ಗದಗ

ನರೇಗಲ್ಲ ಜನತೆಗೆ 'ಆಧಾರ್‌' ಇಲ್ಲ

Published On :

ಕನ್ನಡಪ್ರಭ ವಾರ್ತೆ, ನರೇಗಲ್ಲ, ಮೇ 14
ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬನನ್ನೂ, ಪ್ರತಿ ಕುಟುಂಬವನ್ನೂ ಗುರುತಿಸಲು ಭಾರತ ಸರ್ಕಾರ ಆಧಾರ್ ಎಂಬ ಯೋಜನೆಯನ್ನು ದೇಶಾದ್ಯಂತ ಜಾರಿ ಮಾಡಿದೆ. ಆದರೆ, ಈ ಯೋಜನೆ ರೋಣ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ಮಾತ್ರ ಜಾರಿಯಾಗಿಲ್ಲ. ಇಲ್ಲಿನ ಯಾವ ಕುಟುಂಬಕ್ಕೂ ಈವರೆಗೂ ಆಧಾರ್ ಕಾರ್ಡ್ ದೊರೆತಿಲ್ಲ.
ಕೇಂದ್ರ ಸರ್ಕಾರ ಪ್ರತಿಯೊಬ್ಬ ಭಾರತೀಯನಿಗೂ 16 ಅಂಕಿಗಳುಳ್ಳ ಗುರುತಿನ-ಪತ್ರವನ್ನು ನೀಡುವ ಮಹತ್ತರ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯ ಪ್ರಕಾರ ಪ್ರತಿಯೊಬ್ಬ ಭಾರತೀಯನ ಹತ್ತು ಬೆರಳುಗಳ ಪ್ರಿಂಟ್ ಹಾಗೂ ಕಣ್ಣಿನ ಸ್ಕ್ಯಾನ್ ಮಾಡಿ, ಈ ಆಧಾರ್ ಕಾರ್ಡ್‌ನ್ನು ನೀಡಲಾಗುತ್ತದೆ. ಈ ಯೋಜನೆಯ ಹೆಸರೇ ಆಧಾರ್.  
ಈ ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ನಿತ್ಯ ಜೀವನದಲ್ಲಿ ತುಂಬಾ ಉಪಯೋಗವಾಗುತ್ತದೆ. ಪಡಿತರ ಚೀಟಿ, ಪಾಸ್ ಪೋರ್ಟ್, ರಾಷ್ಟ್ರೀಯ ಗ್ರಾಮೀಣ ಉದ್ಯೋಗ, ಡ್ರೈವಿಂಗ್ ಲೈಸೆನ್ಸ್, ತೆರಿಗೆ ಕಟ್ಟುವಾಗ, ಬ್ಯಾಂಕ್ ಖಾತೆ ತೆರೆಯುವಾಗ ಈ ಆಧಾರ ಕಾರ್ಡ್‌ನ್ನು ಕಡ್ಡಾಯವಾಗಿ ಕೇಳುತ್ತಾರೆ. ಅಲ್ಲದೆ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಶಿಷ್ಯವೇತನವು ಸಂಬಂಧಿಸಿದ ಇಲಾಖೆಯಿಂದ ಬರಬೇಕಾದರೆ ಈ ಆಧಾರ್ ಕಾರ್ಡಿನ ಅವಶ್ಯಕತೆಯಿದೆ. ಗ್ಯಾಸ್ ಸಿಲಿಂಡರ್ ಪಡೆಯುವಲ್ಲಿ ಆಧಾರ್ ಕಾರ್ಡ್ ಅವಶ್ಯ. ಇದನ್ನು ಗಮನಿಸಿದರೆ ಇದರ ಅವಶ್ಯಕತೆ ಎಷ್ಟಿದೆ ಎಂದು ತಿಳಿಯುತ್ತದೆ.
ಆಧಾರ ಕಾರ್ಡ್ ಅವಶ್ಯ: ಯಾವುದೇ ಕಚೇರಿಗೆ ಹೋಗಿ ಏನಾದರೂ ಸರ್ಕಾರಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದರೆ, ಆ ಅರ್ಜಿಗೆ ಆಧಾರ್ ಕಾರ್ಡ್‌ನ ಝೆರಾಕ್ಸ್ ಪ್ರತಿ ಹಚ್ಚಲು ಹೇಳುತ್ತಾರೆ. ಇದನ್ನು ಪಡೆದಿರುವ ಎಲ್ಲರೂ ಆಧಾರ ಕಾರ್ಡ್ ಝೆರಾಕ್ಸ್‌ನ ಪ್ರತಿ ಹಚ್ಚುತ್ತಾರೆ. ಆದರೆ, ನರೇಗಲ್ಲನ ಜನರು ಆಧಾರ್ ಕಾರ್ಡ್ ಇಲ್ಲದೆ ಗೋಳಾಡುವಂತಾಗಿದೆ. ರೋಣ ತಾಲೂಕಿನ ನರೇಗಲ್ಲನ ನಾಗರಿಕರು ಈಗ ಆಧಾರವೇ ಇಲ್ಲದ ನಾಗರಿಕರಾಗಿದ್ದಾರೆ.
