ಜಿಲ್ಲೆಗೆ ಸಚಿವರ್ಯಾರು?
ಕನ್ನಡಪ್ರಭ ವಾರ್ತೆ, ಗದಗ, ಮೇ 15
ಜಿಲ್ಲೆಯ 4 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದ್ದು, ಇದರಲ್ಲಿ ಸಚಿವರ್ಯಾರು ಎಂಬ ಪ್ರಶ್ನೆಗೆ ಹಲವು ಜನ ತಮ್ಮದೆಯಾದ ಲೆಕ್ಕಾಚಾರದಲ್ಲಿದ್ದಾರೆ. ಈ ಬಾರಿ ಜಿಲ್ಲೆಯ ರೋಣ ಕ್ಷೇತ್ರದಿಂದ ಗೆದ್ದಿರುವ ಜಿ.ಎಸ್. ಪಾಟೀಲರು ರೋಣ ಕ್ಷೇತ್ರದ ಚುನಾವಣೆ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತ ಪಡೆದು ಚುನಾಯಿತರಾಗಿದ್ದಾರೆ.
ಜಿ.ಎಸ್. ಪಾಟೀಲರು ಕಾಂಗ್ರೆಸ್ನಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೇ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಗೆ ಶ್ರಮಿಸಿದ್ದಾರೆ. ಜಿ.ಎಸ್. ಪಾಟೀಲರ ಸಹೋದರ ಬಿ.ಎಸ್. ಪಾಟೀಲರು ಈ ಹಿಂದೆ ಮುಖ್ಯಮಂತ್ರಿ ಕಾರ್ಯದರ್ಶಿಯಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು. ಮತ್ತೊಬ್ಬ ಸಹೋದರ ಆರ್.ಎಸ್. ಪಾಟೀಲರು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರಾಗಿ ಈ ಭಾಗದಲ್ಲಿ ಪ್ರಭಾವ ಹೊಂದಿದ್ದಾರೆ.
ಜತೆಗೆ ಮತ್ತೊಬ್ಬ ಸಹೋದರ ಐ.ಎಸ್. ಪಾಟೀಲರು ನಿಗಮವೊಂದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜಿ.ಎಸ್. ಪಾಟೀಲರ ಕುಟುಂಬ ಕಾಂಗ್ರೆಸ್ಗೆ ನಿಷ್ಠತೆ ಮೆರೆದಿದ್ದು, ಅವರು ಈ ಬಾರಿ ಶತಾಯ-ಗತಾಯವಾಗಿ ಸಚಿವಗಿರಿ ಹಿಡಿಯಲು ದೆಹಲಿ ಮಟ್ಟದಲ್ಲಿ ಪೈಪೋಟಿ ನಡೆಸಿದ್ದಾರೆ.
ಜಿಎಸ್ಪಿ ಮೇಲಿದೆ ಸಿದ್ದು ಕೃಪೆ: ಕಾಂಗ್ರೆಸ್ ಬಹುಮತ ಗಳಿಸಿದ ನಂತರ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯ ಮೊದಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ನ 121 ಶಾಸಕರಲ್ಲಿ ಏಕೈಕ ಶಾಸಕ ಜಿ.ಎಸ್. ಪಾಟೀಲರು.
ಅಷ್ಟೇ ಅಲ್ಲದೇ ಎ.ಕೆ. ಆ್ಯಂಟನಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಹೈಕಮಾಂಡ್ ಎದುರಿನಲ್ಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಹೇಳಿರುವುದು ಸಿದ್ದರಾಮಯ್ಯನವರ ಕೃಪೆಗೆ ಜಿ.ಎಸ್. ಪಾಟೀಲರ ಮೇಲಿದೆ ಎಂಬುದು ಗಮನಾರ್ಹ ಸಂಗತಿ.
ಜಿಲ್ಲೆಯ 4 ಶಾಸಕರು ಸಚಿವರಾಗುವಲ್ಲಿ ಹೈಕಮಾಂಡ್ನಲ್ಲಿ ಪ್ರಯತ್ನ ನಡೆಸಿದ್ದಾರೆ. ಜಿ.ಎಸ್. ಪಾಟೀಲರು ಸಚಿವರಾದರೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಎಲ್ಲ ಸಮಾಜದವರ ಕೆಲಸ ಕಾರ್ಯಗಳಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಯಾಗುತ್ತೆ ಎಂದು ಎಲ್ಲರ ಅಪೇಕ್ಷೆಯಾಗಿದೆ.
ರೋಣ ಕ್ಷೇತ್ರದ ರೋಣ, ಗಜೇಂದ್ರಗಡ, ನರೇಗಲ್ಲ ಹಾಗೂ ಡಂಬಳ ಹೋಬಳಿಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎಲ್ಲ ಸಮಾಜಗಳ ಮುಖಂಡರು ಈ ಬಾರಿ ಬಹಿರಂಗವಾಗಿ ಜಿ.ಎಸ್. ಪಾಟೀಲರನ್ನು ಬೆಂಬಲಿಸಿದ್ದಾರೆ.
ಸಿದ್ದರಾಮಯ್ಯನವರ ನಿಷ್ಠತೆ, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ, ಸಹೋದರರ ಪ್ರಭಾವ ಈ ಎಲ್ಲ ಅಂಶಗಳು ಸೇರಿ ಜಿ.ಎಸ್. ಪಾಟೀಲರು ಸಚಿವರಾದಲ್ಲಿ ಆಶ್ವರ್ಯವಿಲ್ಲ. ಇದರೊಂದಿಗೆ ಎಚ್.ಕೆ. ಪಾಟೀಲ, ಬಿ.ಆರ್. ಯಾವಗಲ್ಲ, ಪ್ರಥಮ ಬಾರಿಗೆ ಶಾಸಕರಾದ ರಾಮಕೃಷ್ಣ ದೊಡ್ಡಮನಿ ವಿವಿಧ ಕೋಟಾಗಳಲ್ಲಿ ಸಚಿವಗಿರಿಗೆ ತೀವ್ರ ಲಾಬಿ ನಡೆಸಿದ್ದು, ಸಚಿವಗಿರಿಯ ಅದೃಷ್ಟ ಯಾರೆಂಬುದು ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

