ಗದಗ

ಬದುಕಿಗೆ ಆಸರೆಯಾದ ಜಾಲಿಮರಗಳು

Published On :

ಕನ್ನಡಪ್ರಭ ವಾರ್ತೆ, ರೋಣ, ಮೇ 17
2 ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ಕಂಗಾಲಾದ ತಾಲೂಕಿನ ರೈತರು, ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗೆ ಪರ್ಯಾಯ ಮಾರ್ಗವಾಗಿ ಇದ್ದಿಲಿ ಬಟ್ಟಿಗೆ ಮೊರೆ ಹೋಗಿದ್ದಾರೆ. ಬರದ ಬವಣೆ ನೀಗಿಸಲು ಜಾಲಿ ಮರಗಳು ವರವಾಗಿವೆ.
ಜಾಲಿ ಮರವು ನೆರಳಿಗೆ ಯೋಗ್ಯವಲ್ಲ ಎಂಬ ಮಾತು ಇದೆ. ಮುಳ್ಳು ಬೆಳೆವ, ನೆರಳು ನೀಡದ ಜಾಲಿಮರಗಳು ಜನರ ಬದುಕಿಗೆ ಆಸರೆಯಾಗಿವೆ. ಆ ಜನರ ಜೀವನೋಪಾಯಕ್ಕೆ ಅದು ನೆರವಾಗಿದೆ.
ತಾಲೂಕಿನ ಅನೇಕ ಬಡ ರೈತರು, ಕೂಲಿ ಕಾರ್ಮಿಕರು ಉದ್ಯೋಗ ಸಿಗದೇ ಮಂಗಳೂರು, ಉಡುಪಿ, ಬೆಂಗಳೂರು, ಸುರತ್ಕಲ್, ಗೋವಾ, ಮಹಾರಾಷ್ಟ್ರದ ರತ್ನಗಿರಿ, ಮುಂಬೈ ಮುಂತಾದ ಕಡೆ ದುಡಿಯಲು ಗುಳೆ ಹೋಗಿದ್ದಾರೆ. ಆದರೆ, ಕೆಲ ರೈತರು ಇಲ್ಲಿಯೇ ಇದ್ದು ಪರ್ಯಾಯ ಉದ್ಯೋಗವಾಗಿ ಜಾಲಿ ಮರಗಳನ್ನು ಕಡಿದು ಇದ್ದಲಿ ಬಟ್ಟಿ ಹಾಕಿ ಕೈಗೆ ತುಸು ಕಾಸು ಬರುವಂತೆ ಮಾಡಿಕೊಂಡು ಜೀವನೋಪಾಯ ಮಾಡುತ್ತಿದ್ದಾರೆ.
ತಾಲೂಕಿನ ಹಿರೇಮಣ್ಣೂರು, ಮುದೇನಗುಡಿ, ಹುಲ್ಲೂರ, ಕುರಹಟ್ಟಿ, ಹುನಗುಂಡಿ, ಕೊತಬಾಳ, ಬಾಸಲಾಪುರ, ಸಂದಿಗವಾಡ, ಮಲ್ಲಾಪುರ, ಹೊನ್ನಾಪುರ, ಸವಡಿ, ಚಿಕ್ಕಮಣ್ಣೂರು, ಕೊಚಲಾಪುರ, ಮೇಲ್ಮಠ, ಅಸೂಟಿ, ಮುಗಳಿ, ತಳ್ಳಿಹಾಳ, ಹೊನ್ನಿಗನೂರು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಜನತೆಗೆ ಬದುಕಲು ಜಾಲಿಮರಗಳೇ ಆಸರೆ. ಜಾಲಿ ಕಂಟಿಗಳನ್ನು ಕಡಿದು ಹಾಕಿ ಸುಟ್ಟು ಇದ್ದಿಲು ಮಾಡಿ ನಗರ ಪ್ರದೇಶಗಳಿಗೆ ಕಳುಹಿಸಿ ಮಾರಾಟ ಮಾಡುತ್ತಾರೆ.
