ಸಮರ್ಪಕ ಕುಡಿಯುವ ನೀರು ಪೂರೈಸಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 17
ಪಟ್ಟಣದ 3ನೇ ವಾರ್ಡಿನ ಶಿವಾಜಿ ಪೇಟೆ ಬಳಿಯ ವಾಜಪೇಯಿ ಬಡಾವಣೆ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಬಡಾವಣೆ ನಿವಾಸಿಗಳು ಸಿಪಿಐ (ಎಂ) ಸಂಘಟನೆ ನೇತೃತ್ವದಲ್ಲಿ ಪುರಸಭೆಯ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪುರಸಭಾ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ವಾಜಪೇಯಿ ಬಡಾವಣೆಯಲ್ಲಿ ಕಳೆದೆರೆಡು ತಿಂಗಳಿಂದ ನೀರಿಗಾಗಿ ಹಾಹಾಕಾರ ಎದ್ದಿದೆ. ಇದರಿಂದ ಜನತೆಯು ದಿನದ ದುಡಿಮೆ ಬಿಟ್ಟು ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ಬಂದೊದಗಿದೆ. ಪುರಸಭೆಯವರು ಜನತೆಗೆ ಸರಿಯಾಗಿ ಸೌಲಭ್ಯ ಕಲ್ಪಿಸದೆ, ಏಕಾಏಕಿ ನೀರಿನ ಕರ ಏರಿಸುವ ಮೂಲಕ ಜನ ಸಾಮಾನ್ಯರ ಮೇಲೆ ಹೊರೆಯಾಗಿಸಿದ್ದಾರೆ. ಅಲ್ಲದೆ ಬಡಾವಣೆಯಲ್ಲಿನ ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ ನಿಂತಲ್ಲಿಯೇ ನಿಂತ ಪರಿಣಾಮ ಸೊಳ್ಳೆ, ಕ್ರೀಮಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ ಎಂದು ಪುರಸಭಾ ಆಡಳಿತ ವೈಖರಿಯನ್ನು ಖಂಡಿಸಿದರು.
ಬಡಾವಣೆಯಲ್ಲಿ ನೀರಿನ ಸಮಸ್ಯೆ ಜತೆಗೆ ಮಹಿಳೆಯರ ಮತ್ತು ಪುರುಷರಿಗೆ ಶೌಚಾಲಯ ಇಲ್ಲದಿರುವುದರಿಂದ ಬಡಾವಣೆ ಪಕ್ಕದಲ್ಲಿಯೇ ಬಯಲು ಶೌಚಾಲಯ ಇದ್ದದ್ದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ, ರೋಗಗಳು ಹರಡಿ ಆರೋಗ್ಯಕ್ಕೆ ಹಾನಿಕಾರಕ ವಾತಾವರಣ ಸೃಷ್ಟಿಯಾಗಿ ಈಗಾಗಲೇ ಕೆಲವರು ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ಆರೋಪಿಸಿದರು.
ನಂತರ ಆಡಳಿತಾಧಿಕಾರಿ ಐ.ಜಿ. ಗದ್ಯಾಳ ಸ್ಥಳಕ್ಕಾಗಮಿಸಿ ಸಂಘಟಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಕಳೆದೆರೆಡು ತಿಂಗಳಿಂದ ಪಟ್ಟಣದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದು ಸತ್ಯ. ಇದಕ್ಕೆ ಕಾರಣ ಪುರಸಭೆ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಕೊಳವೆ ಬಾವಿಗಳಿಂದ ನಿತ್ಯ 20 ಲಕ್ಷ ಕ್ಕೂ ಅಧಿಕ ಲೀಟರ ನೀರು ಸಂಗ್ರಹವಾಗುತ್ತಿತ್ತು. ಆದರೆ ಸತತ ಬರಗಾಲದಿಂದ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಈಗ ಕೇವಲ 25 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು ಇದರಿಂದ ನಿತ್ಯ 6 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತಿದ್ದು, ಅನಿವಾರ್ಯವಾಗಿ ನೀರು ಸರಬರಾಜಿನಲ್ಲಿ ಸಮಸ್ಯೆಯಾಗಿದೆ. ಪಟ್ಟಣದ ಹೊರ ವಲಯದಲ್ಲಿನ ಖಾಸಗಿ ಕೊಳವೆ ಬಾವಿ ಮಾಲಿಕರ ಕೊಳವೆ ಬಾವಿಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ಈಗಾಗಲೇ ಪಟ್ಟಣದ ಹಲವಾರು ವಾರ್ಡ್ಗಳ ಜನತೆಗೆ ಸಮರ್ಪಕ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ. ಕೂಡಲೇ ವಾಜಪೇಯಿ ಬಡಾವಣೆಯ ಜನತೆಗೆ ಸಮರ್ಪಕ ಕುಡಿವ ನೀರಿನ ವ್ಯವಸ್ಥೆಯ ಜತೆಗೆ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಎಂ.ಬಿ. ಸೋಂಪುರ, ಮಾರುತಿ ಚಿಟಗಿ, ರಾಜಮಹಮ್ಮದ ಹಣಗಿ, ರಾಜು ಕಡ್ಲಿಮಟ್ಟಿ, ಮಲ್ಲಿಕಾರ್ಜುನ ಶಿಂದೊಗಿ, ನಜೀರ ನದಾಫ್, ನಾಗರಾಜ ಮಗಜಿ, ತಿರುಪತಿ ಮ್ಯಾಕಲ, ಅಶೋಕ ರಾಯಬಾಗಿ, ಯಮನೂರ ಕಲ್ಗುಡಿ, ಶ್ಯಾಮಣ್ಣ ಮೆಣೆದಾಳ, ಸುರೇಶ ಬೇವಿನಮರದ, ಲೋಕಪ್ಪ ಹೊನ್ನಿಗನೂರ, ಜಮೀಲ ಗೊಡೇಕಾರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

