ಗದಗ

ಜಿ.ಎಸ್. ಪಾಟೀಲ್‌ಗೆ 3ನೇ ಗೆಲವು

Published On :

ಕನ್ನಡಪ್ರಭ ವಾರ್ತೆ, ರೋಣ, ಮೇ 8
ತೀವ್ರ ಕುತೂಹಲ ಕೆರಳಿಸಿದ್ದ ರೋಣ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಹಾಟ್ರಿಕ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ, ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್ ಗೆಲವು ತನ್ನದಾಗಿಸಿಕೊಂಡಿದ್ದಾರೆ. ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಹುಮ್ಮಸ್ಸು ಮೂಡಿದೆ.
ರೋಣ ಮತಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಜಿದ್ದಾಜಿದ್ದಿ ಈ ಚುನಾವಣೆಯಲ್ಲಿ ಏರ್ಪಟ್ಟಿತ್ತು. ಯಾರಿಗೆ ವಿಜಯಮಾಲೆ ಎಂದು ಊಹಿಸುವುದೂ ಕಷ್ಟವಾಗಿತ್ತು. 2004 ಮತ್ತು 2008ರಲ್ಲಿ ಬಿಜೆಪಿಯ ಕಳಕಪ್ಪ ಬಂಡಿ ವಿರುದ್ಧ ಸತತ ಸೋಲು ಕಂಡಿದ್ದ ಕಾಂಗ್ರೆಸ್‌ನ ಜಿ.ಎಸ್. ಪಾಟೀಲ್ 18 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಪಾಟೀಲರು 1989, 1999 ಮತ್ತು 2013ರಲ್ಲಿ ಗೆಲ್ಲುವ ಮೂಲಕ 3ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಕ್ಷೇತ್ರ ವೈಶಿಷ್ಟ್ಯ ಮತ್ತೊಮ್ಮೆ ಸಾಬೀತು: ರೋಣ ಕ್ಷೇತ್ರ 14 ವಿಧಾನಸಭೆ ಚುನಾವಣೆಯನ್ನು ಎದುರಿಸಿದೆ. 2004ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಆಡಳಿತ ನಡೆದಿದ್ದು ಹೊರತುಪಡಿಸಿ, ಉಳಿದ ಎಲ್ಲ ಚುಣಾವಣೆಯಲ್ಲೂ ಈ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೋ ಅದೇ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಿದೆ. ಈ ಬಾರಿಯೂ ಈ ಅಂಶ ಸಾಬೀತಾದಂತಾಗಿದೆ.
ಕೈಗೂಡಿದ ಹರಕೆ, ದೀಡ್ ನಮಸ್ಕಾರ: ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧ ಅಲೆ, ಕಾಂಗ್ರೆಸ್ ಪರ ಗಾಳಿ ಬೀಸಿದೆ. ರೋಣ ಕ್ಷೇತ್ರ ಅದಕ್ಕೆ ಹೊರತಾಗಿಲ್ಲ. ಪಾಟೀಲ್ ಪರ ಅಲೆ ಬೀಸಿದೆಯೋ ಅಥವಾ ಬಂಡಿ ಅವರಿಗೆ ಪಾಠ ಕಲಿಸಬೇಕೆಂದು ಉದ್ದೇಶ ಮತದಾರರದ್ದೋ ಅಥವಾ ಎರಡೂ ಸೇರಿತೋ ಎಂದು ನಿರ್ಣಯಿಸುವುದು ಕಷ್ಟ. ಕ್ಷೇತ್ರದಾದ್ಯಂತ ಜಿ.ಎಸ್. ಪಾಟೀಲ್ ಗೆಲುವಿಗಾಗಿ ಅಭಿಮಾನಿಗಳು, ಕಾರ್ಯಕರ್ತರು ದೇವರಲ್ಲಿ ನಾನಾ ರೀತಿಯ ಹರಕೆ ಹೊತ್ತಿದ್ದರು. ಕಾಯಿ ಕಟ್ಟುವುದು, ದೀಡ್ ನಮಸ್ಕಾರ ಹಾಕುವುದು, ರುದ್ರಾಭಿಷೇಕ, ಕ್ಷೀರಾಭಿಷೇಕ ಮಾಡಿದ್ದರು. ಹರಕೆಗೆ ಪ್ರತಿಫಲ ಸಿಕ್ಕ ಧನ್ಯತೆ ಅಭಿಮಾನಿಗಳದ್ದು.

ಸಮಗ್ರ ಅಭಿವೃದ್ಧಿಗೆ ಆದ್ಯತೆ...
ಗೆಲುವು ಸಂತೋಷ ತಂದಿದೆ. ನನಗಿಂತ ನನ್ನ ಅಭಿಮಾನಿಗಳು, ಪಕ್ಷದ ಕಾರ್ಯಕರ್ತ ಸಂಘಟನೆಯ ಸತತ ಪರಿಶ್ರಮ, ಹೋರಾಟದ ಪ್ರತಿಫಲ ಇದಾಗಿದೆ. ಕ್ಷೇತ್ರದ ಜನತೆ ಜನತೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನನ್ನ ಮೇಲೆ ವಿಶ್ವಾಸವಿಟ್ಟು ಆಶೀರ್ವದಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ. ಜನತೆಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವದರೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ.
-ಜಿ.ಎಸ್. ಪಾಟೀಲ್


ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ
ಗಜೇಂದ್ರಗಡ: ರೋಣ ವಿಧಾನಸಭಾ ಕ್ಷೇತ್ರದಲ್ಲಿ 9 ವರ್ಷದಿಂದ ಪಾರುಪತ್ಯ ಮೆರೆದಿದ್ದ ಸಚಿವ ಕಳಕಪ್ಪ ಬಂಡಿ ನೇತೃತ್ವದ ಬಿಜೆಪಿ ಆಡಳಿತಕ್ಕೆ ಪ್ರಜ್ಞಾವಂತ ಮತದಾರರು ತಿಲಾಂಜಲಿ ನೀಡಿ ಕಾಂಗ್ರೆಸ್ ಕೈಗೆ ಸಾರಥ್ಯ ನೀಡುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ.
ಆತ್ಮ ವಿಶ್ವಾಸದಿಂದ ಬೀಗುತ್ತಿದ್ದ ಸಚಿವ ಕಳಕಪ್ಪ ಬಂಡಿಗೆ ರೋಣ ಕ್ಷೇತ್ರ ಮತದಾರರು ಸೋಲಿನ ರುಚಿ ಉಣಬಡಿಸುವ ಮೂಲಕ ಭಾರಿ ಮುಖಭಂಗ ಅನುಭವಿಸುವಂತೆ ಮಾಡಿದ್ದಾರೆ.
ಬಿಜೆಪಿ ಕನಸು ನುಚ್ಚುನೂರು: ರೋಣ ಕ್ಷೇತ್ರ ಅಭಿವೃದ್ಧಿಗಾಗಿ ಸಹಸ್ರಾರು ಕೋಟಿ ಅನುದಾನ ಹರಿದು ಬಂದಿದೆ. ಗ್ರಾಮೀಣ ಪ್ರದೇಶ ಸೇರಿದಂತೆ ಗಜೇಂದ್ರಗಡ, ನರೇಗಲ್, ರೋಣ, ಮುಂಡರಗಿ ಭಾಗ ಕೆಲ ಹಳ್ಳಿಗಳಿಗೆ ನೀರಾವರಿ ಸೌಕರ್ಯ, ರಸ್ತೆ, ಶುದ್ಧ ಕುಡಿವ ನೀರು ಪೂರೈಕೆ, ಶಿಕ್ಷಣ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸಿರುವುದು ಜನತೆ ಅರಿತಿದ್ದಾರೆ. ಇದರಿಂದ ನನ್ನ ಗೆಲವು ಸುಲಭ ಎಂದು ಸಚಿವ ಕಳಕಪ್ಪ ಬಂಡಿ ಕನಸು ಕಂಡಿದ್ದರು. ಆದರೆ, ಕ್ಷೇತ್ರಕ್ಕೆ ಸರ್ಕಾರದಿಂದ ಬಿಡುಗಡೆಯಾದ ನೂರಾರು ಕೋಟಿ ಹಣವನ್ನು ಬಿಜೆಪಿ ನಾಯಕರು ಕೊಳ್ಳೆ ಹೊಡೆದ ಪರಿಣಾಮ ಕಳಪೆ ಕಾಮಗಾರಿಯಾಗಿವೆ ಎಂದು ವಿಪಕ್ಷವಾದ ಕಾಂಗ್ರೆಸ್ ಬಲವಾಗಿ ಆರೋಪಿಸಿತ್ತ ಬಂದಿದ್ದನ್ನು ಮತದಾರ ಮನ ಸೆಳೆಯಿತು. ಇದರಿಂದ ಪ್ರಸ್ತುತ ನಡೆದ ರೋಣ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿಗೆ ಹೀನಾಯ ಸೋಲು ಅನುಭವಿಸಬೇಕಾಯಿತು ಎಂದು ರಾಜಕೀಯ ತಜ್ಞರ ಅಭಿಮತ.
ನಡುಕ ಹುಟ್ಟಿಸಿದ ಫಲಿತಾಂಶ: ಮೇ 5ರಂದು ಮತದಾನ ನಡೆದ ಬಳಕ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಸಮಬಲದ ಹೋರಾಟವಾಗಿದೆ. ಯಾರೇ ಗೆದ್ದರೂ ಅಲ್ಪ ಮತದಲ್ಲಿ ವಿಜಯ ಮಾಲೆ ಧರಿಸುವರು ಎಂದು ಜನ ಲೆಕ್ಕಾಚಾರ ಹಾಕಿದ್ದರು. ಆದರೆ, ಕಾಂಗ್ರೆಸ್ ಅಪಾರ ಬಹುಮತ ಪಡೆಯುವ ಮೂಲಕ ಗೆದ್ದಿರುವುದು ಎಲ್ಲರ ಲೆಕ್ಕಚಾರ ಹುಬ್ಬೇರಿಸುವಂತೆ ಮಾಡಿತು. ಬಿಜೆಪಿ ನಾಯಕರಿಗೆ ಈಗ ನಡುಕ ಶುರುವಾಗಿದೆ.
-ಪಿ.ಎಸ್. ಪಾಟೀಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.