ಇದ್ದಿಲಿಗೆ ನಗರದಲ್ಲಿ ಬೇಡಿಕೆ: ಬರದಿಂದ ಕೃಷಿ ಚಟುವಟಿಕೆ ಸ್ಥಗಿತಕೊಂಡಾಗ ರೈತರು, ಕೂಲಿ ಕಾರ್ಮಿಕರು, ಹಳ್ಳ, ಹೊಲದ ಬುದುವು, ಉಳುಮೆ ಮಾಡದ ಪ್ರದೇಶದಲ್ಲಿ ಬೆಳೆದ ಜಾಲಿ ಮರಗಳನ್ನು ಕಡಿದು ಒಂದಡೆ ಕೂಡಿ ಹಾಕಿ ಸುಟ್ಟು ಇದ್ದಿಲನ್ನು ತೆಗೆಯುತ್ತಾರೆ. ಬಟ್ಟಿ ಹಾಕುವುದರಲ್ಲಿಯೂ ವೈಜ್ಞಾನಿಕ ಕ್ರಮ ಅನುಸರಿಸಲಾಗುತ್ತಿದೆ. ಸ್ವಲ್ಪ ವ್ಯತ್ಯಾಸವಾದರೂ ಬಟ್ಟಿಯಲ್ಲಿನ ಕಟ್ಟಿಗೆಗಳು ಸುಟ್ಟು ಕರಕಲಾಗುತ್ತವೆ. ಆದ್ದರಿಂದ ಬಲು ಜಾಗೂರುಕತೆಯಿಂದ ಬಟ್ಟಿಯನ್ನು ಹಗಲು ರಾತ್ರಿಯನ್ನದೆ ಕಾಯಬೇಕು.
ಇದ್ದಿಲು ಬಟ್ಟಿಗಳಿಗೆ ನಿತ್ಯ ಪೂಜೆ: ತಾಲೂಕಿನ ಕುರಹಟ್ಟಿ, ಹುನಗುಂಡಿ, ಸವಡಿ, ಹೊನ್ನಾಪುರ ಗ್ರಾಮದಲ್ಲಿನ ಹರನಶಿಕಾರಿ ಕುಟುಂಬದವರು ಇದ್ದಿಲು ಬಟ್ಟಿಗಳನ್ನು ಫೋಟೋ ತೆಗಿಸಿ ಮನೆಯಲ್ಲಿ ದೇವರ ಜಗುಲಿಯಲ್ಲಿಟ್ಟು ಹಾಗೂ ಗೊಡೆಗಳಿಗೆ ನೇತು ಹಾಕಿ ನಿತ್ಯ ಪೂಜೆ ಮಾಡುತ್ತಾರೆ. ವ್ಯಾಪಾರಸ್ಥರು ಇದ್ದಿಲು ಖರೀದಿಸಲು ಸ್ಥಳದಲ್ಲಿಯೇ ಬಂದು ಗಾತ್ರಕ್ಕನುಗುಣವಾಗಿ ಚೀಲವೊಂದಕ್ಕೆ ಇಂತಿಷ್ಟು ಎಂದು ನಿಗದಿಪಡಿಸಿ ಖರೀದಿಸುತ್ತಾರೆ. ಖರೀದಿಸಿ ಇದ್ದಿಲುಗಳನ್ನು ಗದಗ, ಕಾರವಾರ, ಹುಬ್ಬಳ್ಳಿ, ಬಿಜಾಪುರ, ಹೊಸಪೇಟೆ, ಗೊವಾ, ಮಂಗಳೂರು ಮುಂತಾದ ನಗರಗಳಿಗೆ ಏಜೆಂಟರ್ ಮೂಲಕ ರವಾನೆ ಮಾಡುತ್ತಾರೆ.

 ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.