ಗದಗ

ಮಾಧ್ಯಮದವರ ಮೇಲೆ ಹಲ್ಲೆ: ಮೂವರ ಬಂಧನ

Published On :

ಕನ್ನಡಪ್ರಭ ವಾರ್ತೆ, ಸವಣೂರ, ಮೇ 17
ವರದಿ ಮಾಡಲು ತೆರಳಿದ್ದ ದೃಶ್ಯ ಮಾಧ್ಯಮದ ವರದಿಗಾರ ಹಾಗೂ ಕ್ಯಾಮರಾಮನ್‌ಗಳ ಮೇಲೆ ಹಲ್ಲೆ ನಡೆಸಿದಲ್ಲದೇ ಲಕ್ಷಾಂತರ ಬೆಲೆ ಬಾಳುವ ಕ್ಯಾಮರಾಗಳನ್ನು ಜಖಂಗೊಳಿಸಿದ ಘಟನೆ ಶುಕ್ರವಾರ ಪಟ್ಟಣದ ವಡ್ಡರ ಓಣಿಯಲ್ಲಿ ಸಂಭವಿಸಿದೆ.
ಘಟನೆಗೆ ಸಂಬಂಧಿಸಿದಂತೆ ಫಕ್ಕಿರೇಶ ಬೂದಿಹಾಳ, ಚನ್ನಪ್ಪ ಬೂದಿಹಾಳ ಹಾಗೂ ಹುಲಗೆಪ್ಪ ಬೂದಿಹಾಳ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ವಡ್ಡರ ಓಣಿ ನಿವಾಸಿಗಳಾದ ಭೀಮಪ್ಪ ಗಡೇದ, ಭೀಮಪ್ಪ ಬೂದಿಹಾಳ, ಸುರೇಶ ಚೌಡಾಳ, ಅರ್ಜುನ ಬೂದಿಹಾಳ, ಶ್ರೀಕಾಂತ ಮಲ್ಲೂರ ಎಂಬುವರ ಮೇಲೆಯೂ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?: ಏಳು ತಿಂಗಳ ಗರ್ಭವತಿ ಮಂಜವ್ವ ಎಂಬುವಳನ್ನು ನಾಲ್ಕು ದಿನಗಳ ಹಿಂದೆಯಷ್ಟೇ ಮದುವೆ ಮಾಡಿಕೊಟ್ಟಿರುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಬೆಳಗ್ಗೆ 11ರ ಸುಮಾರಿಗೆ ಓಣಿಯ ಹಿರಿಯರು ದೇವಸ್ಥಾನವೊಂದರಲ್ಲಿ ಸೇರಿದ್ದರು.
ಮಹಿಳೆಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಲಕ್ಷ್ಮೇಶ್ವರದಿಂದ ಪಟ್ಟಣಕ್ಕೆ ಆಗಮಿಸಿದ್ದ ಮಹಿಳೆಯ ಹಿರಿಯರು ಈ ವಿಷಯವನ್ನು ದೃಶ್ಯ ಮಾಧ್ಯಮದವರಿಗೆ ತಿಳಿಸಿದ್ದರಲ್ಲದೇ, ಸ್ಥಳಕ್ಕೆ ಬರುವಂತೆ ವಿನಂತಿಸಿಕೊಂಡಿದ್ದರು.
ವರದಿ ಮಾಡಲು ಪಟ್ಟಣಕ್ಕೆ ಸುವರ್ಣ ನ್ಯೂಸ್ ಚಾನೆಲ್ ಸೇರಿದಂತೆ ವಿವಿಧ ಖಾಸಗಿ ವಾಹಿನಿಗಳ ವರದಿಗಾರರು, ಕ್ಯಾಮರಾಮನ್ ಸಮೇತವಾಗಿ ತೆರಳಿದ್ದರಲ್ಲದೇ, ಪೊಲೀಸ್ ಠಾಣೆಗೂ ತೆರಳಿ ಘಟನೆಯ ಸಂಪೂರ್ಣ ವಿವರ ಪಡೆದಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಆರಕ್ಷಕ ಸಿಬ್ಬಂದಿ, ಮಂಜವ್ವಳಿಗೆ ಮೋಸ ಮಾಡಿದ ಫಕ್ಕಿರೇಶ ಜೊತೆಗೆ ಮದುವೆ ಮಾಡಿಸುವುದಾಗಿ ಹೇಳಿ ಸಮಾಜದ ಹಿರಿಯರು ಗರ್ಭವತಿಯನ್ನು ತಮ್ಮೊಟ್ಟಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.
ಈ ಮಾಹಿತಿಯನ್ನಾಧರಿಸಿ ಘಟನಾ ಸ್ಥಳಕ್ಕೆ ತೆರಳಿದ್ದ ದೃಶ್ಯ ಮಾಧ್ಯಮದವರನ್ನು ನೋಡುತ್ತಿದಂತೆಯೇ ಆಕ್ರೋಶಗೊಂಡ ಅಲ್ಲಿ ನೆರೆದಿದ್ದ ಜನರು, ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಸುಮಾರು 1.50 ಲಕ್ಷ ಮೌಲ್ಯದ ಕ್ಯಾಮರಾ ಜಖಂಗೊಳಿಸಿದ್ದಾರೆ ಎಂದು ಖಾಸಗಿ ವಾಹಿನಿ ವರದಿಗಾರ ಶಾಂತಕುಮಾರ ಸವಣೂರು ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.