ನೂತನ ಶಾಸಕರಿಗೆ ನೂರೆಂಟು ಸವಾಲು
ಕನ್ನಡಪ್ರಭ ವಾರ್ತೆ, ಗದಗ, ಮೇ 10
ಜಿಲ್ಲೆಯ ನೂತನ ಶಾಸಕರಿಗೆ ನೂರೆಂಟು ಸಮಸ್ಯೆಗಳು ಕಾಯುತ್ತಿದ್ದು, ಹೊಸ ಶಾಸಕರನ್ನು ಸ್ವಾಗತಿಸಲು ಸಮಸ್ಯೆಗಳ ಸರಮಾಲೆಯೇ ಸಿದ್ಧವಾಗಿದೆ. ಅವುಗಳಲ್ಲಿ ಕೆಲವು ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದರೆ, ಮತ್ತೆ ಕೆಲವು ಸಹಜ ಸಮಸ್ಯೆಗಳೆಂದರೂ ಅವುಗಳನ್ನು ಇಂದಿಗೂ ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ಹೊಸ ಶಾಸಕರ ಮೇಲೆ ಹೊಸ ಭರವಸೆಯನ್ನು ಜಿಲ್ಲೆಯ ಮತದಾರರ ಹೊಂದಿದ್ದು, ಅದನ್ನು ನಿಭಾಯಿಸಲು ಶಾಸಕರು ಸನ್ನದ್ಧರಾಗಬೇಕಿದೆ.
ಗದಗ ಭೌಗೋಳಿಕ ಅತ್ಯಂತ ಸಣ್ಣ ಜಿಲ್ಲೆ. ಸಂಪೂರ್ಣ ಕೃಷಿಯನ್ನೇ ಆರ್ಥಿಕ ಹಿನ್ನೆಲೆಯನ್ನಾಗಿದೆ. ಹಲವು ದಶಕಗಳಿಂದ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅಂದುಕೊಂಡಷ್ಟು ಪ್ರಾಮುಖ್ಯತೆ ಸಿಕ್ಕಿಲ್ಲ. ಕಳಸಾ-ಬಂಡೂರಿ ನಾಲಾ ಜೋಡಣೆ ವಿಷಯದಲ್ಲಿ ಗೋವಾ ಸರ್ಕಾರ ತೆಗೆದಿರುವ ಕ್ಯಾತೆಯಿಂದ ಈ ಹಿಂದೆ ಅಧಿಕಾರದಲ್ಲಿ ಬಿಜೆಪಿ ಸರ್ಕಾರ ಕಣಕುಂಬಿ ಬಳಿ ಪ್ರಾರಂಭಿಸಿರುವ ಯೋಜನೆಗೆ ಅಲ್ಪ ಹಿನ್ನೆಡೆಯಾಗಿದೆ. ಈಗ ಕೇಂದ್ರದಲ್ಲಿಯೂ ಕಾಂಗ್ರೆಸ್ ನೇತೃತ್ವದ ಸರ್ಕಾರವಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಹಿಂದೆ ಭಾರೀ ನೀರಾವರಿ ಸಚಿವರಾಗಿದ್ದ ಎಚ್.ಕೆ. ಪಾಟೀಲ ಮತ್ತೆ ನೂತನ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ತಮ್ಮೆಲ್ಲಾ ಪ್ರಭಾವ ಬಳಕೆ ಮಾಡಿಕೊಂಡು ಈ ಯೋಜನೆಯನ್ನು ಪೂರ್ಣಗೊಳಿಸಬೇಕಿದೆ. ಇನ್ನು ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರು ಒಕ್ಕೂರಲಿನ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.
