ಬಿಜೆಪಿ ಸೋಲಿಗೆ ನಾಯಕರ ವರ್ತನೆಯೇ ಕಾರಣ...
ಕನ್ನಡಪ್ರಭ ವಾರ್ತೆ, ಗದಗ, ಮೇ 9
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ನೆಲಕಚ್ಚಿದ್ದು, ಬಿಜೆಪಿ ಸೋಲಿಗೆ ಕಾರಣಗಳನ್ನು ಹುಡುಕುತ್ತ ಹೊರಟರೆ ಆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸಿಕ್ಕ ಉತ್ತರ, ಪಕ್ಷದಿಂದ ಚುನಾಯಿತರಾದ ನಾಯಕರ ವರ್ತನೆಯೇ ಪ್ರಮುಖ ಕಾರಣವಂತೆ... ಹೀಗೆ ಹೇಳುತ್ತಿರುವುದು ಬೇರಾರೂ ಅಲ್ಲ. ಸ್ವತಃ ಬಿಜೆಪಿಯ ಪ್ರಮುಖ ಕಾರ್ಯಕರ್ತರ ಅಭಿಪ್ರಾಯವಿದು.
ಬುಧವಾರ ಪಕ್ಷ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ದಿಢೀರನೇ ನಡೆದ ಪಕ್ಷದ ಆಂತರಿಕ ಸಭೆಯಲ್ಲಿಯೂ ಈ ಬಗ್ಗೆ ಗಂಭೀರವಾದ ಚಿಂತನೆ ನಡೆದಿದೆ ಎನ್ನುವ ವಿಷಯ ಜಿಲ್ಲೆಯ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚಿತವಾಗುತ್ತಿದೆ.
2ನೇ ಹಂತದ ನಾಯಕರನ್ನು ಬೆಳೆಸಲಿಲ್ಲ: ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಳಕಪ್ಪ ಬಂಡಿ, ನರಗುಂದದಲ್ಲಿ ಸಿ.ಸಿ. ಪಾಟೀಲ, ಗದಗದಲ್ಲಿ ಶ್ರೀಶೈಲಪ್ಪ ಬಿದರೂರ ಹಾಗೂ ಶಿರಹಟ್ಟಿ ರಾಮಣ್ಣ ಲಮಾಣಿ ಮೊದಲು ಪಕ್ಷದ ನೈಜ ಕಾರ್ಯಕರ್ತರನ್ನು ಕಡೆಗಣಿಸಿದ್ದೇ ಅವರಿಗೆ ಮುಳುವಾಯಿತು. ಇನ್ನು ತಮ್ಮ ಅಧಿಕಾರವಧಿಯಲ್ಲಿ 2ನೇ ಹಂತದ ನಾಯಕರನ್ನು ಬೆಳೆಸಲೇ ಇಲ್ಲ. ಅವರನ್ನು ಪಕ್ಷದಲ್ಲಿ ಬೆಳೆಯಲು ಬಿಟ್ಟರೆ, ಮುಂದೆ ನಮಗೆ ತೊಂದರೆಯಾಗಬಹುದು ಎನ್ನುವ ದುರಾಲೋಚನೆಯಿಂದ ನಾಯಕರನ್ನು ತುಳಿಯುತ್ತ ಬಂದರು. ಇದರಿಂದಾಗಿ ಪಕ್ಷದಲ್ಲಿ 2ನೇ ಹಂತದ ನಾಯಕರೆನ್ನುವವರೇ ಇಲ್ಲ, ಇರುವ ಕೆಲವೇ ನಾಯಕರು ಈ ಬಾರಿಯ ಚುನಾವಣೆಯಲ್ಲಿಯೂ ಅಷ್ಟೊಂದು ಸಕ್ರಿಯವಾಗಿ ತೊಡಗಿಕೊಳ್ಳದ್ದರಿಂದ ಪಕ್ಷ ಹೀನಾಯವಾಗಿ ಸೋಲುಂಡಿದೆ.
ಯಾರ ಮಾತೂ ಕೇಳುತ್ತಿರಲಿಲ್ಲವಂತೆ: ಅದರಲ್ಲಿಯೂ ಜಿಲ್ಲೆಯ ಓರ್ವ ಶಾಸಕರು ತಮ್ಮ ಅಧಿಕಾರವಧಿಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹೇಳಿದ ಯಾವೊಂದು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸದೇ, ಹೇಳಲು ಬಂದವರಿಗೆ ಅಪಹಾಸ್ಯ ಮಾಡಿ ಮಾತನಾಡುವುದು, ಅವರೇ ನಂಬಿಕೊಂಡ ಕೆಲವೇ ಹಿಂಬಾಲಕರು (ಅವರಿಂದ ಒಂದೂ ಮತ ಬರದೇ ಇರುವಂಥವರು, ಯಾವುದೇ ಸಣ್ಣ ಚುನಾವಣೆಯಲ್ಲಿಯೂ ಸ್ಪರ್ಧಿಸಿದವರು) ಅವರು ಹೇಳಿದ್ದನ್ನೇ ಕೇಳಿಕೊಂಡು ಕುಳಿತದ್ದು, ಮುಖ್ಯವಾಗಿ ಸರ್ಕಾರಿ ನೌಕರರ ವಿಷಯದಲ್ಲಿ ನಡೆದುಕೊಂಡ ರೀತಿ. ಒಟ್ಟಿನಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಸೋಲಿಗೆ, ಅವರ ವೇ ಆಫ್ ಟಾಕಿಂಗ್.. ವೇ ಆಫ್... ಅಪ್ರೋಚ್ ಕಾರಣವಾಗಿತ್ತು. ನಾವೆಲ್ಲಾ ದಶಕಗಳ ಕಾಲ ಹಳ್ಳಿ ಹಳ್ಳಿ ಸುತ್ತಿ ಪಕ್ಷವನ್ನು ಕಟ್ಟಿದ್ದೆವು. ಪಕ್ಷ ಅಧಿಕಾರಕ್ಕೆ ಬಂದಾಗ ನಮ್ಮನ್ನೆಲ್ಲಾ ಕಡೆಗಣಿಸಿದರೂ ಈಗ ತಾವೂ ಸೋತು, ಪಕ್ಷ ಅಧಿಕಾರದಿಂದ ದೂರ ಉಳಿಯುವಂತೆ ಮಾಡಿದರು ಎಂದು ಬಿಜೆಪಿ ಕೆಲ ಪ್ರಮುಖ ನಾಯಕರು 'ಕನ್ನಡಪ್ರಭ'ಕ್ಕೆ ತಿಳಿಸಿದರು.
