ದೇವರಾಜ ಅರಸು ಮಾದರಿಯ ಆಡಳಿತ ಮರುಕಳಿಸಲಿದೆ: ದೊಡ್ಡಮನಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮೇ 16
ಸಿದ್ದರಾಮಯ್ಯನವರಿಂದ ದೇವರಾಜ ಅರಸು ಮಾದರಿಯ ಆಡಳಿತ ಮತ್ತೊಮ್ಮೆ ರಾಜ್ಯದಲ್ಲಿ ಮರುಕಳಿಸಲಿದೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 8 ತಾಸುಗಳಲ್ಲಿ 98.17 ಲಕ್ಷ ಬಿಪಿಎಲ್ ಕಾರ್ಡ್ದಾರರಿಗೆ ರು. 1 ರಂತೆ 30 ಕೆಜಿ ಅಕ್ಕಿ, 7.5 ಲಕ್ಷ ಫಲಾನುಭವಿಗಳಿಗೆ ಪ್ರತೀ ಲಿಟರ್ ಹಾಲಿಗೆ ರು. 4 ಸಹಾಯಧನ, ವಸತಿ ಯೋಜನೆಗಳ ಸಹಾಯಧನ ಏರಿಕೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಪರಿಶಿಷ್ಟ ಜಾತಿಯ 1.87 ಲಕ್ಷ ಫಲಾನುಭವಿಗಳ ರು. 349 ಕೋಟಿ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳ ಮೂಲಕ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಆಡಳಿತದ ಮಾದರಿಯನ್ನೇ ಅನುಸರಿಸಿ ಹಿಂದುಳಿದವರ ಏಳ್ಗೆಗೆ ಶ್ರಮಿಸಲಿದ್ದಾರೆ ಎಂದರು.
ಶಿರಹಟ್ಟಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಹಿರಿಯ ನಾಯಕರಾದ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್ ಅವರೊಂದಿಗೆ ಚರ್ಚಿಸಿ ಮೊದಲು ಮನೆಯಿಲ್ಲದವರಿಗೆ ಆಶ್ರಯ ಮನೆಗಳನ್ನು ನೀಡುವ ಪ್ರಯತ್ನ ಮಾಡುತ್ತೇನೆ. ಅದಕ್ಕಾಗಿ ಬೇಕಾಗುವ ಭೂಮಿಯನ್ನು ಕೊಳ್ಳಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದ ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಘಟಕ ಪ್ರಾರಂಭಿಸಲಾಗುವುದು. ಈಗಾಗಲೇ ಸ್ಥಗಿತಗೊಂಡಿರುವ ಘಟಕಗಳನ್ನು ಪರಿಶೀಲಿಸಿ ಸರಿಪಡಿಸಲಾಗುವುದು. ಜಿ.ಎಸ್. ಪಾಟೀಲರೊಂದಿಗೆ ಸೇರಿ ಮುಂಡರಗಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಶಿರಹಟ್ಟಿಯಲ್ಲಿಯೂ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು. ನಂತರ ಕ್ಷೇತ್ರದಲ್ಲಿರುವ ಆಯಾ ಇಲಾಖೆಗಳ ಸಮಸ್ಯೆಗಳ ಕುರಿತು ಚರ್ಚಿಸಿ, ಪಾರದರ್ಶಕ ಆಡಳಿತ ನಡೆಸಲಾಗುವುದು ಎಂದರು.
ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಮತದಾರರ ನಂಬಿಕೆ ಉಳಿಸಿಕೊಳ್ಳಲಾಗುವುದು. ಶಿರಹಟ್ಟಿ ಹಾಗೂ ಮುಂಡರಗಿ ಎರಡೂ ಕಡೆಗಳಲ್ಲಿ ಹೆಚ್ಚಿನ ಅಭಿವೃದ್ಧಿಯ ಅವಶ್ಯಕತೆಯಿದ್ದು, ತಮ್ಮ ಐದು ವರ್ಷಗಳ ಆಡಳಿತದ ಅವಧಿಯಲ್ಲಿ ಪ್ರಾಮಾಣಿಕವಾಗಿ ಜನ ಸೇವೆ ಮಾಡುವ ಮೂಲಕ ಶಿರಹಟ್ಟಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುದಾಗಿ ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ ಬಿಸನಳ್ಳಿ, ಪುರಸಭೆ ಸದಸ್ಯ ಬಸವರಾಜ ರಾಮೇನಹಳ್ಳಿ, ದೇವಪ್ಪ ಬಾರಕೇರ, ಈರಣ್ಣ ಉಳ್ಳಾಗಡ್ಡಿ, ಶೇಖರಾಜ ಹೊಸಮನಿ, ರಾಕೇಶ ದೊಡ್ಡಮನಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