ಕುಡಿವ ನೀರು: ಗದಗ, ಬೆಟಗೇರಿ ಅವಳಿನಗರ ಸೇರಿದಂತೆ ಜಿಲ್ಲಾದ್ಯಂತ ಇಂದು ಕುಡಿವ ನೀರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಜಿಲ್ಲೆಯ 106 ಗ್ರಾ.ಪಂ.ಗಳಲ್ಲಿ 84 ಗ್ರಾ.ಪಂ.ಗಳ 147 ಗ್ರಾಮಗಳು ಕುಡಿವ ನೀರಿಗಾಗಿ ಆಶ್ರಯಿಸಿರುವುದು ಕೊಳವೆ ಬಾವಿಗಳನ್ನು, ಈಗಾಗಲೇ ವಿಶ್ವಸಂಸ್ಥೆ ಹಾಗೂ ಹಲವು ತನಿಖಾ ಸಂಸ್ಥೆಗಳು ಭೂಮಿಯ ಅತ್ಯಂತ ಆಳದಿಂದ ತೆಗೆಯುತ್ತಿರುವ ರೀತಿಯಲ್ಲಿ ಅತಿಯಾದ ಖನಿಜಾಂಶಗಳು ಪತ್ತೆಯಾಗುತ್ತಿದೆ. ಸಾಧ್ಯವಾದಷ್ಟು ಸರ್ಫೇಸ್ ವಾಟರ್ ಕುಡಿಯಲು ಯೋಗ್ಯ ಎನ್ನುವ ವರದಿ ನೀಡಿದ್ದು, ಆ ನಿಟ್ಟಿನಲ್ಲಿ ಬೃಹತ್ ಕೆರೆಗಳ ನಿರ್ಮಾಣ ಕಾರ್ಯವಾಗಬೇಕಿದೆ. ಪ್ರಮುಖ ಪಟ್ಟಣಗಳು ಒಂದೆಡೆ ತುಂಗಭದ್ರಾ ಇನ್ನೊಂದೆಡೆ ಮಲಪ್ರಭಾ ನದಿಯನ್ನು ಆಶ್ರಯಿಸಿವೆ. ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಹನಿ ನೀರಿಗೂ ತತ್ವಾರ ಉಂಟಾಗುತ್ತಿದ್ದು, ಮಳೆಗಾಲದಲ್ಲಿ ನದಿಯಲ್ಲಿ ಲಭ್ಯವಿರುವ ನೀರನ್ನು ಬೇಸಿಗೆಗಾಗಿ ಸಂಗ್ರಹಿಸಿಟ್ಟಿಕೊಳ್ಳುವ ಗಂಭೀರ ಚಿಂತನೆ ನಡೆಯಬೇಕಿದೆ. ಗದಗ, ಬೆಟಗೇರಿ ಅವಳಿ ನಗರದಲ್ಲಿ ಸದ್ಯ ಪ್ರತಿ ತಿಂಗಳಿಗೊಮ್ಮೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಹಿಂದಿನ ಸರ್ಕಾರ 2ನೇ ಹಂತದ ಕುಡಿವ ನೀರಿನ ಯೋಜನೆಗೆ ಚಾಲನೆ ನೀಡಿದ್ದು ಆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕಿದೆ. ಬೆಟಗೇರಿ ಭಾಗದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣವಾಗಬೇಕು ಎನ್ನುವುದು ಅಲ್ಲಿನ ಜನರ ಬಹು ದಿನದ ಬೇಡಿಕೆಯಾಗಿದ್ದು. ಅದು ಶೀಘ್ರವೇ ಅನುಷ್ಠಾನವಾಗಬೇಕಿದೆ. ರೋಣ, ಗಜೇಂದ್ರಗಡ, ನರೇಗಲ್ಲ, ಮುಳಗುಂದ, ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ಪಟ್ಟಣಗಳಲ್ಲಿ ಶಾಶ್ವತವಾದ ಕುಡಿವ ನೀರಿನ ಯೋಜನೆಗಳ ಅನುಷ್ಠಾನ ಅಗತ್ಯವಾಗಿದೆ.
ಎಲ್ಲರೂ ಅನುಭವಸ್ಥರೇ
ಜಿಲ್ಲೆಯಿಂದ ಆಯ್ಕೆಯಾದ ಶಾಸಕರಲ್ಲಿ ಮೂವರು ಈಗಾಗಲೇ ಜಿಲ್ಲೆಯನ್ನು ಓರ್ವ ಚುನಾಯಿತ ಪ್ರತಿನಿಧಿಯಾಗಿ ಸರ್ಕಾರದಲ್ಲಿ ಪ್ರತಿನಿಧಿಸಿದವರೇ. ಹಾಗಾಗಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅವರಿಗೆ ಹೆಚ್ಚಿನ ಜ್ಞಾನವೂ ಇದೆ. ಕಳೆದ 9 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಿಂದ ದೂರ ಉಳಿದಿದ್ದು, ಬಿಜೆಪಿ ಸರ್ಕಾರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಹೊರತುಪಡಿಸಿ, ಜಿಲ್ಲೆಗೆ ಮತ್ತಷ್ಟು ಹೊಸ ಯೋಜನೆಗಳನ್ನು ತರಬೇಕಿದೆ. ಶಾಸಕ ಬಿ.ಆರ್. ಯಾವಗಲ್ ನರಗುಂದ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುತ್ತಿರುವುದು 5ನೇ ಬಾರಿಗೆ, ಶಾಸಕ ಜಿ.ಎಸ್. ಪಾಟೀಲ ರೋಣ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುತ್ತಿರುವುದು 3ನೇ ಬಾರಿಗೆ, ಇನ್ನು ಎಚ್.ಕೆ. ಪಾಟೀಲ ವಿಧಾನಸಭೆ ಮೊದಲ ಪ್ರವೇಶವಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇನ್ನು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತ್ರ ಮೊದಲ ಬಾರಿಗೆ ಶಾಸಕರಾಗಿದ್ದರೂ, ಜನರ ಸಮಸ್ಯೆಗಳ ಬಗ್ಗೆ ತಿಳಿವಳಿಕೆ ಇದೆ. ಇದರಿಂದಾಗಿ ಜಿಲ್ಲೆಯ ಜನತೆ ಇವರ ಮೇಲೆ ಅತ್ಯಂತ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಈಗ ನಾಯಕರ ಮೇಲಿದೆ.
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