ತಮ್ಮ ಬೆನ್ನು ತಾವೇ ತಟ್ಟಿಕೊಂಡರು: ನಾವು ಅಭಿವೃದ್ಧಿ ಪರವಾಗಿದ್ದೇವೆ. ಸಾಕಷ್ಟು ಅನುದಾನ ತಂದಿದ್ದೇವೆ. ಜನತೆ ಅಭಿವೃದ್ಧಿ ಪರವಾಗಿದ್ದಾರೆ. ಜಿಲ್ಲೆಯ 4 ಸ್ಥಾನಗಳಲ್ಲಿಯೂ ಮತ್ತೆ ಬಿಜೆಪಿ ಗೆಲವು ಸಾಧಿಸಲಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಇವರು ಎಷ್ಟೇ ಅಭಿವೃದ್ಧಿ ಕಾರ್ಯಮಾಡಿದ್ದರೂ ಅದನ್ನು ಸಮರ್ಪಕವಾಗಿ ಜನತೆಗೆ ಮುಟ್ಟುವಲ್ಲಿ ಕಾರ್ಯಕರ್ತರ ಪಾತ್ರವೇ ಪ್ರಮುಖವಾಗಿರುತ್ತದೆ. ಅದನ್ನು ಬೆಳೆಸಿಕೊಳ್ಳುವಲ್ಲಿ ಬಿಜೆಪಿಯ ಸಂಪೂರ್ಣ ಎಡವಿದ್ದೇ ಸೋಲಿಗೆ ಕಾರಣ, ಚುನಾವಣೆ ಘೋಷಣೆಯಾಗುತ್ತಿದ್ದಂತೆ ನಾಯಕರುಗಳೇ ನಿಮ್ಮ ವರ್ತನೆ ಬದಲಿಸಿಕೊಳ್ಳಿರಿ ಎಂದು ಕಾರ್ಯಕರ್ತರು ಗೋಗರೆದರೂ, ನಾಯಕರು ಮಾತ್ರ ತಮ್ಮ ಎಂದಿನ ಶೈಲಿಯಲ್ಲಿದ್ದದ್ದೇ ಪಕ್ಷ ನೆಲಕಚ್ಚಲು ಕಾರಣವಾಯಿತು ಎಂದು ಅವರ ಆಪ್ತರೇ ಇಂದು ಹೇಳಿಕೊಂಡು ತಿರುಗುತ್ತಿರುವುದು ವಿಶೇಷವಾಗಿದೆ.
ಅವರ ಸಮುದಾಯಗಳೇ ಬೆಂಬಲಿಸಲಿಲ್ಲ: ಗದಗ ಜಿಲ್ಲೆಯಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ, ಅದರಲ್ಲಿಯೂ ಪ್ರಮುಖ ಒಳಪಂಗಡವಾದ ಪಂಚಮಸಾಲಿ ಸಮುದಾಯದ ಮತಗಳೇ ನಿರ್ಣಾಯಕ, 2008 ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ 3 ಶಾಸಕರು ಪಂಚಮಸಾಲಿ ಸಮಾಜದವರು, ಈ ಬಾರಿ ಯಾಕೆ ಪಂಚಮಸಾಲಿ ಸಮುದಾಯ ಅವರ ಸಮಾಜದ ನಾಯಕರು ಯಾಕೆ ಬೆಂಬಲಿಸಲಿಲ್ಲ ಎನ್ನುವ ಚರ್ಚೆ ಜಿಲ್ಲಾದ್ಯಂತ ಜೋರಾಗಿ ನಡೆಯುತ್ತಿದೆ. ಇದಕ್ಕೆ ಸಮುದಾಯದ ಮುಖಂಡರು ಹೇಳುವ ಮಾತು, ಇವರು ಅಧಿಕಾರದಲ್ಲಿದ್ದಾಗ ನಡೆದುಕೊಂಡ ರೀತಿ, ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೇ, ಅವರ ಸಮುದಾಯ ಅವರನ್ನು ಕೈ ಬಿಡಲು ಕಾರಣವಾಗಿದೆ ಎನ್ನುತ್ತಾರೆ ಆ ಸಮಾಜದ ಹಿರಿಯರು.
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

