ಶರಣರು ಮೌಲ್ಯಾದರ್ಶ ಎತ್ತಿ ಹಿಡಿದರು
ಕನ್ನಡಪ್ರಭ ವಾರ್ತೆ, ಗದಗ, ಮೇ 10
12ನೇ ಶತಮಾನದಲ್ಲಿ ಶರಣರು ವೈಚಾರಿಕ ಕ್ರಾಂತಿಯಲ್ಲಿ ಮಹಿಳಾ ಮೌಲ್ಯಾದರ್ಶಗಳನ್ನು ಎತ್ತಿ ಹಿಡಿದು ಜ್ಞಾನ ಶಕ್ತಿಗೆ ಪ್ರೇರಕರಾಗಿ ಕಾರ್ಯನಿರ್ವಹಿಸಿದರು ಎಂದು ಕೆಎಲ್ಇ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕಿ ಪ್ರೊ. ಬಿ.ಎನ್. ತಾರಾ ಹೇಳಿದರು.
ಈಚೆಗೆ ಅವರು ತಾಪಂ ಆವರಣದಲ್ಲಿರುವ ಗದಗ ಜಿಲ್ಲಾ ಕಸಾಪ ಕಚೇರಿಯಲ್ಲಿ ಜರುಗಿದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ವಚನಕಾರರ ದೃಷ್ಠಿಯಲ್ಲಿ ಮಹಿಳೆ ವಿಷಯ ಕುರಿತು ಉಪನ್ಯಾಸ ನೀಡಿದರು. 12ನೇ ಶತಮಾನದಲ್ಲಿ ಮಹಿಳೆಯರಿಗೆ ಪುರುಷ ಸಮಾನ ಹಕ್ಕು ಗೌರವ ನೀಡಿ ಮಾನವ ಜೀವನದ ಮೌಲ್ಯಗಳನ್ನು ನಿಷ್ಕರ್ಷೆಗೊಳಪಡಿಸಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು.
ಮಾನವ ಶರೀರದಲ್ಲಿ ಸುಳಿವ ಆತ್ಮ ಗಂಡು ಅಲ್ಲ ಹೆಣ್ಣು ಅಲ್ಲ ಎಂದು ಸಾರಿದರು. ಹಾಗಾಗಿ 12ನೇ ಶತಮಾನವು ವೈವಿಧ್ಯತೆ, ವೈಶಿಷ್ಟ್ಯತೆ ಹೊಂದಿದ ಕಾಲ. ಬಸವಣ್ಣ, ಅಲ್ಲಪ್ರಭು, ಜೇಡರದಾಸಿಮಯ್ಯ, ಡೋಹರಕ್ಕಯ್ಯ, ಮಾದಾರ ಚನ್ನಯ್ಯ, ಚನ್ನಬಸವಣ್ಣ, ಮೋಳಿಗೆಮಾರಯ್ಯ ಮುಂತಾದವರ ಸ್ಪೂರ್ತಿಯಿಂದ ಮಹಿಳೆ ಸಮಾನವಕಾಶ ಪಡೆದು ಅನುಭವ ಮಂಟಪವೆಂಬ ಚಿಂತನಾಗಾರದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ನವ ಸಮಾಜಕ್ಕೆ ತಳಹದಿ ಹಾಕಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, 12ನೇ ಶತಮಾನದ ಕಾಲ ಮೌಲಿಕ ಕ್ರಾಂತಿಯನ್ನೇ ಉಂಟುಮಾಡಿದೆ. ಅಕ್ಕಮಹಾದೇವಿ, ಮೋಳಿಗೆ ಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ, ಅಕ್ಕನಾಗಮ್ಮ, ನಿಜದೇವಿ, ಸತ್ಯಕ್ಕ, ಸಂಕವ್ವೆ, ಬೀರಮ್ಮ, ಸೋಮವ್ವೆ, ಸುಗ್ಗತಿ, ದುಗ್ಗಲೆ, ಮುಕ್ತಾಯಕ್ಕನಂತಹ ವಚನಗಾರ್ತಿಯರು ತಮ್ಮ ವಚನಗಳ ಮೂಲಕ ಸಾಮಾಜಿಕ ಕಟ್ಟಳೆ, ಗೊಡ್ಡು ಸಂಪ್ರದಾಯಗಳ ವಿರುದ್ಧ ಧ್ವನಿ ಎತ್ತಿದರು. ಅಲ್ಲಿ ಭಕ್ತಿಯ ಪರಾಕಾಷ್ಠೆ, ಕಾಯಕನಿಷ್ಠೆ, ಆತ್ಮೋನ್ನತಿ ಇವುಗಳ ಜತೆಗೆ ಸಮಾಜಕ್ಕೆ ಸವಾಲೆಸೆಯುವ ಮಟ್ಟಕ್ಕೆ ದೃಢ ನೆಲೆಗಟ್ಟು ಪಡೆಯುವಂತಾಯಿತು ಎಂದರು. ಕಸಾಪ ಸಲಹಾ ಮಂಡಳಿಯ ಸದಸ್ಯ ಪ್ರಾ. ಕೆ.ಎಚ್. ಬೇಲೂರ, ಬಿ.ಎಸ್. ಹಿಂಡಿ, ಎಸ್.ಎನ್. ನದಾಫ ಪ್ರಾ. ಆರ್.ಜಿ. ಚಿಕ್ಕಮಠ, ಪ್ರೊ. ಅಶೋಕ ಸಾವಂತ, ಕೆ.ಕೆ. ಹೂಗಾರ, ಪ್ರೊ. ರಮೇಶ ಸಜ್ಜಗಾರ, ಎಸ್.ಎಫ್. ಹಡಪದ, ಕಮತದ, ಆನಂದರಬಾವಿ, ಮಹಾಂತೇಶ ಮದ್ನೂರ, ಯಲ್ಲಪ್ಪ ಗುಳೇದಗುಡ್ಡ ಮುಂತಾದವರು ಸಭೆಯಲ್ಲಿದ್ದರು. ತಾಲೂಕು ಕಸಾಪ ಸದಸ್ಯ ಪ್ರೊ. ಆರ್.ಜಿ.ಚಿಕ್ಕಮಠ ಸ್ವಾಗತಿಸಿದರು. ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಶರಣು ಗೋಗೇರಿ ನಿರೂಪಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ಎಸ್. ಯತ್ನಟ್ಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