ಈ ಪಟ್ಟಣ ಮಜಿರೆ ಗ್ರಾಮಗಳಾದ ಕೋಡಿಕೊಪ್ಪ, ಕೋಚಲಾಪುರ, ತೋಟಗಂಟಿ, ಮಲ್ಲಾಪುರ ಮತ್ತು ದ್ಯಾಂಪುರ ಸೇರಿ 30-25 ಸಾವಿರದಷ್ಟು ಜನಸಂಖ್ಯೆಯನ್ನು ನರೇಗಲ್ಲ ಪಪಂ ಹೊಂದಿದೆ. ಈ ಪಪಂ ವ್ಯಾಪ್ತಿಯ ಯಾವುದೇ ಕುಟುಂಬದಲ್ಲಿಯೂ ಆಧಾರ ಕಾರ್ಡ್ ಇಲ್ಲ. ಇದರ ಬಗ್ಗೆ ಯೋಚನೆ ಮಾಡಿ ಜನತೆಗೆ ಅನುಕೂಲ ಮಾಡಿಕೊಡಬೇಕಾದ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮಾತ್ರ ಈ ಯಾವುದರ ಬಗ್ಗೆಯೂ ಕಿಂಚಿತ್ತೂ ಯೋಚನೆಯಿಲ್ಲ. ಏಕೆಂದರೆ ಅವರಾರೂ ಇಲ್ಲಿನ ಸ್ಥಳಿಕರಲ್ಲ. ಬೇರೆ ಬೇರೆ ಊರುಗಳಲ್ಲಿರುವ ಅವರು ಅಲ್ಲಿ ತಮ್ಮ ಆಧಾರ್ ಕಾರ್ಡ್‌ನ್ನು ಪಡೆದುಕೊಂಡು ಹಾಯಾಗಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು. ಇನ್ನು ನರೇಗಲ್ಲನ ಜನತೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವವರಲ್ಲ.  ಸಾರ್ವಜನಿಕರೇ ಕೇಳಿಲ್ಲವೆಂದ ಮೇಲೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕೆಂದು ಪಪಂನವರೂ ಹಾಯಾಗಿದ್ದಾರೆ.
ಅಧಿಕಾರಿಗಳಿಂದ ನಿರ್ಲಕ್ಷ್ಯದ ಉತ್ತರ: ಯಾರಾದರೂ ಪಪಂ ಅಧಿಕಾರಿಗಳಿಗೆ ಆಧಾರ್ ಕಾರ್ಡ್ ಕೊಟ್ಟಿಲ್ಲ ಎಂದು ಕೇಳಿದರೆ, ಇಲ್ಲಿನ ಆಧಾರ ಕಾರ್ಡ್‌ಗಳನ್ನು ಮಾಡಲು ಅದ್ಯಾರಿಗೋ ಗುತ್ತಿಗೆ ನೀಡಿದ್ದರು. ಅವರಿಗೆ ಕಮಿಶನ್ ಕಡಿಮೆಯಾಯಿತೆಂದು ಈ ಕಾರ್ಯವನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ ಇಲ್ಲಿ ಯಾರಿಗೂ ಕಾರ್ಡ್ ಕೊಡಲು ಸಾಧ್ಯವಾಗಿಲ್ಲ. ಅವರೇ ಕೆಲಸ ಬಿಟ್ಟು ಹೋದರೆ ನಾವು ಏನು ಮಾಡೋಕೆ ಆಗುತ್ತೆ ಎನ್ನುತ್ತಾರೆ ಆ ಅಧಿಕಾರಿಗಳು. ಆದರೆ, ಅವರಿಗೆ ಸಾಧ್ಯವಾಗಿಲ್ಲವೆಂದ ಮೇಲೆ ಮತ್ತೆ ಬೇರೆಯವರಿಗೆ ಈ ಕಾರ್ಯವನ್ನು ವಹಿಸಿಕೊಟ್ಟು, ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೆ ತಂದು, ಜನರಿಗೆ ಆಧಾರ ಕಾರ್ಡ್ ನೀಡುವ ವ್ಯವಸ್ಥೆಯನ್ನೇಕೆ ಮಾಡಲಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.