರಾಠೋಡ, ಶರಣವ್ವ ನಾಗನೂರ ಮುಂತಾದವರು ಪ್ರತಿಭಟನೆಯಲ್ಲಿಭಾಗವಹಿಸಿದ್ದರು.
ರೋಣ ಮತಕ್ಷೇತ್ರದಲ್ಲಿ ಅನೇಕ ಗ್ರಾಮಗಳಲ್ಲಿ ಮತದಾರ ಪಟ್ಟಿಯಿಂದ ಹೆಸರು ನಾಪತ್ತೆಯಾಗಿರುವ ಕುರಿತು ದೂರುಗಳು ಬಂದಿವೆ. ನೂರಕ್ಕೆ ನೂರರಷ್ಟು ಮತದಾನವಾಗಬೇಕು ಎಂದು ಚುನಾವಣಾ ಆಯೋಗವು ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದೆ. ಆದರೆ, ಈ ರೀತಿಯಾಗಿದ್ದು ನಮಗೂ ಬೇಸರ ತಂದಿದೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು.
- ಎನ್.ಆರ್. ಉಮೇಶ, ರೋಣ ಮತಕ್ಷೇತ್ರ ಚುನಾವಣಾಧಿಕಾರಿ
ವೋಟ್ ಹಾಕಾಕಂತ ಬೆಳಗ್ಗೆಯಿಂದ ಇಲ್ಲಿ ಬಂದ ಕುಳಿತೆವ್ರಿ ಎಪ್ಪಾ, ಆದ್ರ ನಮನ್ನ ಯಾರು ವೋಟ್ ಹಾಕಾಕ ಬೀಡವಲ್ರಿ. ಕೇಳಿದ್ರ ನಿಮ್ಮ ಹೆಸರಿಲ್ಲಾ ವೋಟು ಹಾಕಾಕ ನೀಮ್ಗ ಬರಲ್ಲ ಮನಿಗೆ ಹೋಗ್ರಿ ಅಂತ ಅಧಿಕಾರಿಗಳು ಹೇಳ್ತಾರ್ರಿ, ವೋಟ್ ಹಾಕಾಕ ಈ ನಾವ್ ದೇಸದಾರ ಅಲ್ಲೇನ್ರೀ...
-ಶಾಂತವ್ವ ಲಮಾಣಿ, ಕಾಶವ್ವ ಸಾಲಿಮನಿ, ಅಂದವ್ವ ಕಾತರಕಿ, ಸರ್ಜಾಪುರ ಗ್ರಾಮದ ಮತದಾನ ವಂಚಿತ ಮಹಿಳೆಯರು

ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ ಮತ್ತು ದೋಷಗಳಿದ್ದಲ್ಲಿ ಅಂಥವರು ಮರಳಿ ಪರಿಷ್ಕೃತ ಅರ್ಜಿ ಸಲ್ಲಿಸಲು ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರಿ ತಿಳಿಸಲಾಗಿದ್ದರೂ ಅನೇಕರು ಇದರ ಲಾಭ ಪಡೆದುಕೊಂಡಿಲ್ಲ. ಇದರಿಂದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗಿವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಬರುವುದಿಲ್ಲ.
-ಎಂ.ಬಿ. ಪಾಟೀಲ, ರೋಣ ತಹಸೀಲ್ದಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.