ಸಾಮೂಹಿಕ ವಿವಾಹದಿಂದ ನೆಮ್ಮದಿ
ಶಿರಹಟ್ಟಿ: ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆಯಾಗಿ ನೆಮ್ಮದಿ ಬದುಕಿಗೆ ಸಹಕಾರಿ ಎಂದು ಬೀರೇಶ್ವರ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಘಂಟಿ ಹೇಳಿದರು.
ಸೋಮವಾರ ಬಸವ ಜಯಂತಿ ಅಂಗವಾಗಿ ಬೀರೇಶ್ವರ ಸೇವಾ ಸಮಿತಿ ಹಾಗೂ ಬೀರೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ಏರ್ಪಡಿಸಿದ್ದ 7ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ವಧು-ವರರು ಆದರ್ಶ ದಂಪತಿಗಳಾಗಿ ಬಾಳಬೇಕು. ದುಶ್ಚಟಗಳಿಂದ ದೂರವಿರುವುದರ ಜತೆಗೆ ಕೌಟುಂಬಿಕ ಮೌಲ್ಯ ಕಾಪಾಡಿಕೊಳ್ಳಬೇಕು. ಅಲ್ಲದೆ ಮಿತ ಸಂತಾನ ಹೊಂದಿ ರಾಷ್ಟ್ರ, ಸಮಾಜದ ಏಳ್ಗೆಗೆ ಶ್ರಮಿಸಬೇಕೆಂದರು. ವೈ.ಎನ್. ಕರಿಗಾರ ಮಾತನಾಡಿ, ಸಮಾಜದಲ್ಲಿ ವರದಕ್ಷಿಣೆ ಪಿಡುಗು ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಬಹಳಷ್ಟು ಜನರು ಸಂಕಷ್ಟ ಅನುಭವಿಸುತ್ತಿದ್ದು, ಇಂಥವುಗಳಿಂದ ಮುಕ್ತಿ ದೊರಕಿಸಲು ಸಮಾಜದಲ್ಲಿನ ಸ್ಥಿತಿವಂತರು ಮತ್ತು ಶ್ರೀಮಂತರು ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲು ಮುಂದಾಗಬೇಕು. ಜನಸಾಮಾನ್ಯರಿಗೆ ಮದುವೆ ಎಂಬುದು ದೊಡ್ಡ ಹೊರೆ. ಮದುವೆಯೊಂದಕ್ಕೆ ಮಾಡಿದ ಸಾಲವು, ಮಕ್ಕಳಾಗಿ ಅವರು ದೊಡ್ಡವರಾದರೂ ಇರುತ್ತದೆ. ಸರಳ, ಸಾಮೂಹಿಕ ವಿವಾಹವು ಇಂತಹ ಸಮಸ್ಯೆಗೆ ಪರಿಹಾರವಾಗಿದೆ ಎಂದರು. ಯಾವುದೇ ವ್ಯಕ್ತಿಗೆ ಆಸ್ತಿ, ಅಂತಸ್ತು ಹಾಗೂ ಸಂಪತ್ತು ಶಾಶ್ವತವಲ್ಲ. ಆದರೆ ವ್ಯಕ್ತಿಯ ಜೀವನ ಹಾಗೂ ಅವನ ಕಾರ್ಯಗಳು ಶಾಶ್ವತ. ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಗಳಿಕೆಯ ಅಲ್ಪ ಆದಾಯವನ್ನಾದರೂ ಸಮಾಜದ ಒಳ್ಳೆಯ ಕೆಲಸ ಕಾರ್ಯಗಳಿಗೆ ವಿನಿಯೋಗ ಮಾಡಬೇಕು ಎಂದರು. ಶರಣರ ವಚನದಂತೆ ಅಂಗ ಹಾಗೂ ಲಿಂಗದ ಅವಿನಾಭಾವ ಸಂಬಂಧದಂತೆ ಸತಿ-ಪತಿ ಜೀವನದ ಕೊನೆಯವರೆಗೂ ಒಂದಾಗಿ ಬಾಳಬೇಕು. ನೂತನ ವಧು-ವರರ ಬದುಕು ಬಂಗಾರವಾಗಲಿ ಎಂದು ಹರಸಿದರು. ಪಪಂ ಸದಸ್ಯ ಎಚ್.ಡಿ. ಮಾಗಡಿ, ಗೂಳಪ್ಪ ಕರಿಗಾರ, ಸಂತೋಷ ಕುರಿ, ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಡಂಬಳ, ಫಕ್ಕಣ್ಣ ಪೂಜಾರ, ಪರಸಪ್ಪ ಪೂಜಾರ, ದೇವಪ್ಪ ಬಟ್ಟೂರ, ಫಕೀರೇಶ ಕುಳಗೇರಿ, ಕಾಶಪ್ಪ ಗೂಳಪ್ಪನವರ, ಹನುಮಂತ ಕುಳಗೇರಿ, ಜಗದೀಶ ಸ್ವಾಮಿ, ಶರಣಪ್ಪ ಸ್ವಾಮಿ, ನಿಂಗಪ್ಪ ಕರಿಗಾರ, ಬಡ್ಡೆಪ್ಪ ಬಟ್ಟೂರ, ಶಿವಪ್ಪ ಕರಿಗಾರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